ನ್ಯೂಸ್

ಬಾಡಿಗೆದಾರನಿಗೆ ಗುಂಡಿಕ್ಕಿದ ಮಾಲೀಕ

ಬೆಂಗಳೂರು: ಬೇಗೂರಿನ ಲಕ್ಷ್ಮೀ ಲೇಔಟ್​ನಲ್ಲಿ ಮನೆ ಬಾಡಿಗೆ ಕೊಡದ ಬಾಡಿಗೆದಾರನ ಮೇಲೆ ಮಾಲೀಕ ಗುಂಡು ಹಾರಿಸಿದ್ದಾನೆ. ಕೃತ್ಯದ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ಷ್ಮೀ ಲೇಔಟ್​ನ ನಿವಾಸಿ ಕ್ಯಾಬ್ ಚಾಲಕ ಸೆಲ್ವಂ ಕುಮಾರ್ (35) ಗಾಯಗೊಂಡ ವ್ಯಕ್ತಿ. ಮನೆ ಮಾಲೀಕ ಆನಂದ ರೆಡ್ಡಿ ಬಂಧಿತ ಆರೋಪಿ. ಆತನಿಂದ ಪಿಸ್ತೂಲ್ ವಶಕ್ಕೆ ಪಡೆದು, ದಾಖಲೆ ಪರಿಶೀಲನೆ ನಡೆಸಲಾಗು ತ್ತಿದೆ ಎಂದು ಬೇಗೂರು ಪೊಲೀಸರು ತಿಳಿಸಿದ್ದಾರೆ.

ಬೇಗೂರಿನ ಜಮೀನ್ದಾರ ಆನಂದ ರೆಡ್ಡಿಗೆ ಸೇರಿದ ಕಟ್ಟಡದಲ್ಲಿ ಸೆಲ್ವಂ ಕುಮಾರ್ ಬಾಡಿಗೆಗೆ ಇದ್ದ. ಕರೊನಾ ಲಾಕ್​ಡೌನ್ ವೇಳೆ ಮನೆಗೆ ಬೀಗ ಹಾಕಿಕೊಂಡು ತಮಿಳುನಾಡಿಗೆ ಹೋಗಿದ್ದ. ಅಂದಿನಿಂದ ಮನೆಯ ಬಾಡಿಗೆ ಹಣವನ್ನು ಕೊಟ್ಟಿರಲಿಲ್ಲ. ಇತ್ತೀಚೆಗೆ ವಾಪಸಾಗಿದ್ದ ಸೆಲ್ವಂಗೆ ಆನಂದ್ ರೆಡ್ಡಿ, ಮನೆ ಬಾಡಿಗೆಗೆ ಕೊಡುವುದಿಲ್ಲ. ಭೋಗ್ಯಕ್ಕೆ ಕೊಡುತ್ತೇನೆ ಎಂದು ಹೇಳಿದ್ದ. ಗುರುವಾರ ರಾತ್ರಿ ಆನಂದ್ ಮತ್ತು ಸೆಲ್ವಂ ನಡುವೆ ಜಗಳವಾಗಿದ್ದು, ಕುಪಿತಗೊಂಡ ಆನಂದ ರೆಡ್ಡಿ, ಪಿಸ್ತೂಲ್​ನಿಂದ ಸೆಲ್ವಂ ಮೇಲೆ ಗುಂಡು ಹಾರಿಸಿದ್ದಾನೆ. ಅದು ಭುಜಕ್ಕೆ ತಗುಲಿದೆ. ಗಾಯಗೊಂಡ ಸೆಲ್ವಂನನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.