HAMPI 
ನ್ಯೂಸ್

ರಾಜ್ಯ ಬಜೆಟ್ ನಲ್ಲಿ ವಿಜಯನಗರ ಕಡೆಗಣನೆ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಕಳೆದ ಮೂರು ವರ್ಷಗಳಿಂದ ರಾಜ್ಯ ಬಜೆಟ್ ಮೇಲಿನ ವಿಜಯನಗರ ಜಿಲ್ಲೆಯ ನಿರೀಕ್ಷೆಗಳು ನಿರಂತರವಾಗಿಹುಸಿಯಾಗುತ್ತಿದೆ. ಈ ಸರ್ಕಾರದಲ್ಲಿ ಜಿಲ್ಲೆಯ ಹಣೆಬರಹ ಬದಲಾಗುವುದಿಲ್ಲ ಎಂಬ ಹತಾಶ ನುಡಿಗಳು ಜನರ ಬೇಸರಕ್ಕೆ ಕಾರಣವಾಗಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯನ ಅವರ ಆಪ್ತರಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಜಿಲ್ಲೆಗೆ ಈ ಬಾರಿ ಕೂಡ ಬಜೆಟ್‌ನಲ್ಲಿ ವಿಶೇಷ ಅನುದಾನ ತರುತ್ತಾರೆಂಬ ನಿರೀಕ್ಷೆ, ಭರವಸೆ ಸುಳ್ಳಾಗಿವೆ. ಶುಕ್ರವಾರ ಮಂಡನೆಯಾದ ಬಜೆಟ್‌ನಲ್ಲಿ ಕೂಡ ನಿರಾಸೆ ಎದುರಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರಸ್ ಬೆಂಬಲಿತ ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಗೆ ಯೋಜನೆಗಳು ಹಾಗೂ ಅನುದಾನ ತರುವಲ್ಲಿ ವಿಫಲರಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಜಿಲ್ಲೆಯಗೆ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ, ಸಂಚಾರ ನಿಯಮ ಉಲ್ಲಂಘನೆ ನಿಯಂತ್ರಿಸಲು ನಗರದಲ್ಲಿ ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾ ಅಳವಡಿಕೆಗೆ ಘೋಷಣೆ ಮಾಡಿದ ಸರ್ಕಾರ, ಹಂಪಿಗೆ ವಿಶೇಷ ಯೋಜನೆ ಭರವಸೆ ಸುಳ್ಳಾಯಿತು. ರೈತರ ಪ್ರಮುಖ ಬೇಡಿಕೆಯಾದ ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆ, ಸಂಕಷ್ಟದಲ್ಲಿರುವ ಕನ್ನಡ ವಿವಿಗೆ ಅನುದಾನ, ಮೆಡಿಕಲ್ ಕಾಲೇಜು ನಿರ್ಮಾಣ ಸೇರಿ ಹಲವು ಯೋಜನೆಗಳು ಹುಸಿಯಾಗಿವೆ. ಹರಪನಹಳ್ಳಿ ಪಟ್ಟಣಕ್ಕೆ ಹಲುವಾಗಲು ಗ್ರಾಮದಿಂದ ಕೂಡಿವ ನೀರು ಹಾಗೂ ನೀರಾವರಿ ಯೋಜನೆ ಈ ಹಿಂದಿನ ಸರ್ಕಾರ ಮೀಸಲಿಟ್ಟ ಅದನುದಾನ ಈ ಬಜೆಟ್‌ನಲ್ಲಿಯೂ ಈಡೇರಲಿಲ್ಲ. ಹೂವಿನ ಹಡಗಲಿ ಮೈಲಾರ ಅಭಿವೃದ್ಧಿ ಪ್ರಾಧಿಕಾರ ಅನುದಾನ ಬಿಡುಗಡೆ ಭರವಸೆ ನೀರಾಸೆಯಾಗಿದೆ.

ಜಿಲ್ಲಾ ಉಸ್ತುವಾರಿಯ ಹುಸಿ ಮಾತು

ಮುಖ್ಯಮಂತ್ರಿಗಳ ಆಪ್ತ ವಲಯದಲ್ಲಿರುವ ಸಚಿವ ಜಮೀರ್ ಅಹ್ಮದ್ ಖಾನ್ ಈ ಹಿಂದೆ ಹಲವು ಬಾರಿ ಜಿಲ್ಲೆಗೆ ಭೇಟಿ ನೀಡಿದಾಗ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು, ಸೂಪರ್ ಸ್ಪೆಷಾಲಿಟಿ ಆಸತ್ರೆ, ಸಕ್ಕರೆ ಕಾರ್ಖಾನೆ, ಕನ್ನಡ ವಿವಿಗೆ ಅನುದಾನ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದರು. ಆದರೆ, ಹೇಳಿಕೊಳ್ಳುವಂತ ಯೋಜನೆಯನ್ನು ತರಲು ಸಾಧ್ಯವಾಗದಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡ ವಿವಿ ಅಳಲಿಗೆ ಬೆಲೆ ಇಲ್ಲ

ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಬೆಳವಣಿಗೆಗೆ ಜನ್ಮ ತಳೆದಿರುವ ಕನ್ನಡ ವಿಶ್ವವಿದ್ಯಾಲಯಕ್ಕೂ ಸರ್ಕಾರ ವಿಶೇಷ ಅನುದಾನ ಘೋಷಣೆ ಮಾಡಿಲ್ಲ. ಕನ್ನಡ ವಿವಿ ಸಮಸ್ಯೆಗೆ ಸರ್ಕಾರ ಮದ್ದು ಹಚ್ಚಲಿದ್ದಾರೆ ಎಂಬ ಆಶಯ ಹೊಂದಲಾಗಿತ್ತು. ಆದರೆ, ಬಜೆಟ್‌ನಲ್ಲಿಯೂ ವಿವಿ ಬಗ್ಗೆ ಪ್ರಸ್ತಾಪ ಆಗಲಿಲ್ಲ.

ಘೋಷಣೆ

  • ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಸ್ಥಾಪನೆ
  • ಎಐ ಆಧಾರಿತ ವಿದ್ಯುನ್ಮಾನ ಕ್ಯಾಮೆರಾ ಅಳವಡಿಕೆ
  • ಕೂಡ್ಲಿಗಿ 100 ಬೆಡ್ ಆಸ್ಪತ್ರೆಯಿಂದ 150 ಬೆಡ್‌ಗೆ ಮೇಲ್ದರ್ಜೇಗೆ
  • ಕೂಡ್ಲಿಗಿ ತಾಲೂಕಿನ ಕೆರೆ ತುಂಬಿಸುವ ಯೋಜನೆ

ನಿರೀಕ್ಷೆಗಳು ಏನಿತ್ತು ?

  • ಹಂಪಿ ಮಾಸ್ಟರ್ ಪ್ಲಾನ್
  • ಮೆಡಿಕಲ್ ಕಾಲೇಜು ಅಥವ ಜಿಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
  • ಸಕ್ಕರೆ ಕಾರ್ಖಾನೆ ಅನುಮೋದನೆ
  • ಕೆರೆ ತುಂಬಿಸುವ ಯೋಜನೆ
  • ಕನ್ನಡ ವಿವಿ ಅನುದಾನ
  • ನೂತನ ಜಿಲ್ಲಾ ಕಚೇರಿಗಳ ಕಟ್ಟಡ ನಿರ್ಮಾಣ
  • ಮೈಲಾರ ಅಭಿವೃದ್ಧಿ ಪ್ರಾಧಿಕಾರ
  • ಮಳೆ ಆಶ್ರಿತ ಪ್ರದೇಶಗಳಲ್ಲಿ ಏತ ನೀರಾವರಿ