ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ದಾಳಿಂಬೆ ಬೆಳೆ ಸಮಗ್ರ ಉತ್ತೇಜನಕ್ಕಾಗಿ ಕೇಂದ್ರ ಸರ್ಕಾರ ದೇಶದಾದ್ಯಂತ 53 ಕ್ಲಸ್ಟರ್ ಗಳನ್ನು ಗುರುತಿಸಿದೆ. ಇದರಲ್ಲಿ ರಾಜ್ಯದ ಚಿತ್ರದುರ್ಗ, ವಿಜಯನಗರ ಮತ್ತು ತುಮಕೂರು ಜಿಲ್ಲೆಯ ಒಂಬತ್ತು ತಾಲೂಕುಗಳು ಸೇರಿವೆ. ಚಿತ್ರದುರ್ಗದಲ್ಲಿ ಮಾರುಕಟ್ಟೆ ಆರಂಭಕ್ಕೆ ಸಿದ್ದತೆ ನಡೆದಿದೆ.
ಕೃಷಿ ಉತ್ಪನ್ನಗಳ ರಫ್ತು ಉತ್ತೇಜಿಸುವ ಉದ್ದೇಶದಿಂದ ಮೂರು ಜಿಲ್ಲೆಯ ನಡುವೆ ಚಿತ್ರದುರ್ಗದಲ್ಲಿ ದಾಳಿಂಬೆ ಕ್ಲಸ್ಟರ್ ನಿರ್ಮಿಸಲು ರಾಷ್ಟ್ರೀಯ ತೋಟಗಾರಿಕೆ ಮಂಡಳಿ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ ಹಾಗೂ ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್ (ಎಐಸಿ), ಇವುಗಳ ತ್ರಿಪಕ್ಷೀಯ ಸಹಯೋಗದಲ್ಲಿ ಸಿದ್ಧತೆ ಆರಂಭಿಸಿದೆ. ಒಟ್ಟು 5 ವರ್ಷಗಳ ಅವಧಿಯ ಈ ಯೋಜನೆಯಾಗಿದ್ದು, ಯಶಸ್ಸು ಕಂಡರೆ ಮಂದೆ ಇನಷ್ಟು ದಾಳಂಬಿಗೆ ಪೂರಕವಾದ ಮಣ್ಣು ಹಾಗೂ ವಾತಾವರಣವುಳ್ಳ ತಾಲೂಕು ಹಾಗೂ ಜಿಲ್ಲೆಗಳಲ್ಲಿ ವಿಸ್ತರಣೆ ಆಗಲಿದೆ. ಮಂಡಳಿಯ ಅಧಿಕಾರಿಗಳು ದಾಳಿಂಬೆ ಬೆಳೆಗಾರರ ಸಲಹೆ ಪಡೆದು ರೂಪುರೇಷ ತಯಾರಿಸುವಲ್ಲಿ ತಲ್ಲೀನರಾಗಿದ್ದಾರೆ.
ದಾಳಿಂಬೆ ಕ್ಲಸ್ಟರ್‌ಗೆ ಬೆಳಗಾವಿ ಹಾಗೂ ಮೈಸೂರು ಜಿಲ್ಲೆಗಳನ್ನು ಆರಂಭದಲ್ಲಿ ಆಯ್ಕೆ ಮಾಡಲಾಗಿತ್ತು. ನಂತರ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಮೊಳಕಾಲ್ಮೂರು, ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಕೂಡ್ಲಿಗಿ ತಾಲೂಕು ಹಾಗೂ ತುಮಕೂರು ಜಿಲ್ಲೆಯ ಶಿರಾ ತಾಲುಕುಗಳು ಮಳೆ ಕಡಿಮೆ ಬೀಳುವ ಪ್ರದೇಶಗಳು ದಾಳಿಂಬೆ ಬೆಳೆಗೆ ಸೂಕ್ತ ಎಂದು ಪರಿಗಣಿಸಲಾಗಿದೆ. ಅದರ ಜತೆಗೆ ಇಲ್ಲಿನ ಮಣ್ಣಿನ ಗುಣವು ಬೆಳೆಗೆ ಅನುಕೂಲವಾಗಿದೆ. ಆದ್ದರಿಂದ ಈ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿವೆ. ಜಿಲ್ಲೆಗಳ ವ್ಯಾಪ್ತಿಯಲ್ಲಿ ದಾಳಿಂಬೆ ಬೆಳೆಯುವ ರೈತರಿಗೆ ಶೇ.40ರಷ್ಟು ಸಬ್ಸಿಡಿ ದರದಲ್ಲಿ ಸಮಗ್ರ ಸೌಲಭ್ಯದ ಬೆಂಬಲ ಒದಗಿಸಲಾಗುತ್ತದೆ. ಒಟ್ಟಾರೆ, ಐದು ವರ್ಷ ಅವದಿಗೆ ಈ ಪ್ರದೇಶದಲ್ಲಿ 15 ಸಾವಿರ ಎಕರೆ ಪ್ರದೇಶವನ್ನು ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ಗುರಿ ಹೊಂದಿದೆ. ಈಗಾಗಲೇ ಮೂರು ಜಿಲ್ಲೆಯ 19 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ದಾಳಂಬೆ ಬೆಳೆಯಲಾಗುತ್ತಿದೆ.
ಸಿರಿಧಾನ್ಯ ಬೆಳೆಯುತ್ತಿದ್ದ ಈ ತಾಲೂಕುಗಳಲ್ಲಿ ದಾಳಿಂಬೆಯನ್ನು ಎಥೇಚ್ಛವಾಗಿ ಬೆಳೆಯಲಾಗಿತ್ತು. ಆರಂಭದಲ್ಲಿ ದಾಳಿಂಬೆ ಉತ್ತಮ ಇಳುವರಿ ಹಾಗೂ ಲಾಭ ತಂದು ಕೊಟ್ಟಿತ್ತು. ದುಂಡಾಣು ರೋಗ ಹಾಗೂ ಸೊರಗು ರೋಗ ಕಾಣಿಸಿಕೊಂಡ ಬಳಿಕ ರೈತರು ಕೈಸುಟ್ಟುಕೊಂಡರು. ದುಂಡಾಣು ರೋಗವನ್ನು ನಿವಾರಿಸಲು ಬೆಳೆಗಾರರಿಗೆ ಸೂಕ್ತ ಸಲಹೆ ಸಿಗಲಿಲ್ಲ. ತೋಟಗಾರಿಕೆ ಇಲಾಖೆ ಕೂಡ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಯಿತು ಎಂಬ ಕೊರಗು ಬೆಳೆಗಾರರಲ್ಲಿದೆ. ಲಕ್ಷಾಂತರ ರೂಪಾಯಿ ಬಂಡಾವಳ ಹೂಡಿ ದಾಳಿಂಬೆ ಹಣ್ಣಿನ ನಿರೀಕ್ಷೆಯಲ್ಲಿದ್ದ ರೈತರು ನಷ್ಟದ ಹಾದಿ ತುಳಿಯಬೇಕಾಯಿತು. ಬಿರುಗಾಳಿ ಹಾಗೂ ಮಳೆಯು ರೋಗ ಹರಡುವ ವಾಹಕಗಳಾದವು. ಒಂದರಿಂದ ಮತ್ತೊಂದು ತೋಟಕ್ಕೆ ರೋಗ ವೇಗವಾಗಿ ಹರಡಿತು. ಖಾಸಗಿ ಕಂಪನಿಗಳು ಸೂಚಿಸಿದ ಕೀಟನಾಶಕ ಸಿಂಪಡಿಸಿದ ಬಹುತೇಕರು ಇನ್ನಷ್ಟು ಸಮಸ್ಯೆಗೆ ಸಿಲುಕಿದರು. ಎಷ್ಟೇ ಶ್ರಮವಹಿಸಿದರೂ ದುಂಡಾಣು ರೋಗ (ಬ್ಯಾಕ್ಟೀರಿಯಲ್ ಬೈಟ್) ಹಾಗೂ ಸೊರಗು ರೋಗ (ಡೈ ಬ್ಯಾಕ್ಟ್) ನಿಯಂತ್ರಣಕ್ಕೆ ಬರಲಿಲ್ಲ. ಸಾವಿರಾರು ಹೆಕ್ಟೇರ್ ಪ್ರದೇಶದ ದಾಳಿಂಬೆ ಸಂಪೂರ್ಣ ನಾಶವಾಯಿತು. ಈಗ ಆ ಸಮಸ್ಯೆ ದೂರವಾಗಲಿದ್ದು ಚಿತ್ರದುರ್ಗದಲ್ಲಿ ದಾಳಿಂಬೆ ಕ್ಲಸ್ಟರ್‌ಗೆ ಅವಕಾಶ ಸಿಕ್ಕಿರುವುದು ಬೆಳೆಗಾರರಲ್ಲಿ ಹೊಸ ಭರವಸೆ ಮೂಡಿಸಿದೆ.
ದಾಳಿಂಬೆ ಬೆಳೆಯನ್ನು ತಮಿಳುನಾಡಿನ ಚೆನ್ನೈ ಮಾರುಕಟ್ಟೆಗೆ ಕೊಂಡೊಯ್ಯಬೇಕಾಗಿತ್ತು. ಈಗ ಈ ಭಾಗದಲ್ಲಿ ಮಾರುಕಟ್ಟೆ ಆರಂಭಕ್ಕೆ ಸಿದ್ದತೆ ನಡೆದಿದೆ. ದಾಳಿಂಬೆ ದಾಸ್ತಾನು, ತಜ್ಞರೊಂದಿಗೆ ಸೂಕ್ತ ಸಲಹೆ, ಹಣ್ಣಿನ ಬಾಕ್ಸ್, ಸಬ್ಸಿಡಿ ಲಭ್ಯವಾಗಲಿದೆ. ಚಿತ್ರದುರ್ಗದಲ್ಲಿ ಕ್ಲಸ್ಟರ್ ನಿರ್ಮಿಸಲು ಎಐಸಿ ಮುಂದಾಗಿದೆ. ರೈತರಿಗೆ ತರಬೇತಿ, ಕೋಲ್ಡ್ ಸ್ಟೋರೇಜ್, ಬ್ಯಾಂಕ್ ಸಾಲ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆ, ಸಿಂಗಲ್ ವಿಂಡೋ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಉತ್ತಮವಾದ ರೈತ ಸ್ನೇಹ ಮಾರುಕಟ್ಟೆ ನಿರ್ಮಾಣವಾಗಲಿದೆ. ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದು, ರೈತರೊಂದಿಗೆ ಸಮಾಲೋಚನಾ ಸಭೆ ನಡೆಸಲಿದ್ದಾರೆ. ಡಿಸೆಂಬರ್ ವೇಳೆಗೆ ರೂಪುರೇಷ ಸಿದ್ಧವಾಗುವ ಸಾಧ್ಯತೆ ಇದೆ.
ದಾಳಿಂಬೆ ಸಸಿಗಳಿಗೆ ಸದ್ಯ ಶೇ.40ರಷ್ಟು ಸಬ್ಸಿಡಿ ಸಿಗುತ್ತಿದೆ. ಕ್ಲಸ್ಟರ್ ಬಳಿಕ ಸಬ್ಸಿಡಿ ಮೊತ್ತ ಇನಷ್ಟು ಹೆಚ್ಚಳ ಆಗುವ ಸಾದ್ಯತೆ. ದಾಳಿಂಬೆಗೆ ತಗಲುವ ರೋಗಕ್ಕೆ ಸಿಂಪಡಿಸುವ ಕೀಟನಾಶಕದ ಬಗ್ಗೆ ಸರಿಯಾದ ತಿಳಿವಳಿಕೆ ರೈತರಲ್ಲಿಲ್ಲ. ದುಬಾರಿ ಬೆಲೆಯ ಕೀಟನಾಶಕ ಸಿಂಪಡಿಸಿ ಬೆಳೆಗಾರರು ಹೈರಾಣಾಗಿದ್ದಾರೆ. ಉತ್ತಮ ಗುಣಮಟ್ಟದ ಕೀಟನಾಶಕ ಹಾಗೂ ಸಿಂಪಡಣೆ ವಿಧಾನದ ಮಾಹಿತಿ ಲಭ್ಯವಾಗಲಿದೆ. ಮಾರುಕಟ್ಟೆಯಲ್ಲಿ ಹಣ್ಣಿಗೆ ಸರಿಯಾದ ಬೆಲೆ ಸಿಗದಿದ್ದಾಗ ದಾಸ್ತಾನು ಮಾಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಆಗಲಿದೆ ಎಂಬುದು ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾಹಿತಿ
ದಾಳಿಂಬೆ ಕ್ಲಸ್ಟರ್‌ಗೆ ಚಿತ್ರದುರ್ಗವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಐಸಿ ಸಂಸ್ಥೆಯ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ ದಾಳಿಂಬೆ ಬೆಳೆ ವೀಕ್ಷಣೆ ಮಾಡಿದ್ದಾರೆ. ತೋಟಗಾರಿಕೆ ಇಲಾಖೆ ಅಗತ್ಯ ಸಹಕಾರ ನೀಡಲಿದೆ. ಗುಣಮಟ್ಟದ ಸಸಿ, ಮಾರುಕಟ್ಟೆಯ ಬಗ್ಗೆ ಯೋಜನೆ ಸಿದ್ಧವಾಗಲಿದೆ.- ಚಿದಾನಂದ ಪುಜಾರ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ, ವಿಜಯನಗರ
ಅಸೋಸಿಯೇಟೆಡ್ ಇಂಡಸ್ಟ್ರಿಯಲ್ ಕಾರ್ಪೊರೇಷನ್’ (ಎಐಸಿ) ದಾಳಿಂಬೆ ಕ್ಲಸ್ಟರ್ ಗುತ್ತಿಗೆ ಹಿಡಿದಿದೆ. ಮುಂದಿನ ದಿನಗಳಲ್ಲಿ ದಾಳಿಂಬೆ ಬೆಳೆಗಾರರಿಗೆ ಮಾರ್ಗದರ್ಶನ, ಸರ್ಕಾರದ ಯೋಜನೆಗಳು ಸೇರಿದಂತೆ ಇತರೆ ಮೂಲ ಸೌಕರ್ಯದೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆ ನಿರ್ಮಾಣ ಮಾಡಲು ಚಿತ್ರದುರ್ಗದಲ್ಲಿ ಸಜ್ಜಾಗಿದ್ದೇವೆ.- ಮನೋಜ್ ಕುಶಾಲಪ್ಪ, ಯೋಜನ ನಿರ್ದೇಶಕ, ಬೆಂಗಳೂರು