ನ್ಯೂಸ್

ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆ: ತೀವ್ರ ಆತಂಕ, ವಿದ್ಯುತ್ ಸಂಪೂರ್ಣ ಕಡಿತ, ಜನರ ಓಡಾಟಕ್ಕೂ ನಿರ್ಬಂಧ!

ಧಾರವಾಡ: ಎಲ್​ಪಿಜಿ ಟ್ಯಾಂಕರ್​ನಿಂದ ಗ್ಯಾಸ್ ಸೋರಿಕೆ ಆಗುತ್ತಿರುವುದರ ಹಿನ್ನೆಲೆಯಲ್ಲಿ ಸ್ಥಳದಲ್ಲಿ ತೀವ್ರ ಆತಂಕದ ವಾತಾವರಣ ಉಂಟಾಗಿದ್ದು, ವಿದ್ಯುತ್ ಸಂಪೂರ್ಣ ಕಡಿತಗೊಳಿಸಿದ್ದಲ್ಲದೆ ಜನರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.

ಧಾರವಾಡ ಜಿಲ್ಲೆಯ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೇಲೂರು ಬಳಿಯ ಅಂಡರ್​ಪಾಸ್​ನಲ್ಲಿ ಎಚ್​ಪಿ ಕಂಪನಿಗೆ ಸೇರಿದ್ದ ಗ್ಯಾಸ್ ಟ್ಯಾಂಕರ್ ಸಿಲುಕಿಕೊಂಡು ಈ ಆತಂಕದ ಪರಿಸ್ಥಿತಿ ಉಂಟಾಗಿದೆ. ಈ ಟ್ಯಾಂಕರ್​ ಬೆಳಗಾವಿಯಿಂದ ಧಾರವಾಡಕ್ಕೆ ಬರುತ್ತಿತ್ತು.

ಧಾರವಾಡ ಹೈಕೋರ್ಟ್ ಬಳಿಯ ಅಂಡರ್ ಪಾಸ್​ನಲ್ಲಿ ಈ ಟ್ಯಾಂಕರ್ ಸಿಲುಕಿ ಗ್ಯಾಸ್ ಲೀಕ್ ಆಗುತ್ತಿರುವ ಕುರಿತು ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿ ಮೇಲೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪೂರ್ಣ ಕಡಿತಗೊಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ಎಚ್​ಪಿ ಕಂಪನಿ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಪ್ರವೃತ್ತರಾಗಿದ್ದಾರೆ.

ಗ್ಯಾಸ್ ಸಂಪೂರ್ಣವಾಗಿ ಹೊರಗೆ ಹೋಗುವವರೆ ಕಾಯಬೇಕಾದ ಅನಿವಾರ್ಯತೆ ಉಂಟಾಗಿದ್ದು, ಯಾರಿಗೂ ಸ್ಥಳದ ಬಳಿ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ಬೇಲೂರು ಕೈಗಾರಿಕಾ ಪ್ರದೇಶವನ್ನು ಗ್ಯಾಸ್​ ಆವರಿಸಿಕೊಂಡಿರುವ ಕಾರಣ ಸುತ್ತಮುತ್ತಲ ವಿದ್ಯುತ್ ಸಂಪರ್ಕ ಸಂಪೂರ್ಣ ಕಡಿತಗೊಳಿಸಲಾಗಿದೆ. ಸುತ್ತಮುತ್ತಲ ಅಂಗಡಿ-ಮುಂಗಟ್ಟುಗಳೂ ಮುಚ್ಚಲ್ಪಟ್ಟಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದಾರೆ. ನಿಧಾನವಾಗಿ ಗ್ಯಾಸ್ ಖಾಲಿ ಆಗಲಾರಂಭಿಸಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.