ನ್ಯೂಸ್

ಮರುಪರೀಕ್ಷೆ ಬರೆಯುವವರಿಗೆ ಪರಿಹಾರ ಬೋಧನೆ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಪರಿಹಾರ ಬೋಧನೆಗೆ ಪದವಿಪೂರ್ವ ಶಿಕ್ಷಣ ಇಲಾಖೆ ಕ್ರಮ ವಹಿಸಿದೆ. ಈ ಹಿನ್ನೆಲೆಯಲ್ಲಿ ಉಪನ್ಯಾಸಕರ ಬೇಸಿಗೆ ರಜೆ ಕಡಿತಗೊಳಿಸಲಾಗಿದೆ.

ಈಗಾಗಲೇ ರಜೆಯಲ್ಲಿದ್ದ ಉಪನ್ಯಾಸಕರಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸೂಚಿಸಿದ್ದಾರೆ. ಏ.24ರಿಂದ ಮೇ.8ರ ವರೆಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಯಲಿದೆ. ಮೊದಲ ಪರೀಕ್ಷೆಯಲ್ಲಿ ಪಾಸ್ ಆದರೂ ಫಲಿತಾಂಶ ಉತ್ತಮಪಡಿಸಿಕೊಳ್ಳಲು ಇಚ್ಛಿಸುವವರು ಹಾಗೂ ಹಾಜರಾತಿ ಕೊರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗದವರು ಪೂರಕ ಪರೀಕ್ಷೆ ಬರೆಯಬಹುದು. ಜಿಲ್ಲೆಯಲ್ಲಿ 28 ಸರ್ಕಾರಿ ಪಿಯು, 14 ಅನುದಾನಿತ, 3 ವಸತಿ ಕಾಲೇಜುಗಳು ಸೇರಿದಂತೆ 45 ಪಿಯು ಕಾಲೇಜುಗಳಲ್ಲಿ ಪರಿಹಾರ ಬೋಧನೆ ನಡೆಯಲಿದೆ. ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ತರಗತಿ ನಡೆಯಲಿವೆ. ವಿಜಯನಗರ ಜಿಲ್ಲೆಯಲ್ಲಿ 13,294 ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆ ಬರೆದಿದ್ದು, 8207 ವಿದ್ಯಾರ್ಥಿಗಳು ಪಾಸಾಗಿದ್ದಾರೆ.

  1. ಉತ್ತಮ ಬೋಧನೆಗೆ ಆಸಕ್ತಿ ತೋರಲಿ

ಅಖಂಡ ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಕುಸಿತದ ನಂತರ ಶೈಕ್ಷಣಿಕ ಗುಣಮಟ್ಟದ ಕುರಿತು ಚರ್ಚೆ ನಡೆದಿದೆ. ಫಲಿತಾಂಶದ ಹಿನ್ನಡೆಗೆ ಕಾರಣದ ಹುಡುಕಲಾಗುತ್ತಿದೆ. ಸರ್ಕಾರಿ ಕಾಲೇಜುಗಳ ಕೆಲ ಉಪನ್ಯಾಸಕರು ಬಡ್ಡಿ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದಾರೆ. ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾಗಿರುವುದರಿಂದ ಬೋಧನೆಯತ್ತ ಆಸಕ್ತಿ ತೋರುತ್ತಿಲ್ಲ. ಉತ್ತಮ ಬೋಧನೆಗೆ ಆಸಕ್ತಿ ತೋರಲಿ ಎಂದು ಪಾಲಕರು ಆಗ್ರಹಿಸಿದ್ದಾರೆ.

ಉಪನ್ಯಾಸಕರ ಆಕ್ಷೇಪ

ಉಪನ್ಯಾಸಕರೊಂದಿಗೆ ಸಮಾಲೋಚನೆ ನಡೆಸಿದ ಬಳಿಕವೇ ಪರಿಹಾರ ಬೋಧನೆಗೆ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಆದರೆ, ರಜೆ ಕಡಿತಗೊಳಿಸಿದ ಕಾರಣ ಕೆಲ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪರೀಕ್ಷೆ ಹಾಗೂ ಮೌಲ್ಯಮಾಪನಕ್ಕಾಗಿ ಈಗಾಗಲೇ ರಜೆ ಕಡಿತವಾಗಿದ್ದು, ಮತ್ತೆ ರಜೆ ಕಡಿತ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಪರಿಹಾರ ಬೋಧನೆ ತರಗತಿ ನಡೆಸಲು ಪಿಯು ಇಲಾಖೆ ಉಪನ್ಯಾಸಕರಿಗೆ ಆದೇಶಿಸಲಾಗಿದೆ. ಪೂರಕ ಪರೀಕ್ಷೆಗೆ ಅನುಕೂಲವಾಗುವಂತೆ ವೇಳಾಪಟ್ಟಿ ತಯಾರಿಸಿ ಬೋಧನೆ ಮಾಡಲಾಗುತ್ತದೆ. | ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ