ನ್ಯೂಸ್

ಪೆಟ್ಟಾಗಿದ್ದು ಬಲ ಭಾಗದಲ್ಲಿ, ಆಪರೇಷನ್​ ಮಾಡಿದ್ದು ಎಡಭಾಗಕ್ಕೆ! ತಪ್ಪು ಮುಚ್ಚಿಡಲು ಪ್ರೈವೇಟ್​ ರೂಂ ಕೊಟ್ಟ ಆಸ್ಪತ್ರೆ!

ಚಂಡೀಗಢ: ವೈದ್ಯರು ಭೂಮಿ ಮೇಲಿರುವ ದೇವರು ಎನ್ನುತ್ತಾರೆ. ಆದರೆ ಕೆಲವೊಮ್ಮೆ ಅದೇ ದೇವರಿಂದ ಆಗಬಾರದ ತಪ್ಪು ಆಗಿಬಿಡುತ್ತದೆ. ಅದೇ ರೀತಿ ಇದೀಗ ಹರಿಯಾಣದ ಭಿವಾನಿಯಲ್ಲಿರುವ ಹೌದರಿ ಬನ್ಸಿಲಾಲ್ ಸಿವಿಲ್ ಆಸ್ಪತ್ರೆಯಲ್ಲೂ ಒಂದು ಆಗಬಾರದ ತಪ್ಪು ಆಗಿಬಿಟ್ಟಿದೆ.

ರನಿಲಾ ಗ್ರಾಮದ ವೃದ್ಧ ಮಹಿಳೆಯೊಬ್ಬರು ಮನೆಯಲ್ಲಿ ಬಿದ್ದು ಬಲ ಭಾಗದ ಸೊಂಟ ಗಾಯ ಮಾಡಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಅವರನ್ನು ಹೌದರಿ ಬನ್ಸಿಲಾಲ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೃದ್ಧೆಗೆ ಆಪರೇಷನ್​ ಅಗತ್ಯತೆ ಇದೆ ಎಂದ ವೈದ್ಯರು, ಆಕೆಯ ಕುಟುಂಬದವರಿಂದ 15 ಸಾವಿರ ಆಪರೇಷನ್​ ಶುಲ್ಕ ಪಡೆದು, ಆಪರೇಷನ್​ ಮಾಡಿದ್ದಾರೆ. ಆದರೆ ಬಲ ಭಾಗದಲ್ಲಿ ಆಗಿದ್ದ ಗಾಯಕ್ಕೆ ಸೊಂಟದ ಎಡ ಭಾಗದಲ್ಲಿ ಆಪರೇಷನ್​ ಮಾಡಲಾಗಿದೆ.

ಆಪರೇಷನ್​ ಆದ ಕೆಲ ಗಂಟೆಗಳಲ್ಲಿ ಈ ವಿಚಾರ ಕುಟುಂಬ ಹಾಗೂ ವೈದ್ಯರ ಅರಿವಿಗೂ ಬಂದಿದೆ. ತಕ್ಷಣ ಎಚ್ಚೆತ್ತುಕೊಂಡ ವೈದ್ಯ ಬಳಗ ವೃದ್ಧೆಯನ್ನು ಪ್ರೈವೇಟ್​ ಕೋಣೆಗೆ ಶಿಫ್ಟ್​ ಮಾಡಿಸಿದೆ. ಅದಕ್ಕೆ ಯಾವುದೇ ಶುಲ್ಕವನ್ನು ಹಾಕಿಲ್ಲ. ಹಾಗೆಯೇ ಮತ್ತೊಮ್ಮೆ ಸೊಂಟದ ಬಲಭಾಗಕ್ಕೆ ಆಪರೇಷನ್​ ಮಾಡಲಾಗಿದೆ. ಅದಕ್ಕೂ ಶುಲ್ಕ ವಿಧಿಸಲಾಗಿದೆ.

ಆದರೆ ಇದೀಗ ವೃದ್ಧೆ ಸಾವನ್ನಪ್ಪಿದ್ದಾಳೆ. ಆಕೆಯ ಸಾವಿಗೆ ಆಸ್ಪತ್ರೆಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ದೂರಿದೆ. ಅವರು ತಪ್ಪಾಗಿ ಆಪರೇಷನ್​ ಮಾಡಿದ್ದಕ್ಕೇ ಆಕೆಯನ್ನು ಪ್ರೈವೇಟ್​ ರೂಮಿಗೆ ಶಿಫ್ಟ್​ ಮಾಡಿದರು ಹಾಗೂ ಮತ್ತೊಮ್ಮೆ ಉಚಿತವಾಗಿ ಆಪರೇಷನ್​ ಮಾಡಿದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಈ ಸಂಬಂಧ ಇದೀಗ ಮುಖ್ಯ ಆರೋಗ್ಯಾಧಿಕಾರಿ ಡಾ. ಸಪ್ನಾ ಗೆಹ್ಲಾವತ್ ತನಿಖೆ ನಡೆಸಲು ಆದೇಶಿಸಿದ್ದಾರೆ. (ಏಜೆನ್ಸೀಸ್​)