ವಿದ್ಯಾರ್ಥಿ ಜೀವನದಲ್ಲೇ ಹಣ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಿ 
ನ್ಯೂಸ್

ವಿದ್ಯಾರ್ಥಿ ಜೀವನದಲ್ಲೇ ಹಣ ಉಳಿಸುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿದರೆ ತಿಂಗಳ ಕೊನೆಯಲ್ಲಿ ಟೆನ್ಷನ್ ಇರಲ್ಲ! | Student Money Saving

ವಿದ್ಯಾರ್ಥಿ ಜೀವನದಲ್ಲೇ ಹಣ ಉಳಿಸುವ ಅಭ್ಯಾಸ ಬೆಳೆಸಿಕೊಳ್ಳಿ. ಬಜೆಟ್, ಖರ್ಚಿನ ಲೆಕ್ಕಾಚಾರ, ವಿದ್ಯಾರ್ಥಿ ರಿಯಾಯಿತಿ ಮತ್ತು ಪಾರ್ಟ್‌ಟೈಮ್ ಕೆಲಸದ ಮೂಲಕ ಹಣ ಉಳಿತಾಯ ಮಾಡುವ ಸರಳ ಟಿಪ್ಸ್ ಇಲ್ಲಿವೆ.

Student Money Saving Tips: ಕಾಲೇಜಿಗೆ ಹೋಗೋದು, ಸ್ನೇಹಿತರ ಜತೆ ಸುತ್ತಾಡೋದು, ತಿಂಡಿತಿನಿಸು ತಿನ್ನೋದು, ಸಿನಿಮಾ ನೋಡೋದು… ಹೀಗೆ ವಿದ್ಯಾರ್ಥಿ ಜೀವನದಲ್ಲಿ ಖರ್ಚುಗಳು ಒಂದರ ಹಿಂದೆ ಒಂದರಂತೆ ಬರುತ್ತವೆ. ತಿಂಗಳ ಆರಂಭದಲ್ಲಿ ಕೈತುಂಬಾ ಇದ್ದ ಪಾಕೆಟ್ ಮನಿ, ತಿಂಗಳ ಕೊನೆಗೆ ಎಲ್ಲಿ ಹೋಯ್ತು ಅಂತ ಗೊತ್ತಾಗದ ಪರಿಸ್ಥಿತಿಯೂ ಎದುರಾಗಬಹುದು!

ಆದರೆ, ಹಣ ಉಳಿಸಲು ದೊಡ್ಡ ಸಂಬಳವೇ ಬೇಕೆಂದಿಲ್ಲ. ಕೈಗೆ ಸಿಗುವ ಅಲ್ಪ ಮೊತ್ತವನ್ನು ಸರಿಯಾಗಿ ನಿರ್ವಹಿಸಿದರೂ ಸಾಕು. ವಿದ್ಯಾರ್ಥಿ ಜೀವನದಲ್ಲೇ ಉಳಿತಾಯದ ಅಭ್ಯಾಸ ಬೆಳೆಸಿಕೊಂಡರೆ ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯವಾಗುತ್ತದೆ. ಹಾಗಾದರೆ, ವಿದ್ಯಾರ್ಥಿಗಳು ಸುಲಭವಾಗಿ ಹಣ ಉಳಿಸಲು ಅನುಸರಿಸಬಹುದಾದ ಸರಳ ಟಿಪ್ಸ್ ಯಾವುವು ನೋಡೋಣ.

ಮೊದಲು ತಿಂಗಳ ಬಜೆಟ್ ಸಿದ್ಧಪಡಿಸಿ

ನಿಮಗೆ ತಿಂಗಳಿಗೆ ಪೋಷಕರಿಂದ ಎಷ್ಟು ಪಾಕೆಟ್ ಮನಿ ಸಿಗುತ್ತದೆ ಅಥವಾ ಸ್ಕಾಲರ್‌ಶಿಪ್ ಮೂಲಕ ಎಷ್ಟು ಹಣ ಬರುತ್ತದೆ ಎಂಬುದನ್ನು ಮೊದಲು ಲೆಕ್ಕ ಹಾಕಿ. ನಂತರ ಕಾಲೇಜು ಶುಲ್ಕ, ಪುಸ್ತಕ, ಪ್ರಯಾಣ ಮತ್ತು ಊಟದಂತಹ ಅಗತ್ಯ ಖರ್ಚುಗಳಿಗೆ ಎಷ್ಟು ಹಣ ಬೇಕು ಎಂದು ನಿರ್ಧರಿಸಿ.

ಹಣ ಉಳಿಸಲು ದೊಡ್ಡ ಸಂಬಳವೇ ಬೇಕೆಂದಿಲ್ಲ

ಹೊರಗೆ ಊಟ ಮಾಡುವುದು, ಸಿನಿಮಾ ನೋಡುವುದು, ಬ್ರಾಂಡೆಡ್ ಬಟ್ಟೆ ಖರೀದಿಸುವುದು ಮುಂತಾದ ಖರ್ಚುಗಳನ್ನು ನಿಮ್ಮ ಬಜೆಟ್‌ಗೆ ಅನುಗುಣವಾಗಿ ನಿಯಂತ್ರಿಸಿ. ಹೀಗೆ ಮಾಡಿದರೆ ತಿಂಗಳ ಕೊನೆಯಲ್ಲಿ ಹಣದ ಕೊರತೆ ಎದುರಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಖರ್ಚು ಮಾಡುವ ಪ್ರತಿಯೊಂದು ರೂಪಾಯಿಗೂ ಲೆಕ್ಕವಿರಲಿ

ಚಹಾ, ತಿಂಡಿ, ಜೆರಾಕ್ಸ್, ಆನ್‌ಲೈನ್ ಖರೀದಿ ಹೀಗೆ ಸಣ್ಣಪುಟ್ಟ ಖರ್ಚುಗಳೇ ತಿಂಗಳ ಕೊನೆಯಲ್ಲಿ ದೊಡ್ಡ ಮೊತ್ತವಾಗಬಹುದು. ಹೀಗಾಗಿ, ಪ್ರತಿದಿನ ನೀವು ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂಬುದನ್ನು ಮೊಬೈಲ್‌ನ ನೋಟ್‌ಗಳಲ್ಲಿ ಅಥವಾ ಡೈರಿಯಲ್ಲಿ ಬರೆದಿಡಿ. ವಾರಕ್ಕೊಮ್ಮೆ ಲೆಕ್ಕ ಪರಿಶೀಲಿಸಿ. ಯಾವ ಖರ್ಚು ಅನಗತ್ಯವಾಗಿದೆ ಎಂಬುದು ಅರ್ಥವಾದರೆ ಅದನ್ನು ಕಡಿಮೆ ಮಾಡುವುದು ಸುಲಭ.

ಹಣ ಕೈಗೆ ಬಂದ ತಕ್ಷಣ ಉಳಿತಾಯ ಮಾಡಿ

ಹಣ ಉಳಿಸಲು ತಿಂಗಳ ಕೊನೆಯಲ್ಲಿ ಉಳಿದಿದ್ದನ್ನು ತೆಗೆದಿಡುವ ಬದಲು, ಆರಂಭದಲ್ಲೇ ಉಳಿತಾಯಕ್ಕೆ ಆದ್ಯತೆ ನೀಡಿ. ಉದಾಹರಣೆಗೆ, ತಿಂಗಳಿಗೆ 2,000 ರೂ. ಪಾಕೆಟ್ ಮನಿ ಸಿಗುತ್ತದೆ ಎಂದಿಟ್ಟುಕೊಳ್ಳಿ. ಅದರಲ್ಲಿ ಶೇ.10ರಷ್ಟು ಅಂದರೆ 200 ರೂ. ಅನ್ನು ಮೊದಲೇ ಉಳಿಸಬಹುದು. ನಿಮ್ಮ ಖರ್ಚು ಮತ್ತು ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಉಳಿತಾಯದ ಮೊತ್ತವನ್ನು ನಿರ್ಧರಿಸಿ.

ಇದನ್ನೂ ಓದಿ: ಕನ್ನಡದ ‘ನಡೆದಾಡುವ ವಿಶ್ವಕೋಶ’ ಕಾರಂತರ ಜನ್ಮದಿನ: ಮರೆಯಲಾಗದ ಬಹುಮುಖ ಪ್ರತಿಭೆಗೆ ನಮನ | Dr. Shivarama Karanth

ಪ್ರತಿದಿನ 10 ರೂ. ಉಳಿಸಿದರೂ ತಿಂಗಳಿಗೆ ಸುಮಾರು 300 ರೂ. ಆಗುತ್ತದೆ. ಸಣ್ಣ ಮೊತ್ತವಾದರೂ ನಿಯಮಿತವಾಗಿ ಉಳಿಸುವ ಅಭ್ಯಾಸವೇ ಮುಖ್ಯ.