ಬಾಯ ಮಾತಡಗಿದರೆ ಮಾಯೆಗ
ಪಾಯವಹುದಾ ಮಾಯೆಯಳಿಯಲು
ಬೀಯವಹುದೈ ಮನ; ಮನಸ್ಸಿನ ನೆನಹು ಕೆಟ್ಟಾಗ |
ಈಯಶೇಷವದಡಗೆ ನಿಜ ನಿ
ರ್ವಯ ನಿತ್ಯಾನಂದ ಸಚ್ಚಿ
ತ್ಕಾಯವಹ ಪರಬೊಮ್ಮವದ್ವಯವಾಗಿ ಮೆರೆದಿಹುದು ||
ಈ ಪದ್ಯದ ಸ್ಥೂಲಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಬಾಯಿಯ ಮಾತು ನಿಂತುಹೋದರೆ, ಮಾತಿನ ಮೂಲಕವಾಗಿ ಬೆಳೆಯುವ ಮಾಯೆಗೆ ಹಾನಿಯೇ ಸರಿ. ಮನದಲ್ಲಿ ನೆನಪು ಉಂಟಷ್ಟೆ. ಆ ನೆನಪು ಇಲ್ಲವಾದರೆ ಮನಸ್ಸಿನ ಅಸ್ತಿತ್ವವೇ ಇರುವುದಿಲ್ಲ. ಹೀಗಾದಾಗ, ನಿಜವಾದ ನಿರ್ವಯ, ನಿತ್ಯಾನಂದ ಆತ್ಮಸ್ವರೂಪ ಪರಬ್ರಹ್ಮವು ಅದ್ವೈತವಾಗಿಯೇ ಇರುತ್ತದೆ.’’ ಇದು ಈ ಪದ್ಯದ ಸ್ಥೂಲಾರ್ಥ. ಈ ಪದ್ಯದ ಪೂರ್ವಾರ್ಧದಲ್ಲಿ ಒಂದಿಷ್ಟು ಮರ್ಮಗಳು ಅಡಗಿವೆ. ‘ಮಾಯೆ’ ಎಂಬುದು ಇಲ್ಲಿ ಕಂಡು ಅಲ್ಲಿ ಇಲ್ಲವಾಗುವ ಕವಡುರೂಪ. ನಾವು ‘ಮಾಯೆ’ಯ ಸ್ವರೂಪವನ್ನು ತಿಳಿಯಲಾರೆವು. ಅದು ‘‘ಉಂಟು; ಇಲ್ಲ’’ ಎಂಬ ಕವಡುತನದಲ್ಲಿಯೇ ಇರುತ್ತದೆ! ಮಾತು ಮಾಯೆಯನ್ನು ಬೆಂಬಲಿಸುತ್ತದೆ. ಅದು ಮಾತಿನ ಮೂಲಕವಾಗಿಯೇ ಬೆಳೆಯುತ್ತದೆ. ಆಗ ‘ಮೌನ’ ಆವರಿಸಿದರೆ ಮಾತು ಇಲ್ಲವಾಗುತ್ತದೆ. ಅದೇ ರೀತಿ ಮನಸ್ಸು ಉಂಟು; ಮನಸ್ಸಿನೊಳಗೆ ನೆನಪೂ ಉಂಟು. ಒಂದು ಪಕ್ಷ ನೆನಪುಗಳೇ ಇಲ್ಲವಾದರೆ ಮನಸ್ಸಿನ ಅಸ್ತಿತ್ವ ಉಳಿಯಲು ಸಾಧ್ಯವೆ?
ಈ ಪರಬ್ರಹ್ಮವು ಮಾಯೆಯಿಂದ ಅತೀತವಾದುದು. ಹೀಗಾಗಿ, ಪರಬ್ರಹ್ಮವು ಆನಂದಮಯಿ ಆದುದು! ಹೀಗಾಗಿ ಇದು ಅದ್ವೆ ೖತ. ಎಲ್ಲಿ ಎರಡಿಲ್ಲವೋ ಅದು ಅದ್ವೈತ. ಮಹಲಿಂಗರಂಗನ ಮುಂದಿನ ಮಾತು ಹೀಗಿದೆ:
ಪುಸಿಯ ಮಾಯಾಕಾರ್ಯವೆನಿಸಿಹ
ವಿಷಮವಹ ಮನಸಿನ ವಿಕಲ್ಪದ
ಲೆಸೆದು ತೋರುವ ನಾಮರೂಪಿನ ವಿಸರವಹ ಭೇದ |
ಸಸಿನೆ ಗುರುಮುಖದಿಂದ ತಿಳಿಯಲು
ನಸಿದು ಪೋಪುದು ಸ್ವಪ್ನದಂದದಿ
ಮಿಸುಪ ತೇಜೋರಾಶಿಯಿರ್ದಪುದೇಕರೂಪಿನಲಿ ||
ಈ ಪದ್ಯದ ಸಾಮಾನ್ಯಾರ್ಥವನ್ನು ಮೊದಲಿಗೆ ತಿಳಿಯೋಣ: ‘‘ಈ ಮಾಯಾಕಾರ್ಯವು ಹುಸಿಯಾದುದೇ ಸರಿ. ಇದು ವಿಕೃತ ಮನಸ್ಸಿನ ವಿಕಲತೆಯಿಂದ ತೋರುವ ಹೆಸರಿನ ರೂಪವಾಗಿದೆ. ಈ ಮಾಯೆಯ ಸಮೂಹ ಭೇದವನ್ನು ಗುರುಮುಖದಿಂದ ತಿಳಿದಾಗ ಎಲ್ಲವೂ ಸ್ವಪ್ನದಂತೆ ಮಾಯವಾಗುತ್ತದೆ; ಆಗ ಪ್ರಕಾಶಮಾನವಾದ ತೇಜೋರಾಶಿಯು ಏಕರೂಪವಾಗಿ ಉಳಿಯುತ್ತದೆ.’’ ಈ ಪದ್ಯದಲ್ಲಿ ತೇಜೋರಾಶಿಯಿರ್ದಪುದು + ಏಕರೂಪಿನಲಿ ಎಂದು ಬಿಡಿಸಿಕೊಳ್ಳಬೇಕು. ‘ವಿಷಮವಹ’ ಎಂದರೆ ವಿಕಾರವಾಗುವ ಸ್ವಭಾವ ಎಂದರ್ಥ. ‘ವಿಸರ’ ಎಂಬುದಕ್ಕೆ ಸಮೂಹ ಎಂದು ಅರ್ಥ. ಈ ಪದ್ಯದಲ್ಲಿ ಕೀಲಕದಂಥ ಒಂದು ವಾಕ್ಯವುಂಟು. ‘‘ಭೇದ ನಸಿದು ಪೋಪುದು’’ ಎಂಬುದೇ ಆ ಕೀಲಕವಾಕ್ಯ. ಸಾಧಕನು ಗುರುಮುಖದಿಂದ ಮಾತ್ರ ಮಾಯೆಯ ಕವಡುತನವನ್ನು ತಿಳಿಯಲು ಸಾಧ್ಯ. ಗುರುವಿಲ್ಲದಿದ್ದರೆ ತಿಳಿಯಲಾಗದು! ಸ್ವಪ್ನ-ಜಾಗ್ರತ್-ಸುಷುಪ್ತಿ ಎಂಬುದು ಮೂರು ಅವಸ್ಥೆಗಳುಂಟಷ್ಟೆ. ಸುಷುಪ್ತಿ ಎಂದರೆ ತನಿನಿದ್ರೆ. ಆ ತನಿನಿದ್ರೆಯ ಸ್ವರೂಪದ ಮೂಲಕ ಅದ್ವಯಾನಂದವನ್ನು ಕುರಿತು ಮಹಲಿಂಗರಂಗ ಹೇಳುವುದಿಷ್ಟು: ‘‘ನಾವು ನಿದ್ರಿಸುವಾಗ ಮನಸ್ಸು ಇಲ್ಲದಿದ್ದರೆ ಪೂರ್ಣವಾದ ಆನಂದ ಸಿಗುತ್ತದೆ. ನಿದ್ರೆಯಿಂದ ಎಚ್ಚರಗೊಂಡಾಗ ಮತ್ತೆ ಮನಸ್ಸು ಸಂಸಾರದಲ್ಲಿ ತಲ್ಲೀನವಾಗುತ್ತದೆ. ಹೀಗೆ, ಮನಸ್ಸಿನಿಂದ ಆಗುವ ಸುಖದುಃಖಗಳು ಮನಸ್ಸು ಇಲ್ಲವಾದಾಗ ತೋರಿಬರುವುದಿಲ್ಲ. ಮನಸ್ಸು ನಾಶವಾದರೆ ಅದ್ವೈತಾನಂದ ದೊರೆಯುತ್ತದೆ.’’ ಇದು ಮಹಲಿಂಗರಂಗನ ವಿವಕ್ಷೆ.