ಸುನೀಲ್ ಹರಿಹರ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲೀಸ್‌ಗೆ ಮನೆ ಕೊಡಿಸುತ್ತೇವೆಂದು ನಂಬಿಸಿ, ಮುಗ್ದ ಜನರ ಕಣ್ಣಿಗೆ ಮಣ್ಣೆರಚಿ ಕೋಟ್ಯಂತರ ರೂ. ವಂಚಿಸಿದ್ದ ಬಹುದೊಡ್ಡ ಹಗರಣ ಸಿಐಡಿ ಮಡಿಲಿಗೆ ಸೇರಿದ ಬೆನ್ನಲ್ಲೆ ಅಧಿಕಾರಿಗಳು ಚುರುಕಿನ ತನಿಖೆ ನಡೆಸಿದ್ದಾರೆ.
ಹಣ ಕಳೆದುಕೊಂಡ 7 ಜನ ಸಂತ್ರಸ್ತರು, ಮೇ.9ರಂದು ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ‘ಅರ್ಬನ್ ಸ್ಟಾಂಜ್’ ಖಾಸಗಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಂದು ದಾಖಲಾಗಿದ್ದ ಎ್ಐಆರ್ ಅಲ್ಲಿ ಬರೊಬ್ಬರಿ 1.09 ಕೋಟಿ ವಂಚಿಸಿರುವುದು ತಿಳಿದಿತ್ತು. ಹೆಚ್ಚಿನ ದೂರುಗಳು ಬಂದಿದ್ದರಿಂದ ನೂರಾರು ಕೋಟಿ ವಂಚನೆ ಆರೋಪ ವ್ಯಕ್ತವಾಗಿದೆ. ಹಾಗಾಗಿ ಪ್ರಕರಣದ ತನಿಖೆಯನ್ನು ಸಿಐಡಿ ಆರಂಭಿಸಿದ್ದು, ತನಿಖಾಧಿಕಾರಿಗಳು ಇಂಚಿಂಚು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಣದ ಹರಿವಿನ ಪತ್ತೆಗೆ ಗಾಳ: ಆರೋಪಿಗಳು ಮತ್ತು ಅವರ ಕಂಪನಿಗಳ ಖಾತೆಗಳಿಗೆ ಎಷ್ಟೆಲ್ಲಾ ಹಣ ಬಂದಿದೆ, ಆ ಹಣ ಎಲ್ಲಿಗೆ ವರ್ಗಾವಣೆಯಾಗಿದೆ ಹಾಗೂ ಯಾವ-ಯಾವ ಖಾತೆಗಳಿಂದ ಹಣ ಜಮೆ ಆಗಿತ್ತು ಎಂಬುದರ ಸಂಪೂರ್ಣ ಜಾಡು ಹಿಡಿಯಲು ಸಿಐಡಿ ಅಧಿಕಾರಿಗಳು ಮುಂದಾಗಿದ್ದಾರೆ. ಈ ಸಂಬಂಧ ಬ್ಯಾಂಕಿಗೆ ಆಡಿಟ್ ವರದಿಯನ್ನೂ ಕೇಳಿದ್ದಾರೆ.
ವಂಚನೆಗೆ ಒಳಗಾದ ಒಟ್ಟು ಮೊತ್ತ ಎಷ್ಟು ಮತ್ತು ಎಷ್ಟು ಜನರಿಗೆ ಮೋಸ ಮಾಡಲಾಗಿದೆ ಎಂಬುದನ್ನು ನಿಖರವಾಗಿ ಲೆಕ್ಕಹಾಕಲು ಸಿಐಡಿ ವೃತ್ತಿಪರ ಆಡಿಟರ್‌ಗಳನ್ನು ನೇಮಿಸಿಕೊಳ್ಳಲು ಸಜ್ಜಾಗಿದ್ದು, ಇದರಿಂದಾಗಿ ಕಂಪನಿ ಮಾಲೀಕರು, ಅಕ್ರಮವಾಗಿ ಗಳಿಸಿದ ಆಸ್ತಿಗಳು ಎಷ್ಟು ಮತ್ತು ಬೇರೆಡೆಗೆ ವರ್ಗಾಯಿಸಿದ ಹಣದ ಹರಿವಿನ ಬಗ್ಗೆ ಆಡಿಟ್ ವರದಿ ಸ್ಪಷ್ಟ ಪಡಿಸಲಿದೆ. ಇಂತಹ ಬ್ಯಾಂಕ್ ದಾಖಲೆಗಳ ಆಧಾರದ ಮೇಲೆ ಸಾಕ್ಷ್ಯಗಳನ್ನು ಸಂಗ್ರಹಿಸಿದರೆ ಕೋರ್ಟ್‌ನಲ್ಲಿ ಆರೋಪಿಗಳ ವಿರುದ್ಧ ಬಲವಾದ ಆರೋಪ ಸಾಬೀತುಪಡಿಸಲು ಸಹಕಾರಿಯಾಗುತ್ತದೆ.
ಹಣ ಕಳೆದುಕೊಂಡು ಬೀದಿಗೆ ಬಂದವರು: ಮೈತ್ರಿ ಲೇಔಟ್ ನಿವಾಸಿ ಕಲೀದ್ ಅಲಿ ಖಾನ್ ಅವರಿಗೆ 17 ಲಕ್ಷ ರೂ.ಗಳು, ಹೈದರಾಬಾದ್ ಮೂಲದ ಬರ್ಕತ್ ಉನ್ನಿಸಾ ಅವರಿಗೆ 27 ಲಕ್ಷ ರೂ.ಗಳು, ದೊಡ್ಡಕಲ್ಲಸಂದ್ರದ ಸ್ಟಾೃನ್ಲೀ ಜಾರ್ಜ್ ಅವರಿಗೆ 22 ಲಕ್ಷ ರೂ.ಗಳು, ಸಬ್‌ಸ್ಟೈನ್ ರಾಜನ್ ಅವರಿಗೆ 19 ಲಕ್ಷ ರೂ.ಗಳು, ಬೊಮ್ಮನಹಳ್ಳಿಯ ಕುಷ್ಬು ಬೇಗಂ ಅವರಿಗೆ 11 ಲಕ್ಷ ರೂ.ಗಳು ಹಾಗೂ ಹೊಂಗಸಂದ್ರದ ಮಂಜುಳ ಜಗದೀಶ್ ಅವರಿಗೆ 13 ಲಕ್ಷ ರೂ.ಗಳಷ್ಟು ವಂಚಿಸಿದ್ದಾರೆ. ಈ ಸಂತ್ರಸ್ತರು ಒಗ್ಗೂಡಿ ಅರ್ಬನ್ ಸ್ಟಾಂಜ್ ಕಂಪನಿ ಮಾಲೀಕ ನಿತೀನ್ ಹೊನ್ನೆಗೌಡ, ಸಿಬ್ಬಂದಿ ಮದನ್‌ರಾಜ್ ಹಾಗೂ ಶಿವಕುಮಾರ್ ವಿರುದ್ಧ ಠಾಣೆಗೆ ದೂರು ಸಲ್ಲಿಸಿದ್ದರು.
ಸಿಲಿಕಾನ್ ಸಿಟಿಯಲ್ಲಿ ಮನೆ ಲೀಸ್‌ಗೆ ಹುಡುಕುವವರನ್ನೇ ಗುರಿಯಾಗಿಸಿ ಕೆಲವೊಂದಿಷ್ಟು ಕಂಪನಿಗಳು ಮುಗ್ದ ಜನರಿಗೆ ಕೋಟ್ಯಂತರ ರೂ. ವಂಚಿಸಿವೆ. ಈ ಪೈಕಿ ಇಂದಿರಾನಗರ ಠಾಣೆಯಲ್ಲಿ ಜಾನ್ಸ್ ಪ್ರಾಪರ್ಟಿ ಮ್ಯಾನೇಜ್‌ಮೆಂಟ್ ಕಂಪನಿ ವಿರುದ್ಧ ಮತ್ತು ಎಚ್‌ಎಸ್‌ಆರ್ ಠಾಣೆಯಲ್ಲಿ ಅರ್ಬನ್ ಸ್ಟಾಂಜ್ ಕಂಪನಿ ವಿರುದ್ಧ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ದಾಖಲಾಗಿದೆ. ಇದೀಗ ಈ ಎರಡೂ ಪ್ರಕರಣಗಳು ಸಿಐಡಿ ಅಂಗಳಕ್ಕೆ ಸೇರಿದ್ದು, ಆರೋಪಿಗಳಿಗೆ ನಡುಕ ಶುರುವಾಗಿದೆ.
ಎಚ್‌ಎಸ್‌ಆರ್ ಲೇಔಟ್ ಹಾಗೂ ಇಂದಿರಾನಗರ ಠಾಣೆಗಳಲ್ಲಿ ದಾಖಲಾಗಿರುವ 2 ಕಂಪನಿಗಳು ಬರೋಬ್ಬರಿ 400 ಕೋಟಿ ರೂ.ಗೂ ಅಧಿಕ ವಂಚಿಸಿರುವ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಕಂಪನಿಗಳ ಮಾಲೀಕರು ಹಾಗೂ ಸಂಬಂಧಿತ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಲಿದ್ದಾರೆ.
ಬ್ಯಾಂಕಿನಲ್ಲಿ ಅಡವಿಟ್ಟ ಮನೆಯನ್ನೇ ಲೀಸ್‌ಗೆ ನೀಡಿದ ಇಬ್ಬರು ಆರೋಪಿಗಳು ಬರೊಬ್ಬರಿ 20 ಲಕ್ಷ ರೂ.ಗಳಿಗೂ ಹೆಚ್ಚು ವಂಚಿಸಿರುವ ಬಗ್ಗೆ ಗೋವಿಂದರಾಜನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಎನ್. ಯೊಗೇಶ್ ನೀಡಿದ ದೂರಿನ ಮೇರೆಗೆ ಕಾವೇರಿ ಲೇಔಟ್ ನಿವಾಸಿ ಬಿ.ಎಂ. ಭರತ್, ನಾಗರಬಾವಿ ನಿವಾಸಿ ಕೆ. ವಿಶ್ವನಾಥ್ ವಿರುದ್ಧ ಪ್ರಕರಣ ದಾಖಲಾಗಿದ್ದು. ತನಿಖೆ ಮುಂದುವರಿದಿದೆ.
ದೂರುದಾರರು 2024ರಲ್ಲಿ ವಾಸಕ್ಕಾಗಿ ಭೋಗ್ಯದ ಮನೆ ಹುಡುಕುತ್ತಿದ್ದಾಗ, ಆರೋಪಿಗಳು ತಮ್ಮ ಮನೆ ಲೀಸ್ ನೀಡುತ್ತೇವೆಂದು ಪರಿಚಯಿಸಿಕೊಂಡಿದ್ದರು. ಆಗ 3 ವರ್ಷದ ಅವಧಿಗೆ 20 ಲಕ್ಷ ರೂ. ಸ್ವೀಕರಿಸಿದ್ದರು.
ದೂರುದಾರರು ಆ ಮನೆಯಲ್ಲಿ ವಾಸವಾಗಿದ್ದಾಗ 2025ರ ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ ಎಸ್‌ಬಿಐ ಬ್ಯಾಂಕಿನ ಅಧಿಕಾರಿಗಳು ಮನೆ ಬಳಿ ಆಗಮಿಸಿ, ಮನೆಯ ಮೇಲಿನ ಸಾಲ ಮರು ಪಾವತಿಯಾಗದ ಕಾರಣ ಮನೆ ಜಪ್ತಿ ಮಾಡಿದ್ದರು. ಇತ್ತ ಮನೆಯನ್ನೂ ಕಳೆದುಕೊಂಡ ಸಂತ್ರಸ್ತರು, ಮನೆ ಮಾಲೀಕರ ಬಳಿ ಹಣ ಕೇಳಿದಾಗ ಬೆದರಿಕೆ ಹಾಕಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.