ನವದೆಹಲಿ: ದಂಡಗಳನ್ನು ಹಿಡಿದ ಮುಸುಕುಧಾರಿಗಳು ದೆಹಲಿಯ ಜೆಎನ್ಯು ಆವರಣ ಪ್ರವೇಶಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ನಡೆಸಿರುವುದಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದ್ದು, ಕಾಲೇಜು ಆವರಣದಲ್ಲಿರುವ ಸದ್ಯದ ಪರಿಸ್ಥಿತಿ ಹಾಗೂ ಘಟನೆ ಕುರಿತು ತಕ್ಷಣ ವರದಿ ಸಲ್ಲಿಸುವಂತೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಜೆಎನ್ಯು ರಿಜಿಸ್ಟ್ರಾರ್ ಬಳಿ ಕೇಳಿದೆ.
ವಿಶ್ವ ವಿದ್ಯಾಲಯದ ಉಪಕುಲಪತಿಗಳ ಬಳಿಯು ಮಾತನಾಡಲಾಗಿದೆ. ಶಾಂತಿ ನಿರ್ವಹಣೆ ಮಾಡಲು ದೆಹಲಿ ಪೊಲೀಸರಿಗೆ ಸೂಚನೆ ನೀಡಿಲಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತ ಕೇಂದ್ರ ಗೃಹಸಚಿವ ಅಮಿತ್ ಷಾ ಕೂಡ ದೆಹಲಿ ಪೊಲೀಸ್ ಅಧಿಕಾರಿಗಳ ಘಟನೆ ಸಂಬಂಧ ತಕ್ಷಣ ವರದಿ ಸಲ್ಲಿಸುವಂತೆ ಕೇಳಿದ್ದಾರೆ.
ಭಾನುವಾರ ರಾತ್ರಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೆಎನ್ಯು ಆವರಣಕ್ಕೆ ಪ್ರವೇಶಿಸಿದ ಗುಂಪೊಂದು ದಂಡಗಳಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಹಲ್ಲೆ ಮಾಡಿದಲ್ಲದೆ, ಕಾಲೇಜು ಆವರಣದ ಆಸ್ತಿಗೂ ಹಾನಿ ಉಂಟುಮಾಡಿದೆ.
ಘಟನೆಯಲ್ಲಿ ಸುಮಾರು 18 ಮಂದಿ ಗಾಯಗೊಂಡಿದ್ದು, ಏಮ್ಸ್ಗೆ ದಾಖಲಿಸಲಾಗಿದೆ. ಜೆಎನ್ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಐಶೆ ಘೋಶ್ ತಲೆಗೆ ಗಂಭೀರ ಗಾಯವಾಗಿದೆ. ಇನ್ನು ಹಲ್ಲೆಯ ಬಗ್ಗೆ ಜೆಎನ್ಯುಎಸ್ಯು ಮತ್ತು ಎಬಿವಿಪಿ ಆರೋಪ ಪತ್ಯಾರೋಪದಲ್ಲಿ ತೊಡಗಿವೆ. ಘಟನೆಯ ಬೆನ್ನಲ್ಲೇ ಜೆಎನ್ಯು ಕ್ಯಾಂಪಸ್ ಹೊರಗೆ ಮತ್ತು ಒಳಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಘಟನೆಯನ್ನು ಖಂಡಿಸಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜೆಎನ್ಯು ವಿದ್ಯಾರ್ಥಿ ಮತ್ತು ಶಿಕ್ಷಕರ ಮೇಲೆ ನಡೆದಿರುವ ಮೃಗೀಯ ದಾಳಿಯನ್ನು ಖಂಡಿಸುತ್ತೇವೆ. ಇಂತಹ ಕೃತ್ಯಗಳನ್ನು ವಿವರಿಸಲು ಯಾವುದೇ ಪದಗಳು ಸಾಲುತ್ತಿಲ್ಲ ಎಂದಿದ್ದಾರೆ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಟ್ವೀಟ್ ಮಾಡಿ ಹಲ್ಲೆಯನ್ನು ಖಂಡಿಸಿದ್ದಾರೆ. ಜೆಎನ್ಯುನಲ್ಲಿ ಏನು ನಡೆದಿದೆ ಎಂಬುದನ್ನು ಚಿತ್ರಗಳಲ್ಲಿ ನೋಡಿದ್ದೇವೆ. ಇದು ನಮ್ಮ ವಿಶ್ವವಿದ್ಯಾಲಯ ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಂಪೂರ್ಣ ತದ್ವಿರುದ್ಧವಾದದ್ದು ಎಂದು ಜರಿದಿದ್ದಾರೆ.
ಹೀಗೆ ಕಾಂಗ್ರೆಸ್, ಬಿಜೆಪಿ ನಾಯಕರು ಸೇರಿದಂತೆ ಅನೇಕರು ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)