ನ್ಯೂಸ್

ಕನ್ನಡ ಜ್ಞಾನ ಇನ್ನಷ್ಟು ಹರಡಲಿ

ಮಂಜುನಾಥ

ಹೊಸಪೇಟೆ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಜ್ಞಾನವನ್ನು ಹರಡಲು, ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಕನ್ನಡದ ಹೆಚ್ಚು ಮೌಲ್ಯಯುತ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಬೇಕಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಹೇಳಿದರು.

ಕನ್ನಡ ವಿವಿಯ ನವರಂಗ ಬಯಲು ರಂಗಮಂದಿರದಲ್ಲಿ ನಡೆದ 33ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ವಿವಿ ಪ್ರಸಾರಾಂಗವು ಕನ್ನಡದ ಜತೆಗೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಕೆಲವು ಅಮೂಲ್ಯ ಪುಸ್ತಕಗಳನ್ನು ಅನುವಾದಿಸಿ ಪ್ರಕಟಿಸಿದೆ ಎಂದು ತಿಳಿದು ನನಗೆ ಸಂತೋಷವಾಯಿತು. ಕನ್ನಡ ಜ್ಞಾನವನ್ನು ಇನ್ನಷ್ಟು ಹರಡಬೇಕು ಎಂದರು.

ವಿಶ್ವವಿದ್ಯಾನಿಲಯವು ಹತ್ತಿರದ ಐದು ಹಳ್ಳಿಗಳನ್ನು ದತ್ತು ತೆಗೆದುಕೊಂಡು ತನ್ನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸಿರುವುದು ಸೂಕ್ತವಾಗಿದೆ. ವಿಶ್ವವಿದ್ಯಾನಿಲಯವು ಉದ್ದೇಶಿಸಿರುವ ಸಮುದಾಯ ಬಾನುಲಿ ಕೇಂದ್ರದ ಮೂಲಕ ಸಾಮಾಜಿಕ ಕಾರ್ಯಕ್ರಮಗಳನ್ನು ವಿಸ್ತರಿಸಲು ಅವಕಾಶವಿದೆ. ಹಂಪಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ ಮಾದರಿಯಲ್ಲಿ ನಿರ್ಮಿಸಲಾದ ವಿಶ್ವವಿದ್ಯಾನಿಲಯದ ಅನೇಕ ಕಟ್ಟಡಗಳು ಇತಿಹಾಸವನ್ನು ನೆನಪಿಸುತ್ತವೆ. ಗಿರಿಸೀಮೆ ಆವರಣವು ಬುಡಕಟ್ಟು ಸಂಸ್ಕೃತಿಯನ್ನು ಚಿತ್ರಿಸುತ್ತದೆ, ದೇಶದ ಶಿಲ್ಪಕಲಾ ವೈಭವವನ್ನು ಮರುಸೃಷ್ಟಿಸುವ ಶಿಲ್ಪ. ವಿಶ್ವವಿದ್ಯಾನಿಲಯದ ವಸ್ತುಸಂಗ್ರಹಾಲಯವನ್ನು ಮತ್ತಷ್ಟು ಅಭಿವೃದ್ಧಿಪಡಿಸಬೇಕಾಗಿದೆ ಎಂದರು.