Sunita Williams : ಸುಮಾರು 9 ತಿಂಗಳ ನಂತರ ಮಾರ್ಚ್ 19ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ (ISS) ಭೂಮಿಗೆ ಸುರಕ್ಷಿತವಾಗಿ ಮರಳಿದ ನಾಸಾದ ಗಗನಯಾತ್ರಿಗಳಾದ ಭಾರತೀಯ ಮೂಲದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸದ್ಯ ಆರೋಗ್ಯವಾಗಿದ್ದು, 12 ದಿನಗಳ ಬಳಿಕ ಹೊರ ಜಗತ್ತಿಗೆ ಬಂದಿದ್ದಾರೆ.
12 ದಿನಗಳ ನಂತರ ಹೊರಬಂದು ಮಾಧ್ಯಮ ಸಂದರ್ಶನ ನೀಡಿರುವ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶ ನಿಲ್ದಾಣದಲ್ಲಿನ ಅವರ ಅನುಭವಗಳನ್ನು ಹಂಚಿಕೊಂಡರು. ಅಲ್ಲದೆ, ಭಾರತವು ಬಾಹ್ಯಾಕಾಶದಿಂದ ಹೇಗೆ ಕಾಣುತ್ತದೆ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಭಾರತ ನೋಡಲು ತುಂಬಾ ಅದ್ಭುತವಾಗಿದೆ ಎಂದ ಸುನೀತಾ ವಿಲಿಯಮ್ಸ್, ಬಾಹ್ಯಾಕಾಶದಿಂದ ಹಿಮಾಲಯದ ಮನಮೋಹಕ ನೋಟವನ್ನು ವಿವರಿಸಿ, ನಾವು ಹಿಮಾಲಯದ ಮೇಲೆ ಹೋದಾಗಲೆಲ್ಲ, ನಮಗೆ ಅದ್ಭುತವಾದ ಚಿತ್ರಗಳು ಸಿಕ್ಕವು. ಅದೊಂದು ರೀತಿಯಲ್ಲಿ ಅಲೆಯಂತೆ ಸಂಭವಿಸಿ ಭಾರತಕ್ಕೆ ಹರಿಯುತ್ತಿರುವಂತೆ ಕಂಡಿತು ಎಂದರು.
ತನ್ನ ತಂದೆಯ ತಾಯ್ನಾಡಿನ ಜತೆ ತಮಗಿರುವ ಸಂಪರ್ಕದ ಬಗ್ಗೆ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಬೆಳವಣಿಗೆಯ ಬಗ್ಗೆ ಸುನೀತಾ ಅವರು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು. ನನ್ನ ತಂದೆಯ ತಾಯ್ನಾಡಿಗೆ ಹಿಂತಿರುಗುವ ಭರವಸೆ ನನಗಿದೆ ಎಂದರು. ಅಲ್ಲದೆ, ಆಕ್ಸಿಯಮ್ ಮಿಷನ್‌ನೊಂದಿಗೆ ಭಾರತೀಯ ಗಗನಯಾತ್ರಿಯೊಬ್ಬರು ಬಾಹ್ಯಾಕಾಶಕ್ಕೆ ಹೋಗುವುದರ ಬಗ್ಗೆ ನಾನು ತುಂಬಾ ಉತ್ಸುಕಳಾಗಿದ್ದೇನೆ ಎನ್ನುವ ಮೂಲಕ ಖಾಸಗಿ ಬಾಹ್ಯಾಕಾಶ ಉದ್ಯಮಗಳೊಂದಿಗೆ ಭಾರತದ ಸಹಯೋಗವನ್ನು ಮೆಚ್ಚಿದರು.
ಭಾರತವು ಒಂದು "ಶ್ರೇಷ್ಠ ದೇಶ" ಮತ್ತು "ಅದ್ಭುತ ಪ್ರಜಾಪ್ರಭುತ್ವ" ಎಂದು ಹೊಗಳಿದ ಸುನೀತಾ, ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಪ್ರಗತಿಯನ್ನು ಗಮನಿಸಿ ಅದರ ಪ್ರಯತ್ನಗಳನ್ನು ಬೆಂಬಲಿಸುವ ಇಚ್ಛೆ ಇರುವುದಾಗಿ ತಿಳಿಸಿದರು.
ಇದನ್ನೂ ಓದಿ: ಈ ಮೂರು ರಾಶಿಯಲ್ಲಿ ಜನಿಸಿದವರು ತುಂಬಾ ಸೋಮಾರಿಗಳಾಗಿರುತ್ತಾರಂತೆ! ನಿಮ್ಮದೂ ಇದೇ ರಾಶಿನಾ? Zodiac Signs
2026ರ ವೇಳೆಗೆ ಗಗನಯಾತ್ರಿಗಳನ್ನು ಕಕ್ಷೆಗೆ ಕಳುಹಿಸುವ ಗುರಿಯನ್ನು ಹೊಂದಿರುವ ಗಗನಯಾನ ಕಾರ್ಯಕ್ರಮದ ಮೂಲಕ ಭಾರತವು ಮಾನವ ಬಾಹ್ಯಾಕಾಶ ಹಾರಾಟದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಿದೆ. ಇನ್ನು ವಿಲಿಯಮ್ಸ್ ಅವರ ಹೇಳಿಕೆಗಳು ನಾಸಾ ಮತ್ತು ಇಸ್ರೋ ನಡುವಿನ ಬೆಳೆಯುತ್ತಿರುವ ಸಹಯೋಗವನ್ನು ತೋರಿಸುತ್ತವೆ. ಇದರಲ್ಲಿ ಭೂ-ವೀಕ್ಷಣಾ ಉಪಗ್ರಹವಾದ NISAR ನಂತಹ ಜಂಟಿ ಕಾರ್ಯಾಚರಣೆಗಳೂ ಸೇರಿವೆ.
322 ದಿನಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಕಳೆದ ನಾಸಾದ ಅತ್ಯಂತ ಅನುಭವಿ ಗಗನಯಾತ್ರಿಗಳಲ್ಲಿ ಒಬ್ಬರಾಗಿರುವ ವಿಲಿಯಮ್ಸ್ ಅವರ ಹೇಳಿಕೆಗಳು ಭಾರತದ ಮೇಲಿನ ಅವರ ಪ್ರೀತಿಯನ್ನು ಎತ್ತಿ ತೋರಿಸುವುದಲ್ಲದೆ, ತನ್ನ ಪರಂಪರೆಯ ಬಗ್ಗೆ ಅವರಿಗಿರುವ ಹೆಮ್ಮೆ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಭಾರತದ ಭವಿಷ್ಯದ ಬಗ್ಗೆ ಆಶಾವಾದವನ್ನೂ ಎತ್ತಿ ತೋರಿಸುತ್ತವೆ.
ಅಂದಹಾಗೆ ಕಳೆದ ವರ್ಷ ಜೂನ್ 5ರಂದು ಉಡಾವಣೆಯಾದ ಬೋಯಿಂಗ್ ಬಾಹ್ಯಾಕಾಶ ನೌಕೆ ‘ಸ್ಟಾರ್‌ಲೈನರ್’ ನಲ್ಲಿ ಸುನೀತಾ ಮತ್ತು ವಿಲ್ಮೋರ್ ಐಎಸ್‌ಎಸ್‌ಗೆ ತೆರಳಿದರು. ವೇಳಾಪಟ್ಟಿಯ ಪ್ರಕಾರ, ಅವರು ಕೇವಲ 8 ದಿನಗಳಲ್ಲಿ ಭೂಮಿಯನ್ನು ತಲುಪಬೇಕಿತ್ತು. ಆದಾಗ್ಯೂ, ಸ್ಟಾರ್‌ಲೈನರ್‌ನಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ, ಅವರು 286 ದಿನಗಳ ಕಾಲ ಅಲ್ಲಿಯೇ ಸಿಲುಕಿಕೊಂಡರು. ಇದರ ನಡುವೆ ಸ್ಟಾರ್‌ಲೈನರ್ ಗಗನಯಾತ್ರಿಗಳಿಲ್ಲದೆ ಭೂಮಿಗೆ ಮರಳಿತು. ಅಂದಿನಿಂದ, ಸುನೀತಾ ಮತ್ತು ವಿಲ್ಮೋರ್ ಐಎಸ್‌ಎಸ್‌ನಲ್ಲಿಯೇ ಇದ್ದರು. ಅನೇಕ ಪ್ರಯತ್ನಗಳ ನಂತರ, ಅವರು ಈ ವರ್ಷದ ಮಾರ್ಚ್‌ನಲ್ಲಿ ಸ್ಪೇಸ್‌ಎಕ್ಸ್ ಕ್ರೂ ಡ್ರ್ಯಾಗನ್‌ನಲ್ಲಿ ಐಎಸ್‌ಎಸ್‌ನಿಂದ ಸುರಕ್ಷಿತವಾಗಿ ಭೂಮಿಯನ್ನು ತಲುಪಿದರು. ಅವರೊಂದಿಗೆ ಇತರ ಇಬ್ಬರು ಗಗನಯಾತ್ರಿಗಳು ಸಹ ವಾಹಕ ಹಡಗಿನಲ್ಲಿ ಬಂದರು. ಇದರೊಂದಿಗೆ, ಅವರನ್ನು ಹೂಸ್ಟನ್‌ನ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು ಮತ್ತು ವೀಕ್ಷಣೆಯಲ್ಲಿ ಇರಿಸಲಾಯಿತು. ಇದೀಗ 12 ದಿನಗಳ ನಂತರ ಮೊದಲ ಬಾರಿಗೆ ಹೊರ ಪ್ರಪಂಚಕ್ಕೆ ಬಂದಿದ್ದಾರೆ. (ಏಜೆನ್ಸೀಸ್)