ವಾಷಿಂಗ್ಟನ್: ಚೀನಾದ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಕರೊನಾ ವೈರಸ್ನಿಂದ ಮೃತಪಟ್ಟವರ ನಿಖರ ಮಾಹಿತಿಯನ್ನು ಚೀನಾ ದೇಶ ನೀಡುತ್ತಿಲ್ಲ. ಬೀಜಿಂಗ್ ಆಡಳಿತ ಜಗತ್ತಿನ ಎದುರು ಮರೆಮಾಚುತ್ತಿದೆ. ಅಮೆರಿಕ ಗುಪ್ತಚರ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಅಂಕಿಅಂಶಗಳಿಗೂ, ಚೀನಾ ನೀಡುತ್ತಿರುವ ಸಂಖ್ಯೆಗೂ ತಾಳೆಯಾಗುತ್ತಿಲ್ಲ ಎಂದು ಟ್ರಂಪ್ ಸರ್ಕಾರದ ಶಾಸಕರು ಧ್ವನಿ ಎತ್ತಿದ್ದರು.
ಅದನ್ನು ಒಪ್ಪಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚೀನಾ ಕರೊನಾ ವೈರಸ್ನಿಂದ ಮೃತಪಟ್ಟವರ ಸಂಖ್ಯೆಯನ್ನು ನೀಡಿದೆ. ಆದರೆ ಅದು ನಿಖರವಾಗಿದೆ ಎಂದು ನಾವು ನಂಬುವುದು ಹೇಗೆ? ತುಂಬ ಕಡಿಮೆ ಸಂಖ್ಯೆಯನ್ನು ತೋರಿಸುತ್ತಿದ್ದಾರೆ ಎನ್ನಿಸುತ್ತದೆ ಎಂದು ಹೇಳಿದರು.
ಚೀನಾದೊಂದಿಗೆ ಅಮೆರಿಕ ಸಂಬಂಧ ಉತ್ತಮವಾಗಿದೆ. ಅಧ್ಯಕ್ಷ ಕ್ಸಿ ಜಿನ್ಪಿಂಗ್ರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ಸಂಬಂಧ ಹೀಗೆ ಮುಂದುವರಿಯಲಿದೆ ಎಂದು ಟ್ರಂಪ್ ಒತ್ತಿ ಹೇಳಿದರು.
ಅಮೆರಿಕ ಸೇನೆಯೇ ಕರೊನಾ ವೈರಸ್ ತಂದು ಚೀನಾದಲ್ಲಿ ಹಾಕಿದೆ ಎಂದು ಚೀನಾ ಆರೋಪ ಮಾಡಿತ್ತು. ಅದಾದ ಬಳಿಕ ಡೊನಾಲ್ಡ್ ಟ್ರಂಪ್ ಕಿಡಿಕಾರಿದ್ದರು. ಚೀನಿ ವೈರಸ್ ಎಂದೇ ಕರೆಯಲು ಪ್ರಾರಂಭ ಮಾಡಿದ್ದರು. ಅಂದಿನಿಂದಲೂ ಇವೆರಡೂ ದೇಶಗಳ ನಡುವಿನ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಿದೆ.
ಅಮೆರಿಕ ಗುಪ್ತಚರ ಇಲಾಖೆ ಬೀಜಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಚೀನಾದಲ್ಲಿ ಕರೊನಾ ವೈರಸ್ನಿಂದ ಆಗಿರುವ ಸಾವಿನ ಬಗ್ಗೆ ಪೂರ್ತಿಯಾಗಿ ಏನನ್ನೂ ಹೇಳುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿಖರ ಸಂಖ್ಯೆ ಹೇಳುತ್ತಿಲ್ಲ ಎಂದು ವರದಿ ನೀಡಿದೆ.
ಚೀನಾದ ವುಹಾನ್ನಲ್ಲಿ 2019ರಿಂದಲೇ ಕರೊನಾ ವೈರಸ್ ಪ್ರಾರಂಭವಾಗಿದೆ. ಬುಧವಾರ (ಏ.1)ದವರೆಗೆ 3316 ಮಂದಿ ಕರೊನಾ ವೈರಸ್ನಿಂದ ಮೃತಪಟ್ಟಿದ್ದಾರೆ, 82,361 ಜನರಲ್ಲಿ ಸೋಂಕು ದೃಢಪಟ್ಟಿದೆ ಎಂದು ಚೀನಾ ಹೇಳಿದೆ.
ಹಾಗೇ ಅಮೆರಿಕದಲ್ಲಿ ಇದುವರೆಗೆ 2,06,207 ಜನರಲ್ಲಿ ಸೋಂಕು ದೃಢಪಟ್ಟಿದೆ. 4,542 ಮಂದಿ ಮೃತಪಟ್ಟಿದ್ದಾರೆ.
ಟ್ರಂಪ್ ಅಷ್ಟೇ ಅಲ್ಲದೆ ರಿಪಬ್ಲಿಕನ್ ಸೆನೆಟರ್ ಬೆನ್ ಸಾಸ್ಸೆ ಕೂಡ ಚೀನಾ ವಿರುದ್ಧ ಹರಿಹಾಯ್ದಿದ್ದಾರೆ. ಬೀಜಿಂಗ್ ಜಗತ್ತಿನೆದುರು ಪ್ರಸ್ತುತ ಪಡಿಸುತ್ತಿರುವ ಸಾವಿನ ಸಂಖ್ಯೆಯನ್ನು ಡಸ್ಟ್ಬಿನ್ಗೆ ಹಾಕಬೇಕು. ಕರೊನಾ ವೈರಸ್ನಿಂದ ಅಮೆರಿಕದಲ್ಲಿ ಚೀನಾಕ್ಕಿಂತ ಜಾಸ್ತಿ ಸಾವಾಗಿದೆ ಎಂಬ ವರದಿ ಸುಳ್ಳು. ಚೀನಾದಲ್ಲೇ ಜಾಸ್ತಿ ಜನ ಸತ್ತಿದ್ದಾರೆ. ಆ ದೇಶ ಮುಚ್ಚಿಡುತ್ತಿದೆ ಎಂದು ಹೇಳಿದ್ದಾರೆ.
ಅವರಂತೆ ಅನೇಕರ ಶಾಸಕರು, ಪ್ರಮುಖರು ಚೀನಾ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್)