ನ್ಯೂಸ್

ಸದನಗಳು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ವೇದಿಕೆಯಾಗಬಾರದು

ಬೆಂಗಳೂರು: ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳು ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆ ಆಗಬಾರದು. ಜನಸಾಮಾನ್ಯರ ಸಮಸ್ಯೆಗಳ ಚರ್ಚೆಯಾಗಿ ಪರಿಹಾರ ಕಂಡುಕೊಳ್ಳುವ ಅತೀ ದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ ಎಂದು ಲೋಕಸಭೆ ಸಭಾಧ್ಯಕ್ಷ ಓಂ ಬಿರ್ಲಾ ಅಭಿಪ್ರಾಯಪಟ್ಟಿದ್ದಾರೆ.

ವಿಧಾನಸೌಧ ಮುಂಭಾಗ ಕಾಮನ್‌ವೆಲ್ತ್ ಸಂಸದೀಯ ಸಂಘ ಭಾರತ ವಿಭಾಗದ 11ನೇ ಸಮ್ಮೇಳನವನ್ನು ಆಯೋಜನೆ ಮಾಡಲಾಗಿತ್ತು. ಇದರ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ವಿಷಯಗಳು ವಿಭಿನ್ನ ಇರಬಹುದು. ವಿಚಾರ ಮಂಥನಕ್ಕೆ ಇರುವ ವೇದಿಕೆಯೇ ವಿಧಾನಸಭೆ, ರಾಜ್ಯಸಭೆ, ಲೋಕಸಭೆಗಳು. ಆದರೆ, ಇತ್ತೀಚೆಗೆ ಚರ್ಚೆಯ ಗೌರವ ಕಳೆದುಕೊಳ್ಳುತ್ತಿದೆ. ಇದನ್ನು ಎತ್ತಿ ಹಿಡಿಯಬೇಕಿದೆ. ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ದೇಗುಲ ಎಂಬ ಭಾವನೆಯಿಂದ ಪ್ರವೇಶಿಸಬೇಕು. ನಾವು ಜನರ ಪ್ರತಿನಿಧಿಗಳು ಅವರ ಅಪೇಕ್ಷೆ ಮತ್ತು ಆಕಾಂಕ್ಷೆಗಳನ್ನು ಸದನದಲ್ಲಿ ಮಂಡಿಸಿ ಪರಿಹಾರ ಕಂಡುಕೊಳ್ಳುವ ಜವಾಬ್ದಾರಿಯನ್ನು ನಮಗೆ ಕೊಟ್ಟಿದ್ದಾರೆ.

ಸುಗಮವಾಗಿ ಕಾರ್ಯಕಲಾಪ ನಡೆಸಬೇಕೆಂಬುದು ಕಾಮನ್‌ವೆಲ್ತ್ ಸಂಸದೀಯ ಸಂಘದ ಆಶಯವಾಗಿದೆ ಎಂದರು. ಚರ್ಚೆಯಿಂದ ದೇಶದ ಮುಂದೆ ಬರುವ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಶಾಸನ ರಚನೆಯಲ್ಲಿ ಪಾರದರ್ಶಕತೆ ಇದೆ. ಆದರಿಂದ ಚರ್ಚೆ, ಸಂವಾದಕ್ಕಾಗಿಯೇ ಇರುವ ಸದನವನ್ನು ವರ್ತಮಾನದ ಪರಿಸ್ಥಿತಿಗಳ ಬಗ್ಗೆ ಚರ್ಚೆಗಳಿಗೆ ಬಳಸಿಕೊಳ್ಳಬೇಕು. ಉತ್ತಮ ವಿಚಾರ, ದೃಷ್ಟಿಕೋನದೊಂದಿಗೆ ಜನರಿಗೆ ಉತ್ತಮ ಸಮಾಜ ನಿರ್ಮಾಣ ಮಾಡಿ ನಮ್ಮ ಗೌರವ ಹೆಚ್ಚಿಸಿಕೊಳ್ಳೋಣ ಎಂದು ಓಂ ಬಿರ್ಲಾ ಸಲಹೆ ನೀಡಿದರು. ರಾಜ್ಯಸಭೆಯ ಉಪ ಸಭಾಪತಿ ಹರಿವಂಶ ನಾರಾಯಣ ಸಿಂಗ್, ಕಾನೂನು ಸಚಿವ ಎಚ್.ಕೆ. ಪಾಟೀಲ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.