ನ್ಯೂಸ್

ಕತ್ತೆಗಾಗಿ ಕಂಗಾಲಾದ ಜನರಿಂದ ಪ್ರಕರಣ ದಾಖಲು

ಹೊಸಪೇಟೆ: ಕತ್ತೆ ಮಾರಾಟ ಮಾಡುತ್ತಿದ್ದ ಜಿನ್ನಿ ಮಿಲ್ಕ ಕಂಪನಿ ವಿರುದ್ಧ ಇಲ್ಲಿನ ಪಟ್ಟಣ ಪೊಲೀಸ್ ಠಾಣೆಯಲ್ಲಿ ೪೫ಕ್ಕೂ ಹೆಚ್ಚು ರೈತರು ಗುರುವಾರ ದೂರು ಸಲ್ಲಿಸಿದ್ದು, ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದಾರೆ.

ನಗರದ ಹಂಪಿ ರಸ್ತೆಯಲ್ಲಿ ಕಚೇರಿ ಹೊಂದಿರುವ ಜಿನ್ನಿ ಮಿಲ್ಕ ಕಂಪನಿ ಮೂರು ಕತ್ತೆಗೆ ೩ ಲಕ್ಷ ರು. ಹಣ ಪಡೆಯುತ್ತಿತ್ತು. ಈಗಾಗಲೇ ನಗರ ಸೇರಿದಂತೆ ಗದಗ, ಮಂಡ್ಯ, ಬೆಂಗಳೂರು ಸೇರಿದಂತೆ ೨೫೦ಕ್ಕೂ ಹೆಚ್ಚು ಜನರು ಕತ್ತೆಗಳನ್ನು ಖರೀದಿ ಮಾಡಿದ್ದಾರೆ. ಒಂದು ಲೀಟರ್ ಕತ್ತೆ ಹಾಲಿಗೆ ೨೩೫೦ ರೂ. ನೀಡಲಾಗುವುದು ಎಂದು ಕಂಪನಿ ಹಾಲು ಕೂಡ ಖರೀದಿ ಮಾಡುತ್ತಿತ್ತು. ಜನ ಮರಳೋ ಜಾತ್ರೆ ಮರಳೋ ಎಂಬAತೇ ಜನರು ಮುಗಿಬಿದ್ದು ಕತ್ತೆಗಳನ್ನು ಖರೀದಿ ಮಾಡಿದ್ದಾರೆ.

ಈಗ ಪೊಲೀಸರು ತನಿಖೆ ಮಾಡುತ್ತಿರುವ ಸಮಯದಲ್ಲೇ ಈ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಮುರಳಿ, ವ್ಯವಸ್ಥಾಪಕ ಶಂಕರ್ ಎಂಬವರ ಮೊಬೈಲ್‌ಗಳು ಕೂಡ ಸ್ವೀಚ್ ಆಫ್ ಆಗಿದ್ದು, ಈಗ ಕತ್ತೆ ಖರೀದಿ ಮಾಡಿರುವ ರೈತರು ಕೂಡ ಕಂಗಾಲಾಗಿದ್ದಾರೆ. ಹಾಗಾಗಿ ಪೊಲೀಸರ ಮೊರೆ ಹೋಗಿದ್ದು, ಪೊಲೀಸರು ದೂರು ಸ್ವೀಕಾರ ಮಾಡಿ ತನಿಖೆಗೆ ಇಳಿದಿದ್ದಾರೆ. ಇದಕ್ಕೂ ಮುನ್ನ ಕಚೇರಿ ಸಿಬ್ಬಂದಿ ಹಾಗೂ ಕತ್ತೆಗಳನ್ನು ಖರೀದಿ ಮಾಡಿರುವ ರೈತರು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಪೊಲೀಸರು ಕೂಡ ಪ್ರಾಥಮಿಕ ತನಿಖೆ ಕೈಗೊಂಡಿದ್ದು, ಕಂಪನಿಯ ವ್ಯವಹಾರದ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ರಾಜ್ಯಾದ್ಯಂತ ಈ ವ್ಯವಹಾರ ಹರಡಿಕೊಂಡಿದೆ ಎಂದು ಪೊಲೀಸ್ ಮೂಲಗಳೂ ತಿಳಿಸಿವೆ.