ನ್ಯೂಸ್

ಸಖತ್​ ಐಡಿಯಾ ಗುರು| ಹೊಸ ಮಾರ್ಗಗಳತ್ತ ತೆರೆದುಕೊಂಡಿದೆ ಹಾಸ್ಪಿಟಾಲಿಟಿ

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಹೊಸ ಮಾರ್ಗಗಳತ್ತ ತೆರೆದುಕೊಂಡಿದೆ ಹಾಸ್ಪಿಟಾಲಿಟಿ

ಕರೊನಾದಿಂದ ಆತಿಥ್ಯ ಕ್ಷೇತ್ರ ನಾನಾ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಬೆಳವಣಿಗೆಯನ್ನು ನೆಗೆಟಿವ್ ಅಂದುಕೊಳ್ಳುವಂತೆಯೂ ಇಲ್ಲ. ಹೊಸ ಆಯಾಮದಲ್ಲಿ ಉದ್ಯಮಗಳು ಸೃಷ್ಟಿಯಾಗತೊಡಗಿವೆ. ಇಷ್ಟು ದಿನ ಮನೆಯಲ್ಲೇ ಕುಳಿತ ಜನ ಈಗ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವ ಪ್ರಮಾಣ ಹೆಚ್ಚಾಗಿದೆ. ಕೊಡಗು, ಚಿಕ್ಕಮಗಳೂರು ಮತ್ತಿತರ ಕಡೆ ರೆಸಾರ್ಟ್​ಗಳು ಫುಲ್ ಆಗುತ್ತಿವೆ. ನಗರ ಪ್ರದೇಶದ ಹೋಟೆಲ್​ಗಳಿಗೆ ರಿವೆಂಜ್ ಟೂರಿಸಂ ಆರಂಭವಾಗಿದೆ. ಅಂದರೆ ಶುಕ್ರವಾರ, ಶನಿವಾರ, ಭಾನುವಾರ ಆಕ್ಯುಪೆನ್ಸಿ ಹೆಚ್ಚಾಗುತ್ತಿದೆ. ಬೇರೆ ನಗರಗಳಿಗೆ ಹೋಗಲು ಇಷ್ಟವಿಲ್ಲದವರು ಹೋಟೆಲ್​ಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಇಂತಹ ಬೆಳವಣಿಗೆಗೆ ಪೂರಕವಾಗಿ ಆತಿಥ್ಯ ಕ್ಷೇತ್ರದಲ್ಲಿ ಹೂಡಿಕೆ ಮಾಡಿ ಹಣ ಗಳಿಸುವ ಅವಕಾಶಗಳು ನಮ್ಮೆದುರು ತೆರೆದುಕೊಂಡಿವೆ. ಇದು ಆತಿಥ್ಯ ಕ್ಷೇತ್ರದ ವಿಷಯವಾದರೆ, ಇನ್ನು ಈವರೆಗೆ ಉದ್ಯಮವನ್ನೇ ಮಾಡದ ಗೃಹಿಣಿಯರು ಈ ಸಂದರ್ಭದಲ್ಲಿ ಮನೆಯಿಂದಲೇ ಉದ್ಯಮ ಆರಂಭಿಸಲು ಅವಕಾಶ ದೊರೆತಿದೆ. ಹೋಮ್ ಕುಕ್ಕಿಂಗ್, ಬೇಕರಿ, ಮಸಾಲೆ ಉತ್ಪನ್ನಗಳನ್ನು ಸಿದ್ಧಪಡಿಸಿ ಇ-ವಹಿವಾಟು ಮಾಡಬಹುದಾಗಿದೆ. ಈ ಪದಾರ್ಥಗಳನ್ನು ಎಲ್ಲಿ ಬೇಕಾದರೂ ಸಿದ್ಧಪಡಿಸಬಹುದು, ಎಲ್ಲಿಗೆ ಬೇಕಾದರೂ ಕಳಿಸಬಹುದು. ಈಗಾಗಲೇ ಕೆಲವರು ಇದನ್ನು ಆರಂಭಿಸಿದ್ದು, ಇನ್ನಷ್ಟು ವಿಸ್ತರಿಸಿಕೊಳ್ಳುವ ಅವಕಾಶ ಎಲ್ಲರಿಗೂ ಇದೆ. ಸಾಮಾಜಿಕ ಅಂತರ ಅನಿವಾರ್ಯವಾದ್ದರಿಂದ ವೆಬಿನಾರ್ ಮೂಲಕ ಯೋಗ ಕೋಚಿಂಗ್ ಕೂಡ ಮಾಡಬಹುದು. ರೋಗಿಗಳಿಗೆ ಸೀಮಿತವಾಗಿದ್ದ ಡಯಟಿಶಿಯನ್​ಗಳ ಸೇವೆಗೆ ಇಂದು ಬೇಡಿಕೆ ಹೆಚ್ಚುತ್ತಿದ್ದು, ಅದನ್ನು ಇನ್ನಷ್ಟು ವ್ಯಾಪಕಗೊಳಿಸಿಕೊಂಡು ಲಾಭ ಗಳಿಸಬಹುದು. ನಗರ ಪ್ರದೇಶದಲ್ಲಿ ಸಾವಯವ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದ್ದು, ಅದನ್ನು ಒಳ್ಳೆಯ ಉದ್ಯೋಗವಾಗಿ ಮಾರ್ಪಡಿಸಿಕೊಳ್ಳಬಹುದು.

| ವೀರೇಂದ್ರ ಷಡಕ್ಷರಿ ವ್ಯವಸ್ಥಾಪಕ ನಿರ್ದೇಶಕ, ರಮಣಶ್ರೀ ಗ್ರೂಪ್