ನ್ಯೂಸ್

ಪಾಕ್​ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದ ರೊನಾಲ್ಡೊ, ಮೆಸ್ಸಿ? ಇಲ್ಲಿದೆ ವಿಡಿಯೋ ಅಸಲಿಯತ್ತು!

ಪಾಕಿಸ್ತಾನ: ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗಳು ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಫ್ರೆ.09ರಂದು ಫಲಿತಾಂಶ ಪ್ರಕಟವಾಯಿತು. ರಿಸಲ್ಟ್​​ ಹೊರಬಿದ್ದ ಬಳಿಕ ಪಾಕ್​ನಲ್ಲಿ ಭಾರೀ ಗೊಂದಲಗಳು ಹುಟ್ಟಿಕೊಂಡಿದೆ.

ಚುನಾವಣಾ ಫಲಿತಾಂಶ ಪ್ರಕಟವಾಗಿ ಅತಂತ್ರ ಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ, ಜೈಲು ಸೇರಿದ್ದ ಪಾಕ್​ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ಗೆ ಜಾಮೀನು ಮಂಜೂರು ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಸ್ಟಾರ್​ ಕ್ರೀಡಾಪಟುಗಳಾದ ರೊನಾಲ್ಡೊ, ಮೆಸ್ಸಿ ಮತ್ತು ನೇಮರ್​ ಈ ಚುನಾವಣೆಯಲ್ಲಿ ಭಾಗವಹಿಸಿ, ಮತ ಹಾಕಿದ್ದಾರೆ ಎಂಬ ಸುದ್ದಿ ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದೆ. ಆದ್ರೆ, ಅಸಲಿ ಸಂಗತಿ ಹೀಗಿದೆ.

2024ರ ಸಾರ್ವತ್ರಿಕ ಚುನಾವಣೆಯ ಮತದಾನದ ವೇಳೆ ಪಾಕಿಸ್ತಾನದ ಕೆಲವು ಮತದಾರರು ಫುಟ್‌ಬಾಲ್ ಲೆಜೆಂಡ್​ಗಳಾದ ಕ್ರಿಸ್ಟಿಯಾನೋ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ನೇಮರ್ ಜೂನಿಯರ್ ಹೆಸರಿನಲ್ಲಿ ತಮ್ಮ ಮತವನ್ನು ಉಲ್ಲಾಸದಿಂದ ಚಲಾಯಿಸಿದ್ದಾರೆ. ಸ್ಟಾರ್ ಆಟಗಾರರ ಹೆಸರಿನಲ್ಲಿ ಮತ ಹಾಕಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ವೀಡಿಯೋವೊಂದರಲ್ಲಿ, ಬ್ಯಾಲೆಟ್ ಪೇಪರ್‌ಗಳ ಮೇಲೆ ಮೂರು ಫುಟ್‌ಬಾಲ್‌ ಆಟಗಾರರ ಹೆಸರನ್ನು ಬರೆದಿದ್ದು, ಅವರ ತಂದೆಯ ಹೆಸರನ್ನು ಕೂಡ ಮತಪತ್ರದಲ್ಲಿ ನಮೂದಿಸಿರುವುದು ಕಂಡುಬಂದಿದೆ.

339 ಸ್ಥಾನಗಳ ಪೈಕಿ 338 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶುಕ್ರವಾರ ರಾತ್ರಿ ವೇಳೆಗೆ ಇಮ್ರಾನ್‌ ಬೆಂಬಲಿತ ಅಭ್ಯರ್ಥಿಗಳು 90 ಕ್ಷೇತ್ರಗಳಲ್ಲಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಿದರೆ, ನವಾಜ್ ಷರೀಫ್‌ ಪಕ್ಷ 71, ಬಿಲಾವಲ್‌ ಭುಟ್ಟೋ ಅವರ ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿ 53 ಸ್ಥಾನಗಳಲ್ಲಿ ವಿಜಯ ದಾಖಲಿಸಿದೆ. ಇತರ ಪಕ್ಷಗಳಿಂದ 27 ಮಂದಿ ಜಯಗಳಿಸಿದ್ದಾರೆ,(ಏಜೆನ್ಸೀಸ್).