ನ್ಯೂಸ್

ಕಾಲೇಜ್ ಹಾಸ್ಟೆಲ್​ ಆಹಾರದಲ್ಲಿತ್ತು ಸತ್ತ ಕಪ್ಪೆ!; 'ಈ ಕಾಲೇಜಲ್ಲೂ ಹೀಗಾ?' ಎಂದ ನೆಟ್ಟಿಗ

ನವದೆಹಲಿ: ಕಾಲೇಜು ಹಾಸ್ಟೆಲ್​​ನ ಆಹಾರದಲ್ಲಿ ಸತ್ತ ಕಪ್ಪೆ ಕಂಡುಬಂದಿದ್ದು, ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಅದಾಗ್ಯೂ ಕಾಲೇಜು ಆಡಳಿತ ಮಂಡಳಿ ಕೈಗೊಂಡ ಕ್ರಮದ ಬಗ್ಗೆಯೂ ಬೇಸರ ವ್ಯಕ್ತಗೊಂಡಿದೆ. ಒಡಿಶಾದ ಇಂಜಿನಿಯರಿಂಗ್ ಕಾಲೇಜ್​ ಹಾಸ್ಟೆಲ್​ನಲ್ಲಿ ಈ ಪ್ರಕರಣ ನಡೆದಿದೆ.

ಭುವನೇಶ್ವರದ ಕಳಿಂಗ ಇನ್​ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯ ಹಾಸ್ಟೆಲ್​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಈ ಕುರಿತು ಆರಯನ್ಷ್ ಎಂಬ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಸಹಿತ ಮಾಹಿತಿ ಹಂಚಿಕೊಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದು ದೇಶದ ಇಂಜಿನಿಯರಿಂಗ್ ಕಾಲೇಜುಗಳ ಪೈಕಿ 42ನೇ ರ್ಯಾಂಕ್ ಹೊಂದಿರುವ ಕೆಐಟಿ ಭುವನೇಶ್ವರ್​ನಲ್ಲಿ ನಡೆದ ಘಟನೆ, ಇಲ್ಲಿ ಮಕ್ಕಳಿಗೆ ಇಂಜಿನಿಯರಿಂಗ್ ಪದವಿ ಕೊಡಿಸಲು ಪಾಲಕರು ಸುಮಾರು 17.5 ಲಕ್ಷ ರೂ. ಶುಲ್ಕ ಪಾವತಿಸುತ್ತಾರೆ. ಅಂಥ ಕಾಲೇಜಿನಲ್ಲಿ ಕೊಟ್ಟ ಆಹಾರ ಇದು ಎಂದು ಸತ್ತ ಕಪ್ಪೆಯ ಚಿತ್ರ ಹಂಚಿಕೊಂಡಿದ್ದಾರೆ.

ಉತ್ತಮ ಶಿಕ್ಷಣ ಹಾಗೂ ವ್ಯವಸ್ಥೆ ಬಯಸಿ ವಿದ್ಯಾರ್ಥಿಗಳು ಯಾಕೆ ವಿದೇಶಕ್ಕೆ ಹೋಗುತ್ತಾರೆ ಎಂದು ನಾವು ಅಚ್ಚರಿ ಪಡುತ್ತೇವೆ ಎಂದು ಈ ಪ್ರಕರಣದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಕೈಗೊಂಡ ಕ್ರಮದ ಕುರಿತು ಕೂಡ ಅಸಮಾಧಾನ ಪಟ್ಟಿದ್ದಾರೆ.

ಇಷ್ಟೇ ಮನುಷ್ಯ ಜೀವನದ ಬೆಲೆ. ಸತ್ತ ಕಪ್ಪೆ ಇರುವ ಆಹಾರ ನೀಡಿದ್ದ ಯುನಿವರ್ಸಿಟಿಯವರು ಆಹಾರ ಒದಗಿಸಿದ್ದ ಮೆಸ್​ನವರ ಒಂದು ದಿನದ ಪಾವತಿಯನ್ನು ಕಡಿತ ಮಾಡುವುದಾಗಿಯಷ್ಟೇ ಹೇಳುವ ಮೂಲಕ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ಆರಯನ್ಷ್ ಹೇಳಿದ್ದಾರೆ.