ನ್ಯೂಸ್

ವರ್ಷಾಂತ್ಯದಲ್ಲಿ ಹೋಟೆಲಿಗರಿಂದ ಸರ್ಕಾರಕ್ಕೆ ಮನವಿ; ಏನೇನು ಬೇಡಿಕೆ? ಇಲ್ಲಿದೆ ಪೂರ್ತಿ ವಿವರ..

ಬೆಂಗಳೂರು: ಇತ್ತೀಚೆಗೆ ಹಲವಾರು ಸವಾಲುಗಳ ಜತೆಗೆ ಪುಡಿರೌಡಿಗಳ ಕಾಟವನ್ನೂ ಎದುರಿಸುತ್ತಿರುವ ಹೋಟೆಲ್ ಉದ್ಯಮದವರು ಇದೀಗ ವರ್ಷಾಂತ್ಯದಲ್ಲಿ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದು, ತಮ್ಮದೊಂದಷ್ಟು ಬೇಡಿಕೆಗಳನ್ನು ಈಡೇರಿಸುವಂತೆ ಕೋರಿಕೊಂಡಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿರುವ ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ಹೋಟೆಲ್​​ಗಳಿಗೆ ಸಂಬಂಧಿಸಿದಂತೆ ಬೇಡಿಕೆಗಳ ಪಟ್ಟಿಯನ್ನು ಸರ್ಕಾರದ ಮುಂದಿಟ್ಟಿದ್ದು, ಅದನ್ನು ಈಡೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ಎರಡು ವರ್ಷ ಕೋವಿಡ್-19 ಬಹುದೊಡ್ಡ ಪಾಠ ಕಲಿಸಿರುತ್ತದೆ. ಆರೋಗ್ಯದ ಮಹತ್ವದ ಬಗ್ಗೆ ಹೆಚ್ಚಿಗೆ ತಿಳಿದುಕೊಂಡಿದ್ದೇವೆ. ಇವೆಲ್ಲವನ್ನೂ ಮೀರಿ 2022ನೇ ವರ್ಷ ಚೇತರಿಕೆ ಕಂಡಿರುವುದು ಸಂತೋಷದ ವಿಷಯ. ಈ ವರ್ಷ ನಾವು ನಮ್ಮ ಉದ್ಯಮದ ಕುರಿತಾದ ಕೆಲವೊಂದು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿರುತ್ತೇವೆ. ಉದ್ಯಮಸ್ನೇಹಿ ವಾತಾವರಣ ಕಲ್ಪಿಸುವ ನಿಟ್ಟಿನಲ್ಲಿ ಒಂದಷ್ಟು ಬೇಡಿಕೆಗಳನ್ನು ಮುಂದಿಡಲಾಗಿದೆ ಎಂದು ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.

ಉದ್ಯಮಿಯಾಗು, ಉದ್ಯೋಗ ಕೊಡು ಎನ್ನುವ ಸರ್ಕಾರದ ಮಾತು ಫಲಕಾರಿಯಾಗಬೇಕಾಗಿದೆ. ಬಹಳಷ್ಟು ಅವಿದ್ಯಾವಂತರಿಗೆ ಊಟ, ವಸತಿ, ಸಂಬಳ ಕೊಟ್ಟು ಉದ್ಯೋಗ ಕೊಡುವಂತಹ ಮತ್ತು ಜನಸಾಮಾನ್ಯರಿಗೆ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಉಚಿತವಾಗಿ ಪೂರೈಸುವ ಹಾಗೂ ರೈತರು ಬೆಳೆಯುವ ಎಲ್ಲ ತರಕಾರಿ ಹಣ್ಣು, ಹಂಪಲು ಮುಂತಾದವುಗಳಿಗೆ ಹೆಚ್ಚಿಗೆ ಪ್ರೋತ್ಸಾಹ ನೀಡುವಂತಹ ನಮ್ಮ ಉದ್ಯಮವನ್ನು ಉಳಿಸಿ ಬೆಳೆಸುವುದು ಸರ್ಕಾರದ ಜವಾಬ್ದಾರಿ ಎಂದಿರುವ ಅವರು, ನಮ್ಮ ಎಲ್ಲ ಬೇಡಿಕೆಗಳನ್ನು ಬರಲಿರುವ 2023ನೇ ವರ್ಷದಲ್ಲಿ ಈಡೇರಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾಗಿ ಅವರು ತಿಳಿಸಿದ್ದಾರೆ.

ಬೇಡಿಕೆಗಳ ಪಟ್ಟಿ ಇಂತಿದೆ..

- ಟ್ರೇಡ್​ ಲೈಸೆನ್ಸ್, ಎಸ್​ಎಸ್​ಎಸ್​ಎಐ ಲೈಸೆನ್ಸ್​ ಲೈಫ್​ ಒನ್​ ಟೈಮ್ ಆಗಿರಬೇಕು.

- ಕೇಂದ್ರ ಹಾಗೂ ರಾಜ್ಯ ಸರ್ಕಾರ 24/7 ಗೆ ಅನುಮತಿ ಕೊಟ್ಟಿದ್ದರೂ ಪೋಲೀಸ್ ಇಲಾಖೆಯವರು ಮೀನಮೇಷ ನೋಡುತ್ತಿದ್ದಾರೆ.

- ಇತರ ರಾಜ್ಯಗಳಿಗೆ ಕೊಟ್ಟಂತೆ ನಮ್ಮ ಉದ್ಯಮಕ್ಕೆ ಕೈಗಾರಿಕೆಯ ಸ್ಥಾನ ನೀಡುವುದು.

- ಕಾರ್ಮಿಕರ ವೃತ್ತಿಪರ ತೆರಿಗೆಯ ಸಂಬಳದ ಮಿತಿಯನ್ನು 15 ಸಾವಿರದಿಂದ 30 ಸಾವಿರ ರೂಪಾಯಿಗೆ ಹೆಚ್ಚಿಸಬೇಕು.

- ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು.

- ಪುಡಿರೌಡಿಗಳು, ಗೂಂಡಾಗಳನ್ನು ತಡೆಹಿಡಿಯಲು ಅಗತ್ಯ ಭದ್ರತೆಯನ್ನು ಹೆಚ್ಚಿಸಬೇಕು.

- ಬೆಂಗಳೂರು ನಗರದಲ್ಲಿ ನಿಧಾನಗತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಕೆಲಸಗಳನ್ನು ಸಮಯೋಜಿತವಾಗಿ ಪೂರ್ಣಗೊಳಿಸಬೇಕು,