ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ವಿಘ್ನವಿನಾಶಕ ಗಣೇಶ, ವರ ಪ್ರದಾಯಿನಿ ಗೌರಿ ಹಬ್ಬ ಸಮೀಪಿಸುತ್ತಿದೆ. ಸೆ.06, 07ಕ್ಕೆ ಮನೆ–ಮನಗಳಲ್ಲಿ ಹಬ್ಬದ ಸಂಭ್ರಮ ಮೂಡಲಿದೆ. ಒಂದೆಡೆ ಯುವಕ ಸಂಘಗಳು ಈಗಾಗಲೇ ಗೌರಿ–ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿವೆ. ಇನ್ನೊಂದೆಡೆ ಕೊಲ್ಕತ್ತಾ ಕಲಾವಿದರ ಕೈಯಲ್ಲಿ ತಯಾರಾಗುತ್ತಿರುವ ಆಕರ್ಷಕ ಮೂರ್ತಿಗಳು ಸಿದ್ದಗೊಳ್ಳುತ್ತಿವೆ. ಇನ್ನೂ ಸ್ಥಳೀಯ ಕಲಾವಿದರು ಕೂಡ ಬಿಡುವಿಲ್ಲದೆ ಗಣೇಶ ಮೂರ್ತಿಗಳಿಗೆ ರೂಪ ಕೊಡುತ್ತಿದ್ದಾರೆ.
ಹೊಸಪೇಟೆ ಎಂದರೆ ಸಾಂಪ್ರದಾಯಿಕ, ಪರಿಸರಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ತಯಾರಿಕೆಗೆ ಬಲು ಪ್ರಸಿದ್ಧಿ ಪಡೆದ ನಗರವಾಗಿದೆ. ಕೊಲ್ಕತ್ತದಿಂದ ಬಂದ 10 ಕುಟುಂಬಗಳ 100 ಕ್ಕೂ ಹೆಚ್ಚು ಕಲಾವಿದರು ಹಬ್ಬಕ್ಕೆ ನಾಲ್ಕು ತಿಂಗಳ ಮುಂಚಿನಿAದಲೇ ಮೂರ್ತಿ ತಯಾರಿಸುವ ಕಾಯಕದಲ್ಲಿ ತೊಡಗಿದ್ದಾರೆ. ಇನ್ನೂ ಪದವಿ ಮುಗಿಸಿ ಬೆಂಗಳೂರು, ಮೈಸೂರು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದ ಸ್ಥಳೀಯ ಕಲಾವಿದರ ಮಕ್ಕಳು ನಗರಕ್ಕೆ ಹಿಂದಿರುಗಿ ಬಂದಿದ್ದು ಮಣ್ಣಿನ ಜತೆ ಕೆಲಸ ಮಾಡುತ್ತಿದ್ದಾರೆ.
ನಗರದ ಆರ್‌ಟಿಒ ಕಚೇರಿ, ಡ್ಯಾಂ ರಸ್ತೆ, ಕಾಲೇಜು ರಸ್ತೆ, ಅಂಬಾಭವಾನಿ ದೇಗುಲ, ಸಂಡೂರು ರಸ್ತೆ, ಸಣ್ಣಕ್ಕಿ ವೀರಭದ್ರ ದೇವಸ್ಥಾನ, ಬಸವಣ್ಣ ಕಾಲುವೆ, ಬಳ್ಳಾರಿ ರಸ್ತೆ ಸೇರಿ ಹತ್ತಾರು ಕಡೆ 4 ರಿಂದ 30 ಅಡಿಗಿಂತ ದೊಡ್ಡ ಆಕಾರದ ಪರಿಸರ ಸ್ನೇಹಿ ಗಣೇಶಮೂರ್ತಿಗಳ ತಯಾರಿ ಜೋರಾಗಿದೆ. ನಗರ ಸೇರಿದಂತೆ ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಗದಗ್, ಆಂದ್ರದ ಅನಂತಪುರ ಸೇರಿದಂತೆ ವಿವಿಧ ಕಡೆಯಿಂದ ಮೂರ್ತಿ ಖರೀದಿಗೆ ಜನರು ಬರುತ್ತಾರೆ.
ಗ್ರಾಮದಲ್ಲಿ ಗಣೇಶ ಮೂರ್ತಿ ತಾಯಾರಿಕೆ ಎಂಬುದು ಒಂದು ಆಂದೋಲನವಾಗಿದೆ. ಎಲ್ಲೆಡೆ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್), ಅಚ್ಚಿನ ಗಣಪತಿಗಳು ಜನರ ಗಮನ ಸೆಳೆಯುತ್ತದೆ. ಆದರೆ, ಇದಕ್ಕೆ ಅವಕಾಶವಿಲ್ಲ. ಪಿಒಪಿಗಿಂತ ಆಕರ್ಷಣೆಯಾಗಿ ಸಂಪೂರ್ಣ ಮಣ್ಣಿನಿಂದ ಮೂರ್ತಿ ತಯಾರಿಸುತ್ತಿದ್ದಾರೆ. ಕಲಾವಿದರು ಭತ್ತದ ಹುಲ್ಲು, ಬಿದಿರು, ಮಣ್ಣು ಹಾಗೂ ನೈಸರ್ಗಿಕ ಬಣ್ಣ ಬಳಸಿ ಪರಿಸರ ಸ್ನೇಹಿ ಬೃಹತ್ ಗಣೇಶ ಮೂರ್ತಿಗಳನ್ನು ಪಿಒಪಿ ಮೂರ್ತಿಗಳು ನಾಚಿಕೆ ಪಟ್ಟುಕೊಳ್ಳುವಷ್ಟು ಅಂದವಾಗಿ ಮೂಡಿ ಬಂದಿವೆ. ಆಕಾರ, ಆಕರ್ಷಣೆಗೆ ತಕ್ಕಂತೆ ಮೂರು ಸಾವಿರ ರೂ.ಗಳಿಂದ ಒಂದು ಲಕ್ಷ ರೂ.ವರೆಗೆ ಬೆಲೆ ನಿಗದಿ ಮಾಡಲಾಗಿದೆ.
ಸ್ಥಳೀಯ ಕಲಾವಿದರಲ್ಲಿ ಅರ್ಧ ಅಡಿಯಿಂದ ಆರೂವರೆ ಅಡಿ ಎತ್ತರದ ಗಣೇಶ ಮೂರ್ತಿಗಳು ಇಲ್ಲಿ ಲಭ್ಯ ಇವೆ. ಇನ್ನೂ ಕೊಲ್ಕತ್ತಾ ಕಲಾವಿದರ ಬಳಿ 5 ಅಡಿಯಿಂದ 30 ಅಡಿ ಗಿಂತಲು ಅಧಿಕ ಎತ್ತರದ ಮೂರ್ತಿಗಳು ತಯಾರಾಗುತ್ತಿವೆ. ಆನೆ, ನವಿಲು, ಆಂಜನೇಯ, ಸರ್ಪ, ಸಿಂಹ, ಜಿಂಕೆ, ಬಸವ, ಹಸು, ಉಗ್ರನರಸಿಂಹನ ಮೇಲೆ ಕುಳಿತ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿದೆ. ಶಿವನ, ಶ್ರೀಕೃಷ್ಣ ಅರ್ಜುನನ ಸಾರಥಿ, ಛತ್ರಪತಿ ಶಿವಾಜಿ, ಬಾಹುಬಲಿ, ಶ್ರೀರಾಮ, ಆಂಜನೇಯ, ಸಾಯಿಬಾಬಾ, ಉಗ್ರನರಸಿಂಹ... ಹೀಗೆ ನಾನಾ ಅವತಾರದ ಗಣೇಶಮೂರ್ತಿಗಳು ರೂಪು ತಳೆಯುತ್ತಿವೆ. ಶ್ರೀರಾಮನ ಅವತಾರದ ಹಾಗೂ ಸುಖಾನಸದಲ್ಲಿ ಸಿಂಹಾಸನದ ಮೇಲೆ ಕುಳಿತ ಭಂಗಿಯ ಮೂರ್ತಿಗಳು ಸಿದ್ಧಗೊಂಡಿವೆ. ಈಗಾಗಲೇ ಗ್ರಾಹಕರು ಹೊಸಪೇಟೆಗೆ ಭೇಟಿ ನೀಡುತ್ತಿದ್ದು ತಮಗೆ ಬೇಕಾದ ಭಂಗಿಯ ಗಣಪತಿ ಮೂರ್ತಿ ತಯಾರಿಸಿಕೊಡಲು ಕಾಯ್ದಿರಿಸುತ್ತಿದ್ದಾರೆ.
ಪರಿಸರಸ್ನೇಹಿ ಗಣೇಶ ಮೂರ್ತಿಗಳ ತಯಾರಿ, ಮಾರಾಟಕ್ಕೆ ಮಾತ್ರ ಆವಕಾಶವಿದೆ. ಪ್ಲಾಸ್ಟ್ರ್ ಆಫ್ ಪ್ಯಾರಿಸ್ ಮೂರ್ತಿಗಳ ತಯಾರಿ ಹಾಗೂ ಮಾರಾಟ ನಿಷೇಧಿಸಲಾಗಿದೆ. ಈ ಕುರಿತು ಜಾಗೃತಿ ಮೂಡಿಸಿ ಕ್ರಮಕೈಗೊಳ್ಳಲಾಗುತ್ತದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ
ಕಳೆದ 10 ವರ್ಷಗಳಿಂದ ಹೊಸಪೇಟೆಯಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಮೂರು ತಿಂಗಳು ಕುಟುಂಬ ಸಹಿತ ಇಲ್ಲೇ ಇದ್ದು ಗಣೇಶ ಹಬ್ಬದ ನಂತರ ನಮ್ಮ ರಾಜ್ಯಕ್ಕೆ ಮರಳುತ್ತೇವೆ. ಅಯೋಧ್ಯೆ ರಾಮನ ಮೂರ್ತಿಗಳು ಬೇಡಿಕೆ ಕಂಡು ಬಂದಿದೆ. - ನಿರ್ಮಲ್ ಪಾಲ್, ಗಣೇಶ ಮೂರ್ತಿ ತಯಾರಕ, ಕೊಳ್ಕೊತಾ