ಬೆಂಗಳೂರು: ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ಆತ್ಮಹತ್ಯೆ ಪ್ರಕರಣದಲ್ಲಿ ಪತಿ ಮತ್ತು ಸಹೋದರಿಯರಿಗೆ 8 ವರ್ಷ ಜೈಲು ಶಿಕ್ಷೆ ವಿಧಿಸಿ 71ನೇ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಸಿ.ಕೆ.ಅಚ್ಚುಕಟ್ಟು ನಿವಾಸಿಗಳಾದ ವೆಂಕಟೇಶ್ ಮತ್ತು ಈತನ ತಾಯಿ ನಾಗರತ್ನ, ಸಹೋದರಿಯಾದ ಸರಸ್ವತಿ ಮತ್ತು ಸುನಿತಾ ಅಪರಾಧಿಗಳು. 71ನೇ ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶ ಬಾಲಚಂದ್ರ ಭಟ್ ಅವರು ತೀರ್ಪು ನೀಡಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಎಚ್.ಆರ್. ಸತ್ಯವತಿ ವಾದ ಮಂಡಿಸಿದ್ದರು.
2015ರಲ್ಲಿ ಕವಿತಾ ಮತ್ತು ವೆಂಕಟೇಶ್ ಮದುವೆ ಆಗಿದ್ದರು. ವಿವಾಹ ಸಂದರ್ಭದಲ್ಲಿ ವರದಕ್ಷಿಣೆ ರೂಪದಲ್ಲಿ ಚಿನ್ನಾಭರಣ, ದ್ವಿಚಕ್ರ ವಾಹನ ಪಡೆದುಕೊಂಡಿದ್ದ ವೆಂಕಟೇಶ್ ಕುಟುಂಬ ಮತ್ತೆ ತವರು ಮನೆಯಿಂದ ಹಣ ತರುವಂತೆ ಕವಿತಾಗೆ ಒತ್ತಾಯ ಮಾಡುತ್ತಿದ್ದರು.
ಕವಿತಾ ನಿರಾಕರಿಸಿದಾಗ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದರು. ನೊಂದ ಕವಿತಾ, 2015ರ ನ.22ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಸಿ.ಕೆ.ಅಚ್ಚುಕಟ್ಟು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ನೀಡಿದೆ.