ನ್ಯೂಸ್

'ಸುಳ್ಳು ಹೇಳಿ ಸೂರು ಲೂಟಿ ಹೊಡೆಯಬೇಡಿ...': ವಿಜಯವಾಣಿ ಫೋನ್​ ಇನ್​ನಲ್ಲಿ ಸಚಿವ ವಿ. ಸೋಮಣ್ಣ

ಬೆಂಗಳೂರು: ಇಂದು ವಿಜಯವಾಣಿ ಕಚೇರಿಯಲ್ಲಿ ನಡೆದ ಫೋನ್​ ಇನ್​ ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ.ಸೋಮಣ್ಣ ಪಾಲ್ಗೊಂಡು, ರಾಜ್ಯದ ವಿವಿಧೆಡೆಯಿಂದ ಕರೆ ಮಾಡಿ ಸಮಸ್ಯೆ ಹೇಳಿಕೊಂಡವರಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು.

ಇಡೀ ರಾಜ್ಯದಲ್ಲಿ ಮನೆ ಇಲ್ಲದವರಿಗಾಗಿಯೇ ಮನೆಗಳನ್ನು ಕಟ್ಟಿಸುತ್ತಿದ್ದೇವೆ. ಯಾರೂ ಹೆದರುವ ಅಗತ್ಯವಿಲ್ಲ. ಒಂದರಿಂದ-ಎರಡು ಲಕ್ಷ ರೂ.ಕಟ್ಟಬೇಕಾಗಬಹುದು. ಅದಕ್ಕೂ ಸಹ ಜನರಿಗೆ ಅನುಕೂಲವಾಗುವಂತೆ ಬ್ಯಾಂಕಿಗ್​ ವ್ಯವಸ್ಥೆ ಮಾಡಲಾಗಿದೆ. ಏನೇ ಸಮಸ್ಯೆಯಿದ್ದರೂ ನಮ್ಮ ಮನೆಗೇ ಬರಬಹುದು. ಬೇರೆ ಜಿಲ್ಲೆ, ತಾಲೂಕುಗಳವರ ವಸತಿ ಸಮಸ್ಯೆಯನ್ನು ಆಯಾ ಶಾಸಕರ ಮೂಲಕವೇ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ವಸತಿ ಸಚಿವನಾಗಿ ಈ ವ್ಯವಸ್ಥೆಯನ್ನು ಒಂದು ಹಂತಕ್ಕೆ ತಂದಿದ್ದೇನೆ. 10 ವರ್ಷಗಳಲ್ಲಿ ಮಾಡಬೇಕಾದ ಕೆಲಸವನ್ನು 8 ತಿಂಗಳಲ್ಲಿ ಮುಗಿಸಿದ್ದೇನೆ. ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಸೂರು ಇಲ್ಲದವರ ಸಂಖ್ಯೆ ತುಂಬ ಇದೆ. ಹಾಗೇ, ಮನೆ ಇಟ್ಟುಕೊಂಡು ಲೂಟಿ ಮಾಡುವವರ ಸಂಖ್ಯೆಯೂ ಮಿತಿ ಮೀರಿದೆ. ಅದರ ಬಗ್ಗೆ ಬೇಸರವಿದೆ. ಮನೆಗಾಗಿ ಯಾರೂ ಸುಳ್ಳು ಹೇಳಬೇಡಿ ಎಂದು ಸಚಿವರು ತಿಳಿಸಿದರು. ಮನೆಯಿಲ್ಲ, ನಮಗೂ ಮನೆ ಬೇಕು ಎಂಬ ಹತ್ತಾರು ಮನವಿಗಳಿಗೆ ಸ್ಪಂದಿಸಿ, ನಿಮ್ಮ ಹೆಸರು ಬರೆದು ಕಳಿಸಿ, ನೀವೇ ಬನ್ನಿ, ನಿಮ್ಮ ಎಂಎಲ್​ಎ ಬಳಿ ಮಾತನಾಡುತ್ತೇನೆ ಎಂದು ಅವರಿಗೆ ಭರವಸೆ ನೀಡಿದರು.

ಕ್ಲಿಯರ್​ ಮಾಡಿಸುತ್ತೇನೆ..

ನಾನು ವಾಜಪೇಯಿ ನಗರ ಯೋಜನೆಯಯಡಿ ಮನೆಗೆ ಅರ್ಜಿ ಹಾಕಿದ್ದೆ. ಆಗ ಬಂದು ಫೋಟೋ ತೆಗೆದುಕೊಂಡು ಹೋಗಿದ್ದರು. ಆದರೆ ಇದುವರೆಗೂ ಮನೆಯೂ ಇಲ್ಲ, ಹಕ್ಕುಪತ್ರವೂ ಇಲ್ಲ ಎಂದು ಗಂಗಾವತಿಯಿಂದ ಕರೆ ಮಾಡಿದ ಕೃಷ್ಣ ಎಂಬುವರು ಹೇಳಿದರು.

ಅದಕ್ಕೆ ಉತ್ತರಿಸಿದ ಸಚಿವರು, ನಾನು ಇತ್ತೀಚೆಗೆ ಕೊಪ್ಪಳಕ್ಕೆ ಬಂದಿದ್ದೆ. ಶೀಘ್ರದಲ್ಲೇ ಗಂಗಾವತಿಗೆ ಬರುವವನಿದ್ದೇನೆ. ನಿಮ್ಮ ಶಾಸಕರ ಬಳಿ ಮಾತನಾಡುತ್ತೇನೆ. ಮನೆ ಹಂಚಿಕೆ ಮಾಡಿಸುತ್ತೇನೆ ಎಂದು ಹೇಳಿದರು.

ವಸತಿ ಸಚಿವರೊಂದಿಗೆ ನಡೆದ ಫೋನ್​ ಇನ್ ಕಾರ್ಯಕ್ರಮದ ಸಮಗ್ರ ವರದಿಗಾಗಿ ಶುಕ್ರವಾರದ (ಜೂನ್​ 5) ವಿಜಯವಾಣಿ ಪತ್ರಿಕೆ ಓದಿ.