ನ್ಯೂಸ್

ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯಿರಿ

ಮಂಜುನಾಥ

ಹೊಸಪೇಟೆ: ರೈತರಿಗೆ ನೀಡಿರುವ ನೋಟಿಸ್ ಹಿಂಪಡೆಯುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ನಗರದಲ್ಲಿ ಸೋಮವಾರ ತಹಸೀಲ್ದಾರ್ ಶೃತಿ ಎಂ.ಮಳ್ಳನಗೌಡ್ರಗೆ ಮನವಿ ಸಲ್ಲಿಸಿದರು.

ಜಿಲ್ಲಾದ್ಯಾಕ್ಷ ಸಿ.ಎ.ಗಾಳೆಪ್ಪ ಮಾತನಾಡಿ, ನಾವು ತುಂಗಭದ್ರ ಜಲಾಶಯ ನಿರ್ಮಾಣಕ್ಕೆ ಮನೆ ಮಠ, ಆಸ್ತಿ ಪಾಸ್ತಿಯನ್ನು ಕಳೆದುಕೊಂಡ ಜನರಿದ್ದೇವೆ. ನಮ್ಮ ಗ್ರಾಮಗಳು ತಾರಿಹಳ್ಳಿ, ಬಸಾಪುರ, ಗೌರಿಪುರ, ಅನ್ವೇರಿ, ಚಿಮ್ನಹಳ್ಳಿ ಹಾಗೂ ಇನ್ನಿತರ ಹಳ್ಳಿಗಳು ಜಲಾಶಯ ನಿರ್ಮಾಣವಾದ ಬಳಿಕ ಮುಳುಗಡೆಯಾಗಿವೆ. ಜಲಾಶಯ ನಿರ್ಮಾಣ ಮಾಡಿ 7 ದಶಕಗಳು ಕಳೆದರೂ ನಮಗೆ ಜಲಾಶಯದ ನೀರು ಕುಡಿವ ಮತ್ತು ಕೃಷಿ ಚಟುವಟಿಕೆಗಳಿಗೆ ನೀರು ಪುರೈಕೆಯಾಗಿತ್ತಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಂದಿಬಂಡಿ, ದೇವಲಾಪುರ ಮತ್ತು ಡಣಾಯಕನಕೆರೆ ಗ್ರಾಮಸ್ಥರಾದ ನಾವು ಅಲ್ಲಿ ಇಲ್ಲಿ ಸರ್ಕಾರಿ ಭೂಮಿಯನ್ನು ಅರ್ದ ಎಕರೆಯಿಂದ ‌ಒಂದು ಎಕರೆ ಜಮೀನಿನಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿದ್ದೇವೆ.

ಸರ್ಕಾರದಿಂದ ನಮ್ಮ ತಾತನವರಿಗೆ ಅಲ್ಫ ಜಮೀನು ನೀಡಿದ್ದಾರೆ. ಈಗ ಕುಟುಂಬಗಳು ಬೆಳೆದಂತೆಲ್ಲ ಜಾಗ ಕೊರೆತೆ ಉಂಟಾಗಿದೆ. ನಾವು ಪೂರ್ಣ ಪ್ರಮಾಣದಲ್ಲಿ ಕೃಷಿಯನ್ನೇ ನೆಚ್ಚಿಸಿಕೊಂಡು ಬದುಕನ್ನು ಕಟ್ಟಿಕೊಂಡಿದ್ದೇವೆ. ಅದೇ ಜಮೀನು ಕಸಿದುಕೊಂಡರೆ ನಾವುಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ. ಹಾಗಾಗಿ ಇರೋ ಅಲ್ಪ ಸ್ವಲ್ಪ ಭೂಮಿಯನ್ನು ನಾವು ಉಳುಮೆ ಮಾಡುವ ರೈತರನ್ನು ಪರಿಶೀಲನೆ ಮಾಡಿ ಅವರ ಹೆಸರಿಗೆ ಹಕ್ಕು ಪತ್ರಗಳು ಮಾಡಿಕೊಟ್ಟು ಜೀವನ ಸಾಗಿಸುವುದಕ್ಕೆ ಅನುವು ಮಾಡಿಕೊಳ್ಳಬೇಕು. ಅಧಿಕಾರಿಗಳು ಜಾರಿ ಮಾಡಿರುವ ನೋಟಿಸ್‌ಗಳನ್ನು ಮೂರು ದಿನದ ಒಳಗಡೆ ಹಿಂಪಡೆದು ಉಳುಮೆ ಮಾಡುವ ರೈತರಿಗೆ ಪಟ್ಟಾವನ್ನು ನೀಡಬೇಕು. ನೋಟಿಸ್‌ನ್ನು ಹಿಂಪಡೆಯದೇ ಇದ್ದಲ್ಲಿ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಆಗ್ರಹಿಸಿದರು.

ಪ್ರಮುಖರಾದ ಬೀನಾ ರೂಪಾಲತಾ, ಕೆ.ರಾಧಾ, ಬಿ.ಪೂರ್ಣಿಮಾ, ಪಾರ್ವತಿ, ಲಲಿ, ಗೌರಮ್ಮ ಇತರರಿದ್ದರು.