ಬೆಂಗಳೂರು: ಬಂಡೀಪುರ ಅರಣ್ಯದಲ್ಲಿ ಕೇರಳದ ಮೂವರು ಆರೋಪಿಗಳು ಜಿಂಕೆ ಬೇಟೆಯಾಡಿದ್ದ ಪ್ರಕರಣದ ವಿಚಾರಣೆಯನ್ನು 16 ವರ್ಷವಾದರೂ ಮುಂದುವರಿಸುತ್ತಿರುವ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಜತೆಗೆ, ವಿಚಾರಣಾಧೀನ ನ್ಯಾಯಾಲಯಕ್ಕೆ ಮೂರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ
ಆದೇಶಿಸಿದೆ.
ಕೇರಳದ ಅಬ್ದುಲ್ ರೆಹಮಾನ್, ಮೊಹಮ್ಮದ್ ಕುಟ್ಟಿ, ಅಬ್ದುಲ್ ಮಜೀದ್ ಅವರು ಗುಂಡ್ಲುಪೇಟೆಯ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿನ ವಿಚಾರಣಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿತು.
ಪ್ರಕರಣವು 2008ರಲ್ಲಿ ಸಂಭವಿಸಿದೆ. 2024ರಲ್ಲಿ ನಾವಿದ್ದೇವೆ. ಪ್ರಕರಣ ಇನ್ನೂ ವಿಚಾರಣಾ ಹಂತದಲ್ಲಿದೆ. ಆರೋಪಿಗಳು ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಅರ್ಜಿದಾರರಿಗೆ ಯಾವುದೇ ರಕ್ಷಣೆ ನೀಡಲಾಗದು. ವಿಚಾರಣಾಧೀನ ನ್ಯಾಯಾಲಯವು ಮೂರು ತಿಂಗಳಲ್ಲಿ ಪ್ರಕರಣದ ಅರ್ಜಿ ಇತ್ಯರ್ಥಪಡಿಸಬೇಕು. ಅರ್ಜಿದಾರರು ವಿಚಾರಣೆಗೆ ಸಹಕರಿಸಬೇಕು ಎಂದು ಪೀಠವು ಹೇಳಿದೆ.
ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್, 2008ರಲ್ಲಿ ಅರ್ಜಿದಾರರು ಬಂಡೀಪುರ ಅರಣ್ಯದಲ್ಲಿ ಜಿಂಕೆ ಬೇಟೆಯಾಡಿ ಕೈ ಮತ್ತು ಕಾಲು ಅದೇ ಜಾಗದಲ್ಲಿ ಬಿಟ್ಟು ಮಾಂಸವನ್ನು ಕೊಂಡೊಯ್ದಿದ್ದರು. ಬಳಿಕ ಆರೋಪಿಗಳು ಕೇರಳದ ಸುಲ್ತಾನ್ ಬತ್ತೇರಿಯಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಅವರನ್ನು ಪ್ರಶ್ನಿಸಿ ಮಾಹಿತಿ ಕಲೆಹಾಕಿದ ಬಳಿಕ ಆರೋಪಿಗಳನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ಆರೋಪ ನಿಗದಿಗೊಳಿಸಿ, ಸಾಕ್ಷಿ ದಾಖಲಿಸುವ ಹಂತದಲ್ಲಿ ಪ್ರಕರಣವಿದೆ. ಅವರು ನ್ಯಾಯಾಲಯದ ಮುಂದೆ ಹಾಜರಾಗುತ್ತಿರಲಿಲ್ಲ. ಪ್ರತಿ ಬಾರಿ ಸಮಯ ತೆಗೆದುಕೊಂಡಿದ್ದಾರೆ ಎಂದರು.
ಈ ವೇಳೆ ಪ್ರತಿಕ್ರಿಯಿಸಿದ ಪೀಠವು, ಏನು ಎರಡು ಕಾಲು? ಅದು ಪ್ರಾಣಿ, ಏನಿದು ಇಷ್ಟು ಉಪೇಕ್ಷೆಯಿಂದ ಎರಡು ಕಾಲು ಮಾತ್ರ ಬಿಟ್ಟೋಗಿರೋದು ಎಂದು ಹೇಳುತ್ತೀರಿ. ಕಾಲು ಕಟ್ ಮಾಡಿ, ದೇಹವನ್ನು ಸುಲ್ತಾನ್ ಬತ್ತೇರಿಗೆ ತೆಗೆದುಕೊಂಡು ಹೋಗಿದ್ದೀರಿ. ಎರಡು ಕಡೆ ಪ್ರಕರಣ ದಾಖಲಾಗಿದೆ. ತೆಗೆದುಕೊಂಡು ಹೋದ ಮಾಂಸ ತಿಂದಿರಾ? ಜಿಂಕೆಯ ಮಾಂಸವೇ ಏಕೆ ಬೇಕಿತ್ತು? ಪ್ರಕರಣ ಯಾವ ಹಂತದಲ್ಲಿದೆ? ಎಂದು ಕೇಳಿತು.
ಸರ್ಕಾರದ ಸಮರ್ಥನೆಯಿಂದ ಅತೃಪ್ತಿಗೊಂಡ ಪೀಠವು 16 ವರ್ಷ ಸಮಯ ಏಕೆ ತೆಗೆದುಕೊಂಡಿದ್ದೀರಿ? ಇಷ್ಟು ದೀರ್ಘಾವಧಿ ಏಕೆ? ಒಂದು ತಿಂಗಳಲ್ಲಿ ಇತ್ಯರ್ಥ ಮಾಡಲು ಅಧೀನ ನ್ಯಾಯಾಲಯಕ್ಕೆ ಆದೇಶಿಸಲಾಗುವುದು. ನೀವು ನ್ಯಾಯಾಲಯದ ಮುಂದೆ ಹಾಜರಾಗದಿದ್ದರೆ ಆದೇಶ ಮಾಡಲಾಗುವುದು ಎಂದು ಖಾರವಾಗಿ ಹೇಳಿತು
ಕೇಸ್ ಇತ್ಯರ್ಥಕ್ಕೆ ಇಷ್ಟು ವರ್ಷ ಬೇಕೆ?
ಅರಣ್ಯ ಅಪರಾಧವನ್ನು ಇತ್ಯರ್ಥ ಮಾಡಲು ಇಷ್ಟು ವರ್ಷ ಬೇಕೆ ? ಅದು 16 ವರ್ಷ . ಅಷ್ಟು ಅವಧಿ ಏಕೆ ತೆಗೆದುಕೊಂಡಿರಿ? ಹೀಗಾದರೆ, ಆರೋಪಿಗಳು ನಿರ್ಭಿತಿಯಿಂದ ಓಡಾಡಿಕೊಂಡಿರುತ್ತಾರೆ. ಯಾರನ್ನಾದರೂ ಶಿಕ್ಷೆಗೆ ಗುರಿಯಾಗುವಂತೆ ಮಾಡಬೇಕಾದರೆ, ಬೇಗ ಮಾಡಿ. 16 ವರ್ಷ ಒಂದು ಪ್ರಕರಣ ತಳ್ಳುತ್ತಾ ಕುಳಿತರೆ ಹೇಗೆ? 2008ರಲ್ಲಿ ಜಿಂಕೆ ಕೊಂದಿರುವುದಕ್ಕೆ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ, 2024ರಲ್ಲಿ ಅದರ ವಿಚಾರಣೆ ಎಂದರೆ ಹೇಗೆ? ಅರ್ಜಿದಾರರು ನ್ಯಾಯಾಲಯದ ಮುಂದೆ ಬಂದಿಲ್ಲ ಎಂದು ಎಷ್ಟು ವರ್ಷ ಕಾಯುತ್ತೀರಿ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.