ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಹೊತ್ತಿದ ಬೆಂಕಿ? 
ನ್ಯೂಸ್

ಉತ್ತರಾಖಂಡದಲ್ಲಿ ಕಣ್ಣೆದುರೇ ಸುಟ್ಟು ಭಸ್ಮವಾದ ಮನೆಗಳು: ಸಿಲಿಂಡರ್ ಸ್ಫೋಟದ ಶಂಕೆ | Uttarakhand Fire

Uttarakhand Fire: ಉತ್ತರಾಖಂಡದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಇಡೀ ಗ್ರಾಮವೇ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದೆ. ಉತ್ತರಕಾಶಿ ಜಿಲ್ಲೆಯ ಮೋರಿ ತಾಲ್ಲೂಕಿನ ಪುವಾನಿ ಗ್ರಾಮದಲ್ಲಿ ಸಂಭವಿಸಿದ ಈ ದುರಂತದಲ್ಲಿ 30ಕ್ಕೂ ಹೆಚ್ಚು ಮನೆಗಳು ಸುಟ್ಟು ಭಸ್ಮವಾಗಿವೆ. ಏಕಾಏಕಿ ಹೊತ್ತಿಕೊಂಡ ಬೆಂಕಿಯಿಂದಾಗಿ ಹಲವು ಕುಟುಂಬಗಳು ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿವೆ.

ಮಂಗಳವಾರ ಸಂಜೆ ಸುಮಾರು 4:30ರ ವೇಳೆಗೆ ಗ್ರಾಮದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಬೆಂಕಿ ಅಕ್ಕಪಕ್ಕದ ಮನೆಗಳಿಗೂ ವೇಗವಾಗಿ ವ್ಯಾಪಿಸಿದೆ. ಸುಮಾರು 5ರಿಂದ 7 ಸಿಲಿಂಡರ್‌ಗಳು ಸ್ಫೋಟಗೊಂಡಿದ್ದರಿಂದ ಅಗ್ನಿಯ ತೀವ್ರತೆ ಹೆಚ್ಚಾಗಿದೆ ಎಂದು ವರದಿಯಾಗಿದೆ.

30ಕ್ಕೂ ಹೆಚ್ಚು ಮನೆಗಳು ಬೆಂಕಿಗೆ ಆಹುತಿ

ಗ್ರಾಮದಲ್ಲಿದ್ದ ಸಾಂಪ್ರದಾಯಿಕ ಮರದ ಮತ್ತು ಕಲ್ಲಿನ ಮನೆಗಳು ಬೆಂಕಿಗೆ ಆಹುತಿಯಾಗಿವೆ. ಸುಮಾರು 30ರಿಂದ 50ಕ್ಕೂ ಹೆಚ್ಚು ಕುಟುಂಬಗಳು ಮನೆ ಕಳೆದುಕೊಂಡಿವೆ ಎಂದು ವರದಿಗಳು ತಿಳಿಸಿವೆ. ಮನೆಗಳಲ್ಲಿದ್ದ ವಸ್ತುಗಳು ಸುಟ್ಟು ನಾಶವಾಗಿದ್ದು, ಪಂಚಾಯಿತಿ ಕಟ್ಟಡ ಮತ್ತು ಪ್ರಾಥಮಿಕ ಶಾಲೆಗೂ ಹಾನಿಯಾಗಿದೆ. ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಜಾನುವಾರುಗಳ ಸಾವು ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ ಎಂಬುದು ಸಮಾಧಾನದ ಸಂಗತಿ.

ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡಗಳು

ಗ್ರಾಮವು ಗುಡ್ಡಗಾಡು ಮತ್ತು ದುರ್ಗಮ ಪ್ರದೇಶದಲ್ಲಿರುವುದರಿಂದ ರಕ್ಷಣಾ ತಂಡಗಳು ಸ್ಥಳಕ್ಕೆ ತಲುಪಲು ಆರಂಭದಲ್ಲಿ ತೊಂದರೆ ಎದುರಿಸಿವೆ. ಬಳಿಕ ಎಸ್‌ಡಿಆರ್‌ಎಫ್, ಪೊಲೀಸ್, ಕಂದಾಯ ಇಲಾಖೆ ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ತಪ್ಪಿದ ಮಿಸ್ ಯೂನಿವರ್ಸ್ ಕಿರೀಟ; ಟಾಪ್ 12 ತಲುಪದೆ ಹೊರಬಿದ್ದ ಕಜಿಯಾ ಯಾರು? | Kaziah Liz Mejo

ಘಟನೆಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದು, ಸಂತ್ರಸ್ತ ಕುಟುಂಬಗಳಿಗೆ ಸುರಕ್ಷಿತ ಆಶ್ರಯ, ಆಹಾರ ಮತ್ತು ಅಗತ್ಯ ಪರಿಹಾರ ಸಾಮಗ್ರಿಗಳನ್ನು ತಕ್ಷಣ ಒದಗಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.