ಹೊಸಪೇಟೆ: ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ ಘಟನೆಯಾಗಿದ್ದು, ನೀರಿನ ರಭಸಕ್ಕೆ ಗೇಟ್ ಕೊಚ್ಚಿ ಹೋಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಲೇ ಗೇಟ್ ತಯಾರು ಮಾಡಲಾಗ್ತಿದೆ. ಅನುಭವಿ ತಜ್ಞ ಕನ್ನಯ್ಯ ನಾಯ್ಡು ಮತ್ತವರ ತಂಡದಿಂದ ಕಾರ್ಯ ನಡೆಯುತ್ತಿದೆ. ನಾಳೆ ತಾತ್ಕಾಲಿಕ ಗೇಟ್ ಕೂಡಿಸಲಾಗ್ತದೆ. ಆಂಧ್ರ, ತೆಲಂಗಾಣ ರಾಜ್ಯದ ನಾಯಕರು ನಾವು ಜಂಟಿಯಾಗಿದ್ದೇ ಕ್ರಮ ಕೈಗೊಂಡಿದ್ದೇವೆ. ಗೇಟ್ ಒಡೆಯದೇ ಇದಿದ್ದರೆ, ಇವತ್ತು ನಿಗದಿಯಂತೆ ಬಾಗೀನ ಅರ್ಪಣೆ ಮಾಡಬೇಕಿತ್ತು. ಜಲಾಶಯ ವಿಚಾರದಲ್ಲಿ ರಾಜಕೀಯ ಮಾಡೋಲ್ಲಾ. ನಾಲ್ಕೈದು ದಿನಗಳಲ್ಲಿ ಗೇಟ್ ಕೂಡಿಸಲಾಗ್ತದೆ. ಮುಂದೆ ಮಳೆಯಾಗೋದಿದೆ, ಜಲಾಶಯ ಭರ್ತಿಯಾಗೋ ನಿರೀಕ್ಷೆ ಇದೆ. ಇಲ್ಲಿಗೆ ಬಂದು ಬಾಗೀನ ಅರ್ಪಣೆ ಮಾಡುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಜ್ಞರ ಪ್ರಕಾರ 50 ವರ್ಷಕ್ಕೊಮ್ಮೆ ಗೇಟ್ ಬದಲಿಸಬೇಕು. ಇನ್ಮುಂದೆ ತಜ್ಞರು ಹೇಳಿದಂತೆ, ಜಲಾಶಯ ನಿರ್ವಹಣೆ ಮಾಡಲಾಗುತ್ತದೆ. ಸದ್ಯಕ್ಕೆ ನೀರು ನಿಲ್ಲಿಸೋದೆ ನಮ್ಮ ಗುರಿ. ಉಳಿದಿದ್ದೇಲ್ಲಾ ಆ ಮೇಲೆ ನೋಡೊಣ. ಮೊದಲನೇ ಬೆಳೆಗೆ ಯಾವುದೇ ತೊಂದರೆ ಇಲ್ಲಾ. ಗೇಟ್ ಕೂಡಿಸಿದ ಬಳಿಕವೂ ನಮ್ಮ ಬಳಿ 63 ಟಿಎಂಸಿ ನೀರು ಉಳಿಯುತ್ತದೆ. ರೈತರು ಯಾವುದೇ ಕಾರಣಕ್ಕೂ ಆತಂಕ ಪಡೋ ಅಗತ್ಯವಿಲ್ಲ ಎಂದರು.
ಆಂದ್ರಪ್ರದೇಶದ ಹಣಕಾಸು ಸಚಿವ ಪಿ.ಕೇಶವ್, ರಾಜ್ಯ ಸಚಿವರಾದ ಜಮೀರ್ ಅಹ್ಮದ್, ಬೋಸರಾಜು, ಶಿವರಾಜ್ ತಂಗಡಗಿ, ಸಂಸದರಾದ ಈ.ತುಕಾರಾಂ, ರಾಜಶೇಖರ ಹಿಟ್ನಾಳ್,
ಶಾಸಕರಾದ ಎಚ್.ಆರ್.ಗವಿಯಪ್ಪ, ಅಜಯ್ ಸಿಂಗ್, ಡಾ.ಶ್ರೀನಿವಾಸ, ಲತಾ ಮಲ್ಲಿಕಾರ್ಜುನ, ಜೆ.ಎನ್.ಗಣೇಶ್, ಕೃಷ್ಣಾನಾಯ್ಕ್ , ಬಿ.ಎಂ.ನಾಗರಾಜ್, ಕೆ.ರಾಘವೇಂದ್ರ ಹಿಟ್ನಾಳ್, ರಾಯದುರ್ಗ ಶಾಸಕ ಶ್ರೀನಿವಾಸ ಇತರರಿದ್ದರು.