ಇಸ್ಲಮಾಬಾದ್: ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ಭಾರಿ ಮಳೆ ಸುರಿಯುತ್ತಿದೆ. ಅದೇ ಸಮಯದಲ್ಲಿ ಭಾರಿ ಪ್ರವಾಹದಿಂದಾಗಿ ಅನೇಕ ಪ್ರದೇಶಗಳು ತೀವ್ರ ಹಾನಿಗೆ ಒಳಗಾಗಿವೆ. ಬೆಳೆ ಹಾನಿ ಮತ್ತು ಇತರ ಆರ್ಥಿಕ ನಷ್ಟಗಳು ಎದುರಾಗಿವೆ. ಆದರೆ, ಈ ಒಂದು ಪ್ರದೇಶದಲ್ಲಿ ಪ್ರವಾಹದಿಂದಾಗಿ ಬಾಲ್ಯ ವಿವಾಹಗಳು ಹೆಚ್ಚಾಗಿವೆ. ಇದನ್ನು ಕೇಳಲು ವಿಚಿತ್ರ ಎನಿಸಿದರು ಇದೇ ಸತ್ಯ. ಪ್ರವಾಹವೂ ಜೀವಕ್ಕೆ ತುಂಬಾ ಅಪಾಯಕಾರಿ ಏನೋ ನಿಜ. ಆದರೆ, ಬಾಲ್ಯ ವಿವಾಹಕ್ಕೂ ಪ್ರವಾಹಕ್ಕೂ ಏನು ಸಂಬಂಧ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಆ ಪ್ರಶ್ನೆಗೆ ಉತ್ತರ ಮುಂದಿದೆ.
ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಪ್ರವಾಹ ಭೀತಿಯಿಂದ ಬಾಲ್ಯ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಕೆಲ ವರ್ಷಗಳಿಂದ ನಶಿಸುತ್ತಿರುವ ಬಾಲ್ಯ ವಿವಾಹಗಳು ಇದೀಗ ಪಾಕಿಸ್ತಾನದಲ್ಲಿ ಮತ್ತೆ ಹೆಚ್ಚಾಗಿದ್ದು, ಆತಂಕ ಮೂಡಿದೆ. ಜುಲೈ ಮತ್ತು ಸೆಪ್ಟೆಂಬರ್ ನಡುವೆ ಪಾಕಿಸ್ತಾನದಲ್ಲಿ ಮಾನ್ಸೂನ್ ಮಳೆಯಾಗುತ್ತದೆ. ಇದು ದೇಶಕ್ಕೆ ತುಂಬಾ ಅನುಕೂಲಕರವಾಗಿದೆ. ಲಕ್ಷಾಂತರ ರೈತರು ಕೃಷಿಗಾಗಿ ಈ ಮುಂಗಾರು ಮಳೆಯನ್ನೇ ಅವಲಂಬಿಸಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದು, ಪ್ರಾಕೃತಿಕ ವಿಕೋಪಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ. ಹೀಗಾಗಿ ಪಾಕ್ನಲ್ಲಿ ಪ್ರವಾಹ ಮತ್ತು ಭೂಕುಸಿತಗಳ ಭೀತಿ ಎದುರಾಗಿದೆ.
2022ರಲ್ಲಿ ಸಂಭವಿಸಿದ ಭಾರಿ ಪ್ರವಾಹದಿಂದ ಪಾಕಿಸ್ತಾನದ ಹಲವು ಭಾಗಗಳು ಇನ್ನೂ ಚೇತರಿಸಿಕೊಂಡಿಲ್ಲ. ಆಸ್ತಿ ನಷ್ಟ ಮತ್ತು ಭಾರಿ ಬೆಳೆ ನಷ್ಟದಿಂದಾಗಿ ಕೃಷಿಯನ್ನು ಅವಲಂಬಿಸಿರುವ ಅನೇಕ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಜೀವನ ನಡೆಸುವುದೇ ಕಷ್ಟವಾಗಿದೆ. ಈ ಕಾರಣದಿಂದ ಬಾಲ್ಯದಲ್ಲೇ ಮಕ್ಕಳ ಮದುವೆ ಮಾಡುತ್ತಿದ್ದಾರೆ. ಅದಕ್ಕೆ ‘ಮಾನ್ಸೂನ್ ಬ್ರೈಡ್’ ಎಂದು ಹೆಸರಿಡಲಾಗಿದೆ. ಅನೇಕ ಪಾಲಕರು ತಮ್ಮ ಮಕ್ಕಳನ್ನು ಶ್ರೀಮಂತರಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ವಯಸ್ಸನ್ನು ಲೆಕ್ಕಿಸದೇ ಹಿರಿಯರ ಜತೆಯೂ ಮದುವೆ ಮಾಡುತ್ತಿದ್ದಾರೆ. ಇದರಿಂದ ಸಿಗುವ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ. ಇತ್ತೀಚೆಗೆ ದಾದು ಜಿಲ್ಲೆಯ ಮಲ್ಹಾ ಎಂಬ ಹಳ್ಳಿಯಲ್ಲಿ 2023ರ ಮುಂಗಾರು ಋತುವಿನಿಂದ ಇಲ್ಲಿಯವರೆಗೆ 45 ಹೆಣ್ಣು ಮಕ್ಕಳಿಗೆ ಬಾಲ್ಯ ವಿವಾಹ ಮಾಡಲಾಗಿದೆ.
ಬಡತನದಿಂದ ಹೊರಬರಲು ತಮ್ಮ ಮಕ್ಕಳಿಗೆ ಮದುವೆ ಮಾಡದೆ ಬೇರೆ ದಾರಿಯಿಲ್ಲ ಎಂದು ಪಾಲಕರು ಹೇಳುತ್ತಿದ್ದಾರೆ. ಇದರ ನಡುವೆ ಬಾಲ್ಯವಿವಾಹವನ್ನು ತಡೆಯಲು ಪಾಕಿಸ್ತಾನದ ಅನೇಕ ಎನ್‌ಜಿಎಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಆದರೆ ಅವು ಎಷ್ಟರ ಮಟ್ಟಿಗೆ ಫಲಿತಾಂಶ ನೀಡುತ್ತವೆ ಮತ್ತು ಎನ್‌ಜಿಒಗಳು ಬಾಲ್ಯವಿವಾಹಗಳನ್ನು ಎಷ್ಟು ಕಾಲ ತಡೆಯಬಲ್ಲವು ಎಂಬುದು ಪ್ರಶ್ನಾರ್ಹವಾಗಿದೆ. (ಏಜೆನ್ಸೀಸ್)