ಮಧ್ಯಪ್ರದೇಶದಲ್ಲಿ ಕರುಣಾಜನಕ ಘಟನೆ 
ನ್ಯೂಸ್

ಮಧ್ಯಪ್ರದೇಶದಲ್ಲಿ ಘೋರ ದುರಂತ: ತಂಗಿ ತೀರಿಕೊಂಡ ಬೆನ್ನಲ್ಲೇ ಮಕ್ಕಳೊಂದಿಗೆ ಪ್ರಾಣ ಕಳೆದುಕೊಂಡ ಅಕ್ಕ! | Madhya Pradesh Tragedy

Madhya Pradesh Tragic Incident: ಮಧ್ಯಪ್ರದೇಶದ ತೀವ್ರ ಆಘಾತಕಾರಿ ಘಟನೆಯೊಂದು ನಡೆದಿದೆ. ಬೇರೆ ಬೇರೆ ಕಡೆ ನಡೆದ ದುರಂತದಲ್ಲಿ ಇಬ್ಬರು ಅಕ್ಕ-ತಂಗಿ ಹಾಗೂ ಅವರ ನಾಲ್ವರು ಮಕ್ಕಳು ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಂಡಿದ್ದಾರೆ.

ಶಿವಪುರಿಯ ಬೈರಾಡ್ ಠಾಣೆ ವ್ಯಾಪ್ತಿಯ ಗುಂಗಾರಗಾಂವ್‌ನಲ್ಲಿ 8 ತಿಂಗಳ ಗರ್ಭಿಣಿಯಾಗಿದ್ದ 35 ವರ್ಷದ ಅಂಜಲಿ, ಬುಧವಾರ ಮಧ್ಯಾಹ್ನ 6 ವರ್ಷದ ಮಗ ಪ್ರಶಾಂತ್ ಜತೆ ಜಮೀನಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ಪತಿ ಧರಂವೀರ್ ರಾವತ್ ಮೃತಪಟ್ಟಿದ್ದರಿಂದ, ಅಂಜಲಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಹೆಣ್ಣುಮಕ್ಕಳನ್ನೂ ಜಮೀನಿಗೆ ಕರೆದೊಯ್ದು ಸೂಸೈಡ್

ಇನ್ನು, ಅಂಜಲಿ ಮೂವರು ಹೆಣ್ಣುಮಕ್ಕಳನ್ನೂ ಜಮೀನಿಗೆ ಕರೆದೊಯ್ದಿದ್ದರು. ಆದರೆ, ಅವರಲ್ಲೊಬ್ಬ ಮಗಳು ಧೈರ್ಯ ಮಾಡಿ ತಾಯಿಯ ಕೈಯಿಂದ ಬಿಡಿಸಿಕೊಂಡು ಮನೆಗೆ ಓಡಿಬಂದು ವಿಷಯ ತಿಳಿಸಿದ್ದಾಳೆ. ಆ ಮಗುವಿನ ಸಮಯಪ್ರಜ್ಞೆಯಿಂದ ಉಳಿದಿಬ್ಬರು ಹೆಣ್ಣುಮಕ್ಕಳ ಪ್ರಾಣ ಉಳಿದಿದೆ. ಆದರೆ, ಅಂಜಲಿ ಹಾಗೂ ಅವರ ಮಗ ಪ್ರಶಾಂತ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ತಂಗಿಯ ಸಾವಿನ ಬೆನ್ನಲ್ಲೇ ಅಕ್ಕನ ನಿರ್ಧಾರ

ಈ ದುರಂತ ನಡೆದ ಕೆಲವೇ ಗಂಟೆಗಳಲ್ಲಿ, ಅಂದರೆ ಬುಧವಾರ ಸಂಜೆ, ಅಂಜಲಿ ಅವರ ಅಕ್ಕ ಸೀತಾ ರಾವತ್ (40) ಕೂಡ ತಮ್ಮ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಲಾರಸ್ ಠಾಣೆ ವ್ಯಾಪ್ತಿಯ ಸೆಸೈ ಗ್ರಾಮದ ನಿವಾಸಿಯಾಗಿದ್ದ ಸೀತಾ, ಖೋಂಕರ್ ಗ್ರಾಮದ ಜಮೀನಿನಲ್ಲಿ ತಮ್ಮ ಮಕ್ಕಳಾದ ರಾಖಿ (14), ಪ್ರಿಯಾಂಕಾ (11) ಮತ್ತು 6 ವರ್ಷದ ಶ್ಲೋಕ್ ಜೊತೆ ಪ್ರಾಣ ಕಳೆದುಕೊಂಡಿದ್ದಾರೆ.

ಸಂಜೆ 6 ಗಂಟೆಯಾದರೂ ಸೀತಾ ಹಾಗೂ ಮಕ್ಕಳು ಮನೆಗೆ ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಜಮೀನಿನ ಬಳಿ ಅವರ ಚಪ್ಪಲಿಗಳು ಕಂಡುಬಂದಿದ್ದು, ಸ್ವಲ್ಪ ದೂರದಲ್ಲಿ ಮೃತ ದೇಹಗಳು ಪತ್ತೆಯಾಗಿವೆ.

ಇದನ್ನೂ ಓದಿ: ಪಾಕಿಸ್ತಾನಿ ಹಿಂದೂಗಳಿಂದ 'ರಾಮಾಯಣ' ಸಿನಿಮಾಗೆ ಜೈಕಾರ: ಕರಾಚಿ ಮಂದಿರದಲ್ಲೇ ಪೋಸ್ಟರ್ ಅಂಟಿಸಿ ಸಂಭ್ರಮ! | Ramayana in Pakistan

ಪೊಲೀಸರಿಂದ ತನಿಖೆ

ಒಂದೇ ಕುಟುಂಬದ ಇಬ್ಬರು ಸಹೋದರಿಯರು ಹಾಗೂ ನಾಲ್ವರು ಮಕ್ಕಳು ಸಾವನ್ನಪ್ಪಿರುವುದು ಇಡೀ ಗ್ರಾಮವನ್ನೇ ಶೋಕಸಾಗರದಲ್ಲಿ ಮುಳುಗಿಸಿದೆ. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಆತ್ಮಹತ್ಯೆಗಳಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್​)