ನ್ಯೂಸ್

ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ತಿ.ನರಸೀಪುರ : ಸಾರ್ವಜನಿಕ ಆಸ್ಪತ್ರೆಯಲ್ಲಿ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲು ಸೂಕ್ತ ಕ್ರಮ ವಹಿಸುವುದಲ್ಲದೆ, ಹೆಚ್ಚುವರಿ ಅಗತ್ಯವಿದ್ದಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲಾಗುವುದು ಎಂದು ಆರೋಗ್ಯ ಇಲಾಖೆ ಜಂಟಿ ನಿರ್ದೇಶಕ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ವಸಂತ್‌ಕುಮಾರ್ ತಿಳಿಸಿದರು.
ಇತ್ತೀಚೆಗೆ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ದಸಂಸ ಮೂರು ದಿನಗಳ ಪ್ರತಿಭಟನೆ ನಡೆಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಂದ ಹಾಗೂ ದಸಂಸ ಮುಖಂಡರಿಂದ ಮಾಹಿತಿ ಪಡೆದ ಬಳಿಕ ಅವರು ಮಾತನಾಡಿದರು.
ಶವಾಗಾರದ ದುಸ್ಥಿತಿಯ ಬಗ್ಗೆ ನಾವು ಗಮನಹರಿಸುತ್ತೇವೆ. ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವುದಕ್ಕೆ ನಿರ್ಬಂಧವಿಲ್ಲ, ಆದರೆ ಕೆಎಂಸಿ ನಿಯಮ ವ್ಯಾಪ್ತಿಯೊಳಗಿರಬೇಕು. ಕೆಎಂಸಿ ನಿಯಮಗಳ ಬಗ್ಗೆ ಮತ್ತೊಮ್ಮೆ ಪರಿಶೀಲಿಸಲಾಗುವುದು, ಒಂದು ವೇಳೆ ಯಾವುದೇ ತಪ್ಪುಗಳಿದ್ದಲ್ಲಿ ಅಗತ್ಯ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಈಗಾಗಲೇ ಆಸ್ಪತ್ರೆಯ ಬೇಡಿಕೆ ಹಾಗೂ ದೂರುಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಮನವಿ ಸ್ವೀಕರಿಸಿದ್ದಾರೆ. ಅವರು ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು. ವರದಿ ಬಂದ ನಂತರ ನಾವು ಪರಿಶೀಲಿಸಿ ಮುಂದಿನ ಕ್ರಮ ವಹಿಸುವುದಾಗಿ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆಗಳ ಸೌಲಭ್ಯಗಳಿದ್ದಲ್ಲಿ ಅಂತಹ ಪರೀಕ್ಷೆಗಳನ್ನು ಹೊರಗುತ್ತಿಗೆ ಮೂಲಕ ನಿಯೋಜನೆಗೊಂಡ ಖಾಸಗಿ ಪಾಲಿ ಕ್ಲಿನಿಕ್‌ಗಳಲ್ಲಿ ಮಾಡಿಸಿದಲ್ಲಿ ಅವರಿಗೆ ಸರ್ಕಾರದಿಂದಲೇ ಹಣ ಪಾವತಿಸುವ ಬಗ್ಗೆ ಕಾರ್ಯಯೋಜನೆ ರೂಪಿಸಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳಿಗೆ ಹೊರಗೆ ಬರೆದು ಕಳುಹಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಡಾ.ಎಸ್.ಚಂದ್ರಶೇಖರ್ ಮಾತನಾಡಿ, ಸರ್ಕಾರಿ ವೈದ್ಯರು ಕೆಲಸದ ಅವಧಿಯಲ್ಲಿ ಖಾಸಗಿಯಾಗಿ ಪ್ರಾಕ್ಟೀಸ್ ಮಾಡುವುದೇ ಸರಿಯಲ್ಲ, ಈ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಬೇಕು. ಪ್ರಸೂತಿ ತಜ್ಞರ ಕಾರ್ಯ ವೈಖರಿಯ ಬಗ್ಗೆ ಸಾಕಷ್ಟು ಸಾರ್ವಜನಿಕ ದೂರುಗಳಿವೆ. ಖಾಸಗಿಯಾಗಿ ಆಸ್ಪತ್ರೆ ಮಾಡಿಕೊಂಡು ಇಲ್ಲಿ ಬಂದವರನ್ನು ಅಲ್ಲಿಗೆ ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ. ಶವಾಗಾರ ದುಸ್ಥಿತಿಯಲ್ಲಿದ್ದು, ಅದು ದುರಸ್ತಿಗೊಳ್ಳಬೇಕು ಹಾಗೂ ಶೀತಲೀಕರಣ ಕೇಂದ್ರ ಆಗಬೇಕು, ಆಸ್ಪತ್ರೆಗೆ ಹೆಚ್ಚು ಬಡ ಜನರೇ ಬರುವುದರಿಂದ ಎಲ್ಲ ಅಗತ್ಯ ಚಿಕಿತ್ಸಾ ಹಾಗೂ ಪ್ರಯೋಗಾಲಯ ಸೌಲಭ್ಯ ದೊರಕಬೇಕಿದೆ. ವೈದ್ಯರ ವಸತಿ ಗೃಹಗಳಿದ್ದು, ವೈದ್ಯರು ಇಲ್ಲಿ ಉಳಿಯುತ್ತಿಲ್ಲ, ತುರ್ತು ಚಿಕಿತ್ಸಾ ವೈದ್ಯರ ನಿಯೋಜನೆಯಾಗಬೇಕು ಎಂದು ನೋಡಲ್ ಅಧಿಕಾರಿಗಳಿಗೆ ಮನವಿ ಮಾಡಿದರು