ನ್ಯೂಸ್

ಭೀಕರ ರಸ್ತೆ ಅಪಘಾತ; ಟ್ರಕ್​, ಬೈಕ್​ಗಳಿಗೆ ಡಿಕ್ಕಿ ಹೊಡೆದ ಪಿಕಪ್ ವ್ಯಾನ್; ನಾಲ್ವರು ಸಾವು, 15 ಮಂದಿಗೆ ಗಾಯ| Accident

Accident: ಗುಜರಾತ್​ನ ಪಠಾಣ್ ಜಿಲ್ಲೆಯ ರಾಧನ್​ಪುರದಲ್ಲಿ ಪಿಕಪ್ ವಾಹನವೊಂದು ಓವರ್ ಟೇಕ್ ಮಾಡೋ ಭರದಲ್ಲಿ ಎದುರಿಗೆ ಬಂದ ಟ್ರಕ್ ಮತ್ತು ಎರಡು ಬೈಕ್​ಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ ಎಂದು ಭಾನುವಾರ(ಅ. 05) ವರದಿಯಾಗಿದೆ.

ಮೋತಿ ಪಿಪ್ಲಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಿಗ್ಗೆ 10 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮೃತರನ್ನು ಲಕ್ಷ್ಮಣ್ ದೇಸಾಯಿ, ಯಶ್ ಉಂಚೋಸನ್, ಕನು ರಾವಲ್ ಮತ್ತು ನಾಸಿಬ್ ಖಾನ್ ಎಂದು ಗುರುತಿಸಲಾಗಿದೆ. ತಕ್ಷಣ ಸ್ಥಳಕ್ಕೆ ಪೊಲೀಸರು ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ ವಸಂತ್ ನಾಯ್, ರಸ್ತೆ ನಿರ್ಮಾಣ ಕಾರ್ಯದಿಂದಾಗಿ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿರುವ ಪ್ರದೇಶದಲ್ಲಿ ಸುಮಾರು 15 ಪ್ರಯಾಣಿಕರಿದ್ದ ಪಿಕಪ್ ವ್ಯಾನ್, ಓವರ್‌ಟೇಕ್ ಮಾಡುವ ಪ್ರಯತ್ನದಲ್ಲಿ ಟ್ರಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಜೊತೆಗೆ ಎರಡೂ ಬೈಕ್​ಗಳಿಗೂ ಡಿಕ್ಕಿ ಹೊಡೆದಿದೆ. ವ್ಯಾನ್​ನಲ್ಲಿದ್ದ ಇಬ್ಬರು ಮತ್ತು ಬೈಕ್​ನಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ. 15 ಮಂದಿಗೆ ಗಾಯಗಳಾಗಿದ್ದು, ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)