ಹೊಸಪೇಟೆ: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಮೊದಲ ಹಂತದಲ್ಲಿ 124 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿದ್ದು, ಕೆಲವರಿಗೆ ಸಮಾಧಾನ ತಂದಿದ್ದರೆ, ಟಿಕೆಟ್ ವಂಚಿತರನ್ನು ಅತೃಪ್ತಗೊಳಿಸಿದೆ.
ಪಕ್ಷದ ನಿರ್ಣಯದಿಂದ ವಿಜಯನಗರ ಜಿಲ್ಲೆಯ ಕಾಂಗ್ರೆಸ್‌ನ ಸ್ಪರ್ಧಾಕಾಂಕ್ಷಿಗಳಲ್ಲಿ ಅಸಮಾಧಾನದ ಹೊಗೆಯಾಡತೊಡಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಪಡೆದು, ಅಖಾಡಕ್ಕೆ ಇಳಿಯುವ ಸಲುವಾಗಿ, ಅನೇಕ ಆಕಾಂಕ್ಷಿಗಳು ಒಂದೆರಡು ವರ್ಷಗಳಿಂದ ನಿರಂತರವಾಗಿ ಸಿದ್ಧತೆ ನಡೆಸುತ್ತ ಬಂದಿದ್ದಾರೆ. ಪಕ್ಷ ಸಂಘಟನೆ, ಆಡಳಿತಾರೂಢ ಬಿಜೆಪಿ ಸರ್ಕಾರ ಕೈಗೊಂಡಿರುವ ಜನವಿರೋಧಿ ನೀತಿಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ಬಿಜೆಪಿ ವಿರೋಧಿ ಅಲೆ ರೂಪಿಸುವುದು, ಪಕ್ಷದ ಪರ ಮತದಾರರ ಒಲವು ಮೂಡಿಸುವುದು, ಎರಡು ಅವಧಿ ಅಧಿಕಾರ ವಂಚಿತ ಕಾಂಗ್ರೆಸ್ ಪಕ್ಷವನ್ನು ಮತ್ತೆ ಸರ್ಕಾರದಲ್ಲಿ ಕೂರಿಸಬೇಕೆಂಬ ದೃಢ ಸಂಕಲ್ಪದಿಂದ ಹಗಲಿರುಳು ಶ್ರಮಿಸಿದ್ದಾರೆ. ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿತ್ತು. ಅವರೆಲ್ಲ ಈ ಬಾರಿ ಪಕ್ಷದ ಟಿಕೆಟ್ ತಮಗೇ ಸಿಗುವ ವಿಶ್ವಾಸದಲ್ಲಿದ್ದರು. ಆದರೆ, ಶನಿವಾರ ಹೊರಬಿದ್ದ ಮೊದಲ ಪಟ್ಟಿಯಿಂದ ಅವಕಾಶ ವಂಚಿತ ಆಕಾಂಕ್ಷಿಗಳನ್ನು ಆಘಾತಕ್ಕೀಡುಮಾಡಿದೆ.
ನಮ್ಮಿಂದ ಅರ್ಜಿ ಪಡೆದಿದ್ದು ಯಾಕೆ?: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಮಣೆ ಹಾಕಿದ್ದರ ಬಗ್ಗೆ ಇತರೆ ಆಕಾಂಕ್ಷಿಗಳು ಪಕ್ಷದ ಹಿರಿಯ ನಾಯಕರ ಎದುರು ಅಸಮಾಧಾನ ತೋಡಿಕೊಂಡಿದ್ದಾರೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರಿಗೆ ಅವಕಾಶ ಖಚಿತ ಎನ್ನುವುದಾದರೆ, ನಾವು ಅರ್ಜಿ ಸಲ್ಲಿಸುತ್ತಿರಲಿಲ್ಲ. 2018ರ ಮಾದರಿಯಂತೆ ಆಕಾಂಕ್ಷಿಗಳ ಸಭೆ ನಡೆಸಿ, ಅಭ್ಯರ್ಥಿ ಆಯ್ಕೆಯನ್ನು ಆಯ್ಕೆ ಮಾಡಬಹುದಿತ್ತು. ಆ ನಿಟ್ಟಿನಲ್ಲಿ ಪ್ರಯತ್ನ ಮಾಡದೆ, ಏಕಮುಖ ನಿರ್ಧಾರ ಕೈಗೊಂಡಿದ್ದರಿಂದ ಇನ್ನುಳಿದವರ ಪರಿಸ್ಥಿತಿ ಏನು? ಹಾಲಿ ಶಾಸಕರಿಗೆ ಟಿಕೆಟ್ ಖಚಿತ ಎನ್ನುವುದಾದರೆ ಇತರರಿಂದ 2 ಲಕ್ಷ ರೂ. ಸಹಿತ ಅರ್ಜಿ ಪಡೆದಿದ್ದರ ಉದ್ದೇಶವೇನು? ಎಂದು ದೂರವಾಣಿ ಮೂಲಕ ಹಿರಿಯ ನಾಯಕರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಸಿದ್ದಗೊಳ್ಳುತ್ತಿದೆಯಾ ಅತೃಪ್ತರ ವೇದಿಕೆ?: ವಿಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಕೋರಿ ಮಾಜಿ ಶಾಸಕರಾದ ಎಚ್.ಆರ್.ಗವಿಯಪ್ಪ, ಸಿರಾಜ್ ಶೇಖ್, ಕೆ.ಎಸ್.ಎಲ್.ಸ್ವಾಮಿ, ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ್ ಹಿಟ್ನಾಳ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್‌ಎನ್‌ಎಫ್ ಇಮಾಮ್ ನಿಯಾಜಿ, ವೆಂಕಟರಾವ್ ಘೋರ್ಪಡೆ, ಲೆಕ್ಕ ಪರಿಶೋಧಕ ಮೊಹಮ್ಮದ್, ಪ್ರಮುಖರಾದ ವಿನಾಯಕ ಶೆಟ್ಟರ್, ಕುರಿ ಶಿವಮೂರ್ತಿ, ಎಲ್.ಸಿದ್ದನಗೌಡ ಸೇರಿ 11 ಜನ ಆಕಾಂಕ್ಷಿ ಇದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ಏಕಾಏಕಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪಗೆ ಟಿಕೆಟ್ ಘೋಷಿಸಿದೆ. ಈ ಅನಿರೀಕ್ಷಿತ ಬೆಳವಣಿಗೆ ಇನ್ನುಳಿದ ಆಕಾಂಕ್ಷಿಗಳನ್ನು ಕುಸಿದು ಬೀಳುವಂತೆ ಮಾಡಿದೆ. ಅನೇಕರು ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದ್ದರಿಂದ ಹೈಕಮಾಡ್ ನಡೆಗೆ ಆಪ್ತರ ಬಳಿ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಪಕ್ಷದ ತೀರ್ಮಾನದ ಕುರಿತು ಮುಂದಿನ ನಡೆ ಏನಾಗಬೇಕು ಎಂಬುದರ ಕುರಿತು ಚರ್ಚಿಸಲು ಅತೃಪ್ತರ ವೇದಿಕೆ ಸಿದ್ಧಗಳ್ಳುತ್ತಿದೆ ಎನ್ನಲಾಗುತ್ತಿದೆ.
ಶಿವಮೂರ್ತಿ ಅಸಮಾಧಾನ ಬಹಿರಂಗ: ವಿಯನಗರ ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಕುರಿ ಶಿವಮೂರ್ತಿ ಹೊಸಪೇಟೆಯಲ್ಲಿ ಕುರುಬರ ಸಂಘದಡಿ ಸುದ್ದಿಗೋಷ್ಠಿ ನಡೆಸಿ, ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಇದು ಕಾಂಗ್ರೆಸ್‌ನಲ್ಲಿರುವ ಅತೃಪ್ತರ ಅಸಮಾಧಾನಕ್ಕೆ ದೊಡ್ಡ ಸಾಕ್ಷಿ. ಟಿಕೆಟ್ ವಂಚಿತರಲ್ಲಿ ಕೆಲವರು ಫೋನ್ ಸ್ವಿಚ್‌ಆಫ್ ಮಾಡಿಕೊಂಡಿದ್ದಾರೆ. ಇನ್ನಿತರರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ವಿಜಯನಗರ ಕ್ಷೇತ್ರಕ್ಕೆ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ ಅವರನ್ನು ಆಯ್ಕೆ ಮಾಡಿರುವುದು ಅಭಿನಂದನೀಯ. ಆದರೆ, ಪಕ್ಷದ ಟಿಕೆಟ್ ಘೋಷಣೆಗೂ ಮುನ್ನ ಸೌಜನ್ಯಕ್ಕಾದರೂ ಇತರೆ ಆಕಾಂಕ್ಷಿಗಳ ಅಭಿಪ್ರಾಯ ಕೇಳಬೇಕಿತ್ತು. ಎಲ್ಲರನ್ನೂ ಒಮ್ಮತದೊಂದಿಗೆ ನಿರ್ಣಯಿಸಿದ್ದರೆ, ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರಿ ಗಟ್ಟಿಯಾಗುತ್ತಿತ್ತು ಎಂದಿದ್ದಾರೆ ವಿಜಯನಗರ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕುರಿ ಶಿವಮೂರ್ತಿ.
ಹಾಲಿ ಶಾಸಕರಿಗೆ ಟಿಕೆಟ್ ನೀಡುವ ಬಗ್ಗೆ ನಮ್ಮದೇನೂ ಅಭ್ಯಂತರವಿಲ್ಲ. ಈ ಕುರಿತು ಮೊದಲೇ ತಿಳಿಸಿದ್ದರೆ, ನಾವು ಅರ್ಜಿಯೇ ಸಲ್ಲಿಸುತ್ತಿರಲಿಲ್ಲ. ಕನಿಷ್ಠಪಕ್ಷ ಆಕಾಂಕ್ಷಿಗಳ ಸೌಹಾರ್ದಯುತವಾಗಿ ಅಭ್ಯರ್ಥಿ ಆಯ್ಕೆ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಈ ಬಗ್ಗೆ ಪಕ್ಷದ ಹಿರಿಯರ ಗಮನಕ್ಕೂ ತಂದಿದ್ದೇವೆ ಎಂದಿದ್ದಾರೆ ಹೂವಿನಹಡಗಲಿ ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಂಜಿನಪ್ಪ.