ನ್ಯೂಸ್

ಪ್ರಿಯಾಂಕಾ ಗಾಂಧಿ ಬಟ್ಟೆ ಹಿಡಿದ ಯುಪಿ ಪೊಲೀಸ್​ ವಿರುದ್ಧ ಹರಿಹಾಯ್ದ ಬಿಜೆಪಿ ನಾಯಕಿ..!

ಮುಂಬೈ: ಗ್ಯಾಂಗ್​ರೇಪ್​ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ಬರುವಾಗ ಉತ್ತರ ಪ್ರದೇಶ ಮತ್ತು ದೆಹಲಿ ಗಡಿಯಲ್ಲಿ ಪೊಲೀಸರು ಮತ್ತು ಕಾಂಗ್ರೆಸ್​ ಕಾರ್ಯಕರ್ತರ ನಡುವೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಬಟ್ಟೆಯನ್ನು ಹಿಡಿದು ಎಳೆದಾಡಿದ ಪೊಲೀಸ್​ ವಿರುದ್ಧ ಬಿಜೆಪಿ ನಾಯಕಿಯೊಬ್ಬರು ಹರಿಹಾಯ್ದಿದ್ದಾರೆ.

ಮಹಿಳಾ ರಾಜಕಾರಣಿಯ ಬಟ್ಟೆ ಮೇಲೆ ಕೈ ಹಾಕಲು ಆ ಪೊಲೀಸ್​ಗೆ ಎಷ್ಟು ಧೈರ್ಯವಿರಬೇಕು? ಪೊಲೀಸರು ಯಾವಾಗಲೂ ತಮ್ಮ ಮಿತಿಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕೆಂದು ಮಹಾರಾಷ್ಟ್ರ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್​ ಅವರು ಆಕ್ರೋಶಯುಕ್ತ ಟ್ವೀಟ್​ ಮಾಡಿದ್ದಾರೆ. ಅಲ್ಲದೆ, ಬಟ್ಟೆ ಹಿಡಿದ ಪೊಲೀಸ್​ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಆಗ್ರಹಿಸಿದ್ದಾರೆ.

ಇದೀಗ ಚಿತ್ರಾ ವಾಘ್​ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಬೆಂಬಲ ನೀಡಿದ್ದು, ಕಳೆದ ವರ್ಷ ಕಾಂಗ್ರೆಸ್​ನಿಂದ ಬಿಜೆಪಿಗೆ ಹೋದರೂ ತಮ್ಮ ಸಂಸ್ಕಾರವನ್ನು ಇನ್ನು ಮರೆತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂದಹಾಗೆ ಗಲಾಟೆಯ ನಡುವೆಯೂ ಪ್ರಿಯಾಂಕಾ ಗಾಂಧಿ ಎರಡನೇ ಬಾರಿಯ ಪ್ರಯತ್ನದಲ್ಲಿ ತಮ್ಮ ಸಹೋದರ ರಾಹುಲ್​ ಗಾಂಧಿಯೊಂದಿಗೆ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. (ಏಜೆನ್ಸೀಸ್​)