ನ್ಯೂಸ್

ವಿಜಯನಗರ ನಿವಾಸಿಗಳು ನಿರಾಳ

| ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಸರ್ಕಾರಿ-ಖಾಸಗಿ ಜಮೀನುಗಳಲ್ಲಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಅಥವಾ ಕಂದಾಯ ಗ್ರಾಮಗಳ ಭಾಗವಾಗಿ ಪರಿವರ್ತಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಪ್ರಕ್ರಿಯೆಯಲ್ಲಿ ವಿಜಯನಗರ ಜಿಲ್ಲಾಡಳಿತ 349 ಜನವಸತಿ ಪ್ರದೇಶಗಳನ್ನು ಗುರುತಿಸುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ.

ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್, ಕಾಲೋನಿ ಮತ್ತಿತರ ಜನವಸತಿಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸುವ ಪ್ರಕ್ರಿಯೆ ರಾಜ್ಯದಲ್ಲಿ ಪ್ರಗತಿಯಲ್ಲಿದೆ. ರಾಜ್ಯದ ವಿವಿಧ ಜಿಲ್ಲೆಯಲ್ಲಿ ಈಗಾಗಲೇ 3575 ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ವಿಜಯನಗರ ಜಿಲ್ಲೆ 349 ಜನವಸತಿ ಪ್ರದೇಶಗಳನ್ನು ಗುರುತಿಸಿದ್ದು, ಕಂದಾಯ ಗ್ರಾಮಗಳನ್ನು ಘೋಷಿಸಲು ಅಧಿಕಾರಿಗಳ ತಂಡ ಸಿದ್ಧತೆ ನಡೆಸುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಕಲಬುರಗಿ ಜಿಲ್ಲೆಯಲ್ಲಿ 325 ಜನವಸತಿ ಪ್ರದೇಶಗಳನ್ನು ಗುರುತಿಸಿ ಎರಡನೇ ಸ್ಥಾನದಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 309, ಚಿತ್ರದುರ್ಗ ಜಿಲ್ಲೆಯಲ್ಲಿ 299, ವಿಜಯಪುರ ಜಿಲ್ಲೆಯಲ್ಲಿ 192 ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಇನ್ನು ಬಳ್ಳಾರಿ, ಹಾವೇರಿ 72, ಕೊಪ್ಪಳ 34, ಗದಗ 30, ಬೆಂಗಳೂರು 20 ಕಡಿಮೆ ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರಲ್ಲಿ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಬಹುತೇಕ ಈ ಗ್ರಾಮಗಳ ಸಮಸ್ಯೆಯಿಲ್ಲ ಎಂದು ಹೇಳಲಾಗಿದೆ.

ಕಂದಾಯ ಗ್ರಾಮಕ್ಕೆ ಅನುಮೋದನೆ ಸಿಗಬೇಕು ಎಂದರೆ 50 ಅಥವಾ ಅದಕ್ಕಿಂತ ಹೆಚ್ಚಿನ ಮನೆಗಳಿರುವ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಅವಕಾಶವಿದೆ. ನಿಗದಿತ ನಮೂನೆಯಲ್ಲಿ ಅರ್ಜಿ ಸ್ವೀಕರಿಸಿದ ಬಳಿಕ ಸಾರ್ವಜನಿಕ ವಿಚಾರಣೆ ನಡೆಸಿ ಅರ್ಜಿದಾರರಿಗೆ ಜಮೀನು ಮಂಜೂರು ಮಾಡುತ್ತಾರೆ. ಪ್ರತಿ ಫಲಾನುಭವಿಗೆ ನಾಲ್ಕು ಸಾವಿರ ಚದರ ಮೀಟ‌ರ್ ಮೀರದಂತೆ ಅಥವಾ ಅವರು ನೈಜವಾಗಿ ಸ್ವಾಧೀನದಲ್ಲಿರುವ ಜಮೀನನ್ನು ಮಂಜೂರು ಮಾಡಲು ಅವಕಾಶವಿದೆ. ಆ ಜಮೀನನ್ನು ಸರ್ಕಾರದ ಸ್ವಾಧೀನಕ್ಕೆ ಪಡೆದುಕೊಂಡ ತಕ್ಷಣದಿಂದಲೇ ತಹಸೀಲ್ದಾರ್‌ಗಳು ಹಕ್ಕುಪತ್ರ ವಿತರಿಸಬಹುದು.

ಸಿಎಂ ಕೈಯಿಂದ ವಿತರಣೆ ?

ದಾಖಲೆ ರಹಿತ ಜನವಸತಿಗಳನ್ನು ಗುರುತಿಸುವಲ್ಲಿ ವಿಜಯನಗರ ಜಿಲ್ಲೆ ರಾಜ್ಯದಲ್ಲೇ ಮೊದಲಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ವಿಜಯನಗರದಲ್ಲೇ ಸಿಎಂ ಸಿದ್ದರಾಮಯ್ಯ ಹಕ್ಕು ಪತ್ರ ವಿತರಣೆ ಮಾಡುವ ಸಾಧ್ಯತೆಯಿದೆ.

ಹಕ್ಕು ಪತ್ರ ನೀಡಲು ಸಿದ್ಧತೆ

ಭೂಕಂದಾಯ ಕಾಯಿದೆ ನಿಯಮದಲ್ಲಿ 94 (ಡಿ) ಸೇರ್ಪಡೆ ಮಾಡಿ ಈ ಎಲ್ಲ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತನೆ ಮಾಡಲು ವಿಜಯನಗರ ಜಿಲ್ಲಾಡಳಿತ 349 ಜನವಸತಿ ಪ್ರದೇಶ ಗುರುತಿಸಿದೆ. ಇನ್ನೂ ಶೇ.5ರಷ್ಟ ಮಾತ್ರ ಬಾಕಿ ಇವೆ. ಹರಪನಹಳ್ಳಿ ತಾಲೂಕಿನಲ್ಲಿ 117 ಜನವಸತಿ ಪ್ರದೇಶ ಗುರುತಿಸಲಾಗಿದೆ. ಕೂಡ್ಲಿಗಿ 96, ಹೂವಿನ ಹಡಗಲಿ 48, ಹಗರಿಬೊಮ್ಮನಹಳ್ಳಿ 43, ಕೊಟ್ಟೂರು 30, ಹೊಸಪೇಟೆ 15 ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಜಿಲ್ಲಾಡಳಿದಿಂದ 181 ಪ್ರಾಥಮಿಕ ಅಧಿಸೂಚನೆ, 160 ಅಂತಿಮ ಅಧಿಸೂಚನೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 27341 ಹಕ್ಕು ಪತ್ರ ವಿತರಣೆ ಗುರಿಯಲ್ಲಿ 10147 ಹಕ್ಕು ಪತ್ರ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಉಳಿದ ಹಕ್ಕು ಪತ್ರಗಳ ಅಂತಿಮ ಹಂತದ ಪ್ರಕ್ರಿಯೆ ನಡೆಯುತ್ತಿದೆ. ಕಂದಾಯ ಹಾಗೂ ಗ್ರಾಮಾಧಿಕಾರಿ, ಸರ್ವೇ ಇಲಾಖೆ ಅಧಿಕಾರಿಗಳು ಕಳೆದ ಒಂದು ವರ್ಷದಲ್ಲಿ ಸಾಧನೆ ಮಾಡಿದ್ದಾರೆ ಎಂದು ವಿಜಯವಾಣಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸರ್ಕಾರದ ಆದೇಶದಂತೆ ಜಿಲ್ಲೆಯಲ್ಲಿ ಹೆಚ್ಚು ಜನವಸತಿ ಪ್ರದೇಶಗಳನ್ನು ಗುರುತಿಸಲಾಗಿದೆ. ಇದರಲ್ಲಿ 119 ಖಾಸಗಿ ಜಮೀನಿನಲ್ಲಿ (2ಇ) ಜನವಸತಿ ಪ್ರದೇಶಗಳಿವೆ. ಕಂದಾಯ ಗ್ರಾಮಕ್ಕೆ ಅನುಮೋದನೆ ಸಿಗಬೇಕು ಎಂದರೆ 50 ಅಥವಾ ಅದಕ್ಕಿಂತ ಹೆಚ್ಚಿನ ಮನೆಗಳಿರುವ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಲು ಅವಕಾಶವಿದೆ. ಜನವಸತಿಗಳಿರುವ ಜಮೀನಿನ ಮಾಲೀಕತ್ವ ಹೊಂದಿರುವ ವ್ಯಕ್ತಿಗಳಿಗೆ ಭೂ ಸುಧಾರಣಾ ಕಾಯ್ದೆಯ ಅಡಿಯಲ್ಲಿ ಪರಿಹಾರ ನೀಡಲಾಗುತ್ತದೆ.

ವಿಜಯನಗರ ಜಿಲ್ಲೆಯಲ್ಲಿ ಕಂದಾಯ ಗ್ರಾಮಕ್ಕೆ 349 ಹಟ್ಟಿ, ತಾಂಡಾಗಳನ್ನು ಗುರುತಿಸಲಾಗಿದೆ. ರಸ್ತೆ, ಶಾಲೆ, ಅಂಗನವಾಡಿ, ಚರಂಡಿ ನಿರ್ಮಾಣದಂತಹ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಮನೆಯ ಜಾಗ ನಮ್ಮ ಹೆಸರಿನಲ್ಲಿ ಇಲ್ಲ ಎನ್ನುವ ಆತಂಕದಲ್ಲಿ ಇದ್ದವರಿಗೆ ಹಕ್ಕಪತ್ರ ನೀಡಲಾಗುತ್ತದೆ. ಹಕ್ಕುಪತ್ರ ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಸೌಲಭ್ಯ ಪಡೆಯಲು ಅವಕಾಶವಿದೆ. | ಎಂ.ಎಸ್.ದಿವಾಕರ ಜಿಲ್ಲಾಧಿಕಾರಿ, ವಿಜಯನಗರ. ಹೊಸಪೇಟೆ ತಾಲೂಕಿನ 76 ವೆಂಕಟಾಪುರ ಗ್ರಾಮದ ಎರಡನೇ ವಾರ್ಡ್‌ನಲ್ಲಿ ಅಂದಾಜು 210 ಮನೆಗಳಿಗೆ ಈವರೆಗೂ ಹಕ್ಕುಪತ್ರ ಸಿಕ್ಕಿಲ್ಲ. ಹಲವು ವರ್ಷಗಳಿಂದ ಹಲವು ಕುಟುಂಬಗಳು ಇಲ್ಲಿ ವಾಸ ಮಾಡುತ್ತಿವೆ. ಬಹುತೇಕ ಮನೆಗಳು ಬುಕ್ಕಸಾಗರ ಗ್ರಾಪಂ ಪಿ-2ನಲ್ಲಿದೆ. ಆದರೆ, ಹಕ್ಕು ಪತ್ರಗಳು ವಿತರಣೆಯಾಗಿಲ್ಲ. ಮನೆಯಿದ್ದರೂ ಹಕ್ಕುಪತ್ರವಿಲ್ಲದೆ ಇತ್ತ ನೆಮ್ಮದಿಯಿಂದ ಇರಲೂ ಆಗದೆ, ಅತ್ತ ಮನೆ ಮಾರಾಟ ಮಾಡಲೂ ಆಗದೆ ಸಂಕಷ್ಟದಲ್ಲಿದ್ದಾರೆ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದರೂ ಹಕ್ಕುಪತ್ರ ಸಿಗುತ್ತಿಲ್ಲ. ಜಿಲ್ಲಾಡಳಿತದಿಂದ ಹಕ್ಕು ಪತ್ರ ವಿತರಣೆಯಾದರೆ ಹಲವು ಕುಟುಂಬಗಳಿಗೆ ಅನುಕೂಲ ಆಗಲಿದೆ. | ಎಸ್‌.ಎಂ.ಜಡಯ್ಯಸ್ವಾಮಿ ಗ್ರಾಪಂ ಸದಸ್ಯ, 76 ವೆಂಕಟಾಪುರ, ಬುಕ್ಕಸಾಗರ ಗ್ರಾಪಂ