ನ್ಯೂಸ್

ವಿಜಯನಗರದ ಮೇಲೇಕೆ ಕೆಂಗಣ್ಣು?

ಮಂಜುನಾಥ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

  • ನೂತನ ಜಿಲ್ಲೆಗೆ ಸಿಎಂ ನೀಡುತ್ತಿಲ್ಲ ಆಧ್ಯತೆ
  • ಈಡೆರುತ್ತಿಲ್ಲ ಬೇಡಿಕೆಗಳು

ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಷದಲ್ಲಿ ಹಲವು ಬಾರಿ ಬೇಟಿ ನೀಡಿದ್ದಾರೆ. ಇಲ್ಲಿ ಪ್ರವಾಸಕ್ಕೆ ಬಂದಾಗೇಲ್ಲ ಈ ಭಾಗದ ಜನರಲ್ಲಿ ಸಿಎಂ ಬರುತ್ತಾರೆ, ಏನಾದರೂ ವಿಶೇಷ ಘೋಷಣೆ ಮಾಡುತ್ತಾರೆ ಎಂಬ ಕನಸಿನ ಸೇತುವೆ ಕಟ್ಟಿಕೊಳ್ಳುವ ಜನರ ಭರವಸೆಗಳು ಹುಸಿಯಾಗುತ್ತವೆ. ಬಜೆಟ್ ಆಗಲಿ, ಸಚಿವ ಸಂಪುಟ ಆಗಲಿ, ಎಲ್ಲಿಯೂ ವಿಜಯನಗರಕ್ಕೆ ಸ್ಥಾನ ಮಾನ ಸಿಗಲ್ಲ. ಈ ನೂತನ ಜಿಲ್ಲೆಯ ಮೇಲೆ ಏನಾದರೂ ಸಿಎಂಗೆ ಕೋಪ ಇದೆಯ ಎಂಬುದು ಸ್ವ ಪಕ್ಷದಲ್ಲೇ ಚರ್ಚೆ ಆಗುತ್ತಿದೆ.

ವಿಜಯನಗರ ಜಿಲ್ಲೆಯಾಗಿ ನಾಲ್ಕು ವರ್ಷ ಕಳೆಯುತ್ತಿದೆ. ಪ್ರವಾಸೋದ್ಯಮ, ಕೃಷಿ ಹಾಗೂ ಗಣಿಗಾರಿಕೆಯಲ್ಲಿ ಹೆಸರುವಾಸಿಯಾಗಿವೆ. ಈ ಜಿಲ್ಲೆಗೆ ಸೆ.22ರಂದು ತುಂಗಭದ್ರಾ ಜಲಾಶಯ ಬಾಗಿನ ಅರ್ಪಿಸಲಿದ್ದಾರೆ. ಈ ಕಾರ್ಯಕ್ರಮ ಸೇರಿ ಕಳೆದ ನವೆಂಬರ್ ನಿಂದ ಇಲ್ಲಿಯ ವರೆಗೆ 7 ಬಾರಿ ಭೇಟಿ ನೀಡುವಂತಾಗುತ್ತದೆ. ಸಿಎಂ ಪ್ರವಾಸ ಇದ್ದಾಗೇಲ್ಲ ಈ ಭಾಗದಲ್ಲಿ ಜನರು ಕನಸು ಕಾಣುತ್ತಾರೆ. ಆದರೆ, ಇಲ್ಲಿ ಭೇಟಿ ನೀಡುವ ಸಿಎಂ ಬರಿಗೈಯಿಂದಲೇ ಬಂದು ಹೋಗುತ್ತಾರೆ. ಯಾಕೋ ವಿಜಯನಗರ ಜಿಲ್ಲೆ ಎಂದರೆ ಮುಖ್ಯಂತ್ರಿಗಳಿಗೆ ಯಾವುದೋ ವಿಚಾರದಲ್ಲಿ ಮುನಿಸಿಕೊಂಡಿರಬೇಕು. ಆದ್ದರಿಂದ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ನೀಡುತ್ತಿಲ್ಲ. ಕಳೆದ ಬಿಜೆಪಿ ಸರ್ಕಾರದಲ್ಲಿ ಬಿಡುಗಡೆಯಾದ ಅನುದಾಗಳನ್ನೇ ಈಗಲೂ ನಡೆಯುತ್ತಿದೆ. ಆದರೆ ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ಯಾವುದೇ ವಿಶೇಷ ಅನುದಾನ ಬರುತ್ತಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಏನೆಲ್ಲಾ ಬೇಕು?

ನೂತನ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಕಚೇರಿ ನಿರ್ಮಾಣ, ಜಿಲ್ಲಾಮಟ್ಟದ ಕಚೇರಿಗಳ ಸ್ಥಾಪನೆ, ಹೊಸ ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ಓಡಾಟಕ್ಕೆ ವಾಹನಗಳ ಖರೀದಿ, ರಸ್ತೆ ನಿರ್ಮಾಣ, ಮೆಡಿಕಲ್ ಕಾಲೇಜು ಹೀಗೆ ಹತ್ತು ಹಲವು ಕೆಲಸಕ್ಕಾಗಿ ಅನುದಾನದ ಅಗತ್ಯ ಇರುತ್ತದೆ. ಇನ್ನೊಂದೆಡೆ ವಿಶ್ವವಿಖ್ಯಾತ ಹಂಪಿ, ತುಂಗಭದ್ರಾ ಜಲಾಶಯ, ದರೋಜಿ ಕರಡಿಧಾಮ, ಕಮಲಾಪುರದ ಜೈವಿಕ ಉದ್ಯಾನ ಸೇರಿ ಹಲವು ಪ್ರವಾಸಿ ತಾಣಗಳ ಮೂಲಕ ಜಗತ್ತಿನ ಗಮನ ಸೆಳೆದಿರುವ ನೂತನ ಜಿಲ್ಲೆ ಮೂಲ ಸೌಕರ್ಯಗಳ ಸಮಸ್ಯೆಗಳನ್ನು ಎದುರಿಸುತ್ತಿದೆ. ಕೂಡ್ಲಿಗಿ, ಕೊಟ್ಟೂರು, ಹರಪನಹಳ್ಳಿ ತಾಲೂಕುಗಳಲ್ಲಿ ಕೆರೆ, ಕಟ್ಟೆ ತುಂಬಿಸಬೇಕು. ಕುಡಿವ ನೀರಿನ ಸಮಸ್ಯೆ ನೀಗಿಸಬೇಕು ಎನ್ನುವುದು ಅನೇಕ ವರ್ಷಗಳ ಬೇಡಿಕೆಯಾಗಿದೆ. ಅದೇ ರೀತಿ ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿಯ ಕೆಲವು ಭಾಗಗಳಲ್ಲಿ ನೀರಾವರಿ ಸೌಕರ್ಯಕ್ಕೆ ಸಂಬAಧಿಸಿದ ಯೋಜನೆಗಳು ಪ್ರಗತಿಯಲ್ಲಿವೆ. ಆದರೆ, ಎರಡೂ ತಾಲೂಕಿನ ಅರ್ಧ ಭಾಗ ಈಗಲೂ ಮಳೆಯನ್ನೇ ಅವಲಂಬಿಸಿದೆ. ಈ ಭಾಗದಲ್ಲಿ ವಲಸೆ ಹೋಗುವುದು ಸಾಮಾನ್ಯ. ಅನೇಕರು ನಿರುದ್ಯೋಗಿಗಳಾಗಿದ್ದಾರೆ. ಸ್ಥಳೀಯ ಬಹುತೇಕರಲ್ಲಿ ಕೌಶಲ್ಯ ಇಲ್ಲ. ಕೈಗಾರಿಕೆಗಳಿದ್ದರೂ ಹೊರಗಿನವರು ಅಲ್ಲಿ ಆಕ್ರಮಿಸಿಕೊಂಡಿದ್ದಾರೆ.

ಕನಸಾದ ಸಕ್ಕರೆ ಕಾರ್ಖಾನೆ

ಈ ಭಾಗದ ಪ್ರಮುಖ ಬೇಡಿಕೆಗಳಲ್ಲಿ ಸಕ್ಕರೆ ಕಾರ್ಖಾನೆ. ದಶಕದಿಂದ ಈ ಭಾಗದ ರೈತರು ಮನವಿ ಸೇರಿದಂತೆ ಹಲವು ಹೋರಾಟಗಳನ್ನು ನಡೆಸಿದರು. ಇದರ ಪ್ರತಿ ಫಲವಾಗಿ ಕಳೆದ ಬಿಜೆಪಿ ಸರ್ಕಾರದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸ್ಥಳ ನಿಗದಿ ಪಡಿಸಿ, ಸಚಿವ ಸಂಪುಟದಲ್ಲಿ ಅನುಮೋದನೆ ಕೂಡ ಪಡೆದು, ಭೂಮಿ ಪೂಜೆ ಮಾಡಲಾಯಿತು. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದಕ್ಕೆ ಎಳ್ಳುನೀರು ಬಿಟ್ಟಂತಾಗಿದೆ. ಈ ವರೆಗೆ ರೈತರ ಆಸೆಯಾದ ಸಕ್ಕರೆ ಕಾರ್ಖಾನೆ ನಿರ್ಮಾಣ ಮಾತ್ರ ಆಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ.

ಕನ್ನಡ ವಿವಿ ಎಂದರೆ ಸಿಎಂ ದೂರ

ಕನ್ನಡ ಭಾಷಾ ಸಂಶೋಧನೆಗಾಗಿಯೇ ಸ್ಥಾಪಿಸಿರುವ ಏಕೈಕ ಕನ್ನಡ ವಿಶ್ವವಿದ್ಯಾಲಯ ಕಳೆದ ಕೆಲ ವರ್ಷಗಳಿಂದ ಅನುದಾನ ಸಮಸ್ಯೆಯಿಂದ ಸೊರಗುತ್ತಿದೆ. ನಾಡು, ನುಡಿ, ಕಲೆ, ಸಾಹಿತ್ಯ, ಸಂಶೋಧನೆಗಾಗಿ ಹುಟ್ಟಿಕೊಂಡಿರುವ ವಿವಿಗೆ ಸಮರ್ಪಕ ಅನುದಾನ ಬಿಡುಗಡೆ ಮಾಡಿ ಅಭಿವೃದ್ಧಿಗೆ ಒತ್ತು ಕೊಡುವ ಜತೆಗೆ ಅಲ್ಲಿನ ಸಮಸ್ಯೆಗಳ ಮೇಲೆ ಗಮನಹರಿಸಬೇಕಿದೆ. ಆದರೆ, ಸಿಎಂಗೆ ಕನ್ನಡ ವಿವಿ ಬಗ್ಗೆ ಪ್ರಶ್ನೆ ಮಾಡಿದರೆ, ಕಂಡ ಮಂಡಲ ಆಗುತ್ತಾರೆ.

ಜಿಲ್ಲೆಗಿಲ್ಲ ಸ್ಥಾನಮಾನ

ವಿಜಯನಗರ ಜಿಲ್ಲೆ ರಚನೆಯಾದ ಬಳಿಕ ಕೇಳಿ ಬಂದ ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಸಂಘ ಸಂಸ್ಥೆಗಳು ಸರ್ಕಾರದ ಗಮನ ಸೆಳೆತಯತ್ತಿದೆ. ಆದರೆ, ಕಳೆದ ರಾಜ್ಯ ಸರ್ಕಾರ ಎರಡು ಬಜೆಟ್ ಘೋಷಣೆಯಲ್ಲೂ ಯಾವುದೇ ವಿಶೇಷ ಅನುದಾನ ಸಿಗಲಿಲ್ಲ. ಸಚಿವ ಸಂಪುಟದಲ್ಲಿಯೂ ಜಿಲ್ಲೆಗೆ ಯಾವ ಮಾನ್ಯತೆಯೂ ಸಿಗಲಿಲ್ಲ. ಸಿಎಂ ಅಧಿಕಾರದ ನಂತರ 2023ರ ನ.02ರಂದು ಮೊದಲ ಬಾರಿ ಕನ್ನಡ ರಾಜ್ಯೋತ್ಸವದ ನಿಮಿತ್ತ ಹಂಪಿಗೆ ಭೇಟಿ ನೀಡಿದರು. ಫೆ.03ರಂದು ಹಂಪಿ ಉತ್ಸವ ಚಾಲನೆ ಹಾಗೂ ಮಾ.03ರಂದು ಕಮಲಾಪುರದಲ್ಲಿ ಪಲ್ಸ್ ಪೋಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೂನ್ ತಿಂಗಳಲ್ಲಿ ಹೊಸಪೇಟೆಯಲ್ಲಿ ಕೆಡಿಪಿ ಸಭೆ ಮಾಡಿದರು. ತುಂಗಭದ್ರಾ ಜಲಾಶಯದ 19 ಗೇಟ್ ಕಳಚಿದಾಗ ಆ.12ರಂದು ಭೇಟಿ ನೀಡಿದರು. ಈಗ ಸೆ.22ರಂದು ಜಲಾಶಯದಲ್ಲಿ ಬಾಗಿನ ಅರ್ಪಿಸಲು ಬರುತ್ತಿದ್ದಾರೆ. ಒಟ್ಟು 7 ಬಾರಿ ಭೇಟಿ ನೀಡಿದ್ದಾರೆ.