ನ್ಯೂಸ್

ಬೌಬೌ ದಾಳಿಗೆ ಹೌಹಾರಿದ ಜನ

ಮಂಜುನಾಥ
  • ಜಿಲ್ಲೆಯಲ್ಲಿ 8 ತಿಂಗಳಲ್ಲಿ ಮಕ್ಕಳು ಸೇರಿದಂತೆ 4504 ಜನರ ಮೇಲೆ ದಾಳಿ
  • ಹೆದರಿಕೆಯಲ್ಲೇ ಹೆಜ್ಜೆಯಿಡುವ ಸಂದಿಗ್ಧ ಸ್ಥಿತಿ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಕಂದಮ್ಮಗಳು ಹೊರಗಡೆ ಆಡುವಂತಿಲ್ಲ, ವೃದ್ಧರು ವಾಯು ವಿಹಾರಕ್ಕೆ ಹೋಗುವಂತಿಲ್ಲ. ವಿಜಯನಗರ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಇಲ್ಲದಂತಾಗಿದೆ. ಮಕ್ಕಳು, ಮಹಿಳೆಯರು, ಹಿರಿಯರು, ಯುವಕರೆನ್ನದೇ ನಾಯಿಗಳ ಹೆದರಿಕೆಯಲ್ಲೇ ಹೆಜ್ಜೆಯಿಡುವ ಸಂದಿಗ್ಧ ಸ್ಥಿತಿ ನಿರ್ಮಾಣವಾಗಿದೆ.

ನಗರದಲ್ಲಿ ಇತ್ತೀಚೆಗೆ ಮಕ್ಕಳು ಸೇರಿದಂತೆ 10ಕ್ಕೂ ಅಧಿಕ ಜನರಿಗೆ ಜನರ ಮೇಲೆ ನಾಯಿಗಳು ಮಾರಾಣಂತಿಕ ದಾಳಿ ಮಾಡಿವೆ. ಇನ್ನೂ ಮಂಗಳವಾರ ಧರ್ಮಸಾಗರದಲ್ಲಿ ಮೂರು ವರ್ಷದ ಬಾಲಕಿಗೆ ಹುಚ್ಚು ನಾಯಿ ಎಳೆದಾಡಿದೆ. ಚಿತ್ತವಾಡ್ಗಿಯಲ್ಲಿ ಬಾಲಕನ ಕೆನ್ನೆಯನ್ನು ಕಳಚುವಂತೆ ನಾಯಿ ದಾಳಿ ಮಾಡಿತು. ಇದರಿಂದ ಮಕ್ಕಳು ಸೇರಿದಂತೆ ಸಾರ್ವಜನಿಕರು ಐಸಿಯುವಿನಲ್ಲಿ ಚಿಕಿತ್ಸೆ ಪಡೆದ ಉದಾಹರಣೆಗಳು ಸಾಕಷ್ಟಿದೆ. ಜಿಲ್ಲೆಯಲ್ಲಿ ಮಕ್ಕಳು ಸೇರಿದಂತೆ 4504 ಜನರ ಮೇಲೆ ನಾಯಿ ದಾಳಿ ನಡೆಸಿವೆ. ಇದರಿಂದ ಪೋಷಕರು ಮತ್ತು ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಜಿಲ್ಲೆಯಲ್ಲಿ ತ್ಯಾಜ್ಯದಿಂದ ಈಗಾಗಲೇ ಡೆಂಗೆ, ಚಿಕೂನ್ ಗುನ್ಯ ಪ್ರಕರಣಗಳು ಕಂಡು ಬರುತ್ತಿರುವುದು ಒಂದೆಡೆಯಾದರೆ, ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದು, ಇದರಿಂದ ಬೀದಿ ನಾಯಿಗಳಿಗೆ ಮೃಷ್ಠಾಹ್ನ ಸಿಕ್ಕಂತಾಗಿದೆ. ಇನ್ನು ಮಾಂಸದ ಅಂಗಡಿಗಳ ಬಳಿಯಂತೂ ಸ್ವಚ್ಛತೆ ಮಾಯವಾಗಿದ್ದು, ಎಲ್ಲೆಡೆ ತ್ಯಾಜ್ಯ ತುಂಬಿ ತುಳುಕುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಒಂದೆಡೆಯಾದರೆ ಕೊಳೆತ ತ್ಯಾಜ್ಯದಿಂದ ಉತ್ಪತ್ತಿಯಾಗುತ್ತಿರುವ ಸೊಳ್ಳೆ ಸಂತತಿ ಜಿಲ್ಲೆಯ ಜನತೆಯ ನಿದ್ದೆಗೆಡಿಸಿದೆ. ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಜನರ ಮೇಲೆ ಎರುಗುತ್ತಿವೆ. ತ್ಯಾಜ್ಯದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿ ರಸ್ತೆಗಳಲ್ಲಿ ನಾಯಿಗಳು ಅಡ್ಡ ಬಂದು ಸುಮಾರು ದ್ವಿಚಕ್ರವಾಹನ ಸವಾರರು ಬಿದ್ದು ಗಾಯಾಳುಗಳಾಗಿರುವ ಪ್ರಕರಣಗಳೂ ಇವೆ. ಅಲ್ಲದೆ, ಕೇರಿಗಳಲ್ಲಿ ಬೀದಿ ನಾಯಿಗಳು ಮಕ್ಕಳ ಮೇಲೆ ಎರಗಿ ಪ್ರಾಣಕ್ಕೆ ಹಾನಿ ತಂದೊಡ್ಡುತ್ತಿವೆ.

ಮಾAಸದ ತ್ಯಾಜ್ಯಕ್ಕೆ ಕಡಿವಾಣವಿಲ್ಲ

ನಗರ ಸೇರಿದಂತೆ ಬಹುತೇಕ ಕಡೆ ಘನತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ ಹಸಿ ಮತ್ತು ಒಣ ಕಸ ಬೇರ್ಪಡಿಸುವಲ್ಲಿ ವಿಫಲವಾಗಿದ್ದು, ಇದರ ಜತೆ ಬಹುತೇಕ ಕಡೆ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು, ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಮೂಲ ಕಾರಣ ಎನ್ನಲಾಗಿದೆ. ನಾಯಿಗಳು ಫೀಡಿಂಗ್ ಮತ್ತು ಬ್ರೀಡಿಂಗ್ ಮಾಡುವ ವೇಳೆ ಜನರ ಓಡಾಟದಿಂದ ತೊಂದರೆಯಾದಾಗ ಮನುಷ್ಯರ ಮೇಲೆ ಎರಗುತ್ತವೆ. ಸ್ಥಳೀಯ ಸಂಸ್ಥೆಗಳ ಪ್ರತಿ ವರ್ಷ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಮತ್ತು ಶಸ್ತ್ರ ಚಿಕಿತ್ಸೆ ಮಾಡಲು ಸುಪ್ರೀಂ ಕೋರ್ಟ್ ಅದೇಶವಿದ್ದರೂ, ಯಾರೊಬ್ಬರು ಪಾಲನೆ ಮಾಡುತ್ತಿಲ್ಲ. ಇದಕ್ಕೆ ಕಡಿವಾಣ ಯಾವಗ ಎನ್ನುವುದೆ ಜನರ ಯಕ್ಷಪ್ರಶ್ನೆಯಾಗಿದೆ.

ಹೊಸಪೇಟೆಯಲ್ಲಿ ಹೆಚ್ಚು

ನಗರ ಸೇರಿದಂತೆ ಜಿಲ್ಲೆಯ ವಿವಿಧ ಕಡೆ ಜನವರಿಯಿಂದ ಇಲ್ಲಿಯವರೆಗೆ ಸರಾಸರಿಯಲ್ಲಿ 500 ನಾಯಿ ದಾಳಿ ಪ್ರಕರಣಗಳು ದಾಕಲಾಗುತ್ತಿವೆ. ಹೊಸಪೇಟೆ ತಾಲೂಕಿನಲ್ಲಿ ತಿಂಗಳಿಗೆ 200 ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. 1839 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ. ಹೂವಿನ ಹಡಗಲಿ 839 ಪ್ರಕರಣಗಳು, ಹರಪನಹಲ್ಳಿ 579, ಹಗರಿಬೊಮ್ಮನಹಳ್ಳಿ 502, ಕೂಡ್ಲಿಗಿ 363, ಕೊಟ್ಟೂರು 293, ಇತರೆ ಜಿಲ್ಲೆಯಿಂದ 301 ಒಟ್ಟು 4504 ಪ್ರಕರಣಗಳು ದಾಖಲಾಗಿವೆ.

ನಿಯಮಾನುಸಾರ ನಾಯಿಗಳ ನಿಯಂತ್ರಣಕ್ಕೆ ಅಧಿಕಾರಿಗಳಿಗೆೆ ಸೂಚನೆ ನೀಡಲಾಗಿದೆ. ಆಸ್ಪತ್ರೆಗಲ್ಲಿ ಚಿಕಿತ್ಸೆಗೆ ಬೇಕಿರುವ ಔಷಧಿಗಳು ಲಭ್ಯವಿದೆ. ನಾಯಿಗಳಿಂದ ಮಕ್ಕಳನ್ನು ದೂರ ಇಡುವುದು ಸೂಕ್ತ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ
ಪ್ರತಿ ತಿಂಗಳು ಬೀದಿ ನಾಯಿ ಪ್ರಕರಣಗಳು ದಾಖಲಾಗುತ್ತಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ನಾಗಳ ಹಾವಳಿಗೆ ನಿಯಂತ್ರಿಸಲು, ಸಂತತಿ ಕಡಿಮೆ ಮಾಡಲು ಕ್ರಮ ವಹಿಸಬೇಕು. ನಗರಸಭೆ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ. - ಶಂಕರ್ ನಾಯ್ಕ, ಡಿಎಚ್‌ಒ, ವಿಜಯನಗರ

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಸಣ್ಣ ಕಂದಮ್ಮಗಳ ಮೇಲೆ ಎರುಗುವುದಲ್ಲದೆ ದ್ವಿಚಕ್ರವಾಹನಗಳಿಗೆ ಅಡ್ಡ ಬಂದು ಸುಮಾರು ಜನ ಬಿದ್ದು ಗಾಯಾಳುಗಳಾಗುತ್ತಿದ್ದಾರೆ. ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದು ತೀರ ಅನಿವಾರ್ಯವಾಗಿದೆ.

- ಶಿವುಕುಮಾರ್, ಸ್ಥಳೀಯ ನಿವಾಸಿ, ಹೊಸಪೇಟೆ