ನ್ಯೂಸ್

ಪರಿಷತ್ ಸಾಕ್ಷಿಪ್ರಜ್ಞೆಗೆ ಮಸೂರ ಹಿಡಿಯಲಿರುವ ಹೊರಟ್ಟಿ

ವಿಜಯವಾಣಿ ಸಂವಾದದಲ್ಲಿ ಮನದಾಳ | ಕೆಳಮನೆ-ಮೇಲ್ಮನೆ ಸಂಪರ್ಕಕ್ಕೆ ಸೆಕ್ರೆಟರಿ ಜನರಲ್ ನೇಮಕ

ಬೆಂಗಳೂರು: ಬರೋಬ್ಬರಿ ನಾಲ್ಕೂವರೆ ದಶಕದಿಂದ ರಾಜ್ಯ ವಿಧಾನ ಪರಿಷತ್​ನ ಸಾಕ್ಷಿಪ್ರಜ್ಞೆಯಂತಿದ್ದಾರೆ ಬಸವರಾಜ ಹೊರಟ್ಟಿ. ಪ್ರಸ್ತುತ ಸಭಾಪತಿಯಾಗಿ ಕಾರ್ಯನಿರ್ಹಹಿಸುತ್ತಿದ್ದು, ಭೂತ ಹಾಗೂ ವರ್ತಮಾನದ ಆಗು-ಹೋಗುಗಳನ್ನು ತುಲನೆ ಮಾಡಿ ಪ್ರಸ್ತುತ ವಿಧಾನ ಮಂಡಲ ವ್ಯವಸ್ಥೆಯಲ್ಲಿ ಆಗಬೇಕಾದ ಬದಲಾವಣೆ ಬಗ್ಗೆ ಸಾಕಷ್ಟು ತುಡಿತ ಇಟ್ಟುಕೊಂಡಿದ್ದಾರೆ. ವಿಧಾನ ಪರಿಷತ್​ನ 153ನೇ ಅಧಿವೇಶನ ಇಂದು (ಜು.15) ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ‘ವಿಜಯವಾಣಿ’ ಸಂಪಾದಕೀಯ ಬಳಗದ ಜತೆ ನಡೆದ ಸಂವಾದದಲ್ಲಿ ಹೊರಟ್ಟಿ ಅನೇಕ ಸಂಗತಿ ಹಂಚಿಕೊಂಡಿದ್ದಾರೆ. ಪ್ರಮುಖವಾಗಿ ಅಧಿವೇಶನವನ್ನು ಲಘುವಾಗಿ ಪರಿಗಣಿಸಿರುವ ಅಧಿಕಾರಿಗಳಲ್ಲಿ ಶಿಸ್ತು ತರಲು, ಪರಿಷತ್ ಸದಸ್ಯರಿಗೆ ತಮ್ಮ ಸ್ಥಾನಮಾನದ ಅರಿವು ಮೂಡಿಸಲು ಬಯಸಿರುವ ಸಂಗತಿಯನ್ನು ಪ್ರಸ್ತಾಪಿಸಿದ್ದಾರೆ.

ಸಭಾಪತಿಗಳ 4 ಪ್ರಮುಖ ತೀರ್ಮಾನ

  • ಕಲಾಪದಲ್ಲಿ ಯಾವ ಅಧಿಕಾರಿ ಕಡ್ಡಾಯ ಹಾಜರಿರಬೇಕೆಂದು ತಿಳಿಸಲಾಗಿರುತ್ತದೆ. ಒಂದು ವೇಳೆ ಹಾಜರಾಗದಿದ್ದಲ್ಲಿ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಡುತ್ತೇವೆ. ಈ ಮೂಲಕ ಪರಿಷತ್ ಬಗ್ಗೆ ಉದಾಸೀನ ತೋರುವ ಅಧಿಕಾರಿಗಳಿಗೆ ಪಾಠ ಕಲಿಸುತ್ತೇವೆ.
  • ಆಯ್ಕೆಯಾದ ಜನಪ್ರತಿನಿಧಿ ಶಾಸನಸಭೆಗೆ ಬಂದ ಮೇಲೆ ಸದನದ ಘನತೆ, ಗೌರವ ಹೆಚ್ಚಿಸಬೇಕು. ಸದನದಲ್ಲಿ ನಡತೆ ಹೇಗಿರಬೇಕೆಂದು ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಇದಕ್ಕಾಗಿ ನಡವಳಿಕೆ ತಿಳಿಸುವ ಸಣ್ಣ ಪುಸ್ತಕ ನೀಡುತ್ತೇವೆ.
  • ಅಧಿವೇಶನದ ಮೊದಲ ದಿನ ಆಡಳಿತ-ಪ್ರತಿಪಕ್ಷದ ಮುಖ್ಯ ಸಚೇತಕರ ಸಭೆ ಕರೆದು ಕಲಾಪದ ಚೌಕಟ್ಟು ತಿಳಿಸಲಾಗುತ್ತದೆ. ಒಂದು ವೇಳೆ ಸದಸ್ಯರು ಅಡಚಣೆ ಉಂಟು ಮಾಡಿದರೆ ಅಂತಹವರನ್ನು ಮುಲಾಜಿಲ್ಲದೆ ಹೊರಕಳಿಸಲಾಗುತ್ತದೆ.
  • ವಿಧಾನಸಭೆ, ವಿಧಾನ ಪರಿಷತ್ ನಡುವೆ ಸಂಪರ್ಕಕೊಂಡಿಯಾಗಿ ಮಹಾ ಕಾರ್ಯದರ್ಶಿ (ಸೆಕ್ರೆಟರಿ ಜನರಲ್) ನೇಮಕದ ಚಿಂತನೆಯಿದೆ. ಉಭಯ ಸದನಗಳ ಮಧ್ಯೆ ಪರಿಣಾಮಕಾರಿ ಸಂಪರ್ಕ-ಸಂವಹನದ ದೃಷ್ಟಿಯಿಂದ ಈ ಹುದ್ದೆ ಸೃಷ್ಟಿಯ ಅಗತ್ಯವಿದೆ.

ಪರಿಸ್ಥಿತಿ ಸುಧಾರಣೆಗೆ ಪ್ರಯತ್ನ

ಸಾರ್ವಜನಿಕ ಜೀವನಕ್ಕೆ ಬಂದವರಿಗೆ ತರಬೇತಿ ಕೊಡಿಸಿದರೆ ಕೊಂಚ ತಿಳಿವಳಿಕೆ ಮೂಡುತ್ತದೆ. ಹೊಸ ಶಾಸಕರಿಗೆ ತರಬೇತಿ ನೀಡುವ ಸಂಪ್ರದಾಯವಿದೆ. ಇತ್ತೀಚೆಗೆ ಆಯ್ಕೆಯಾದವರಿಗೆ ವಿಧಾನಮಂಡಲ ಅಧಿವೇಶನದ ಬಳಿಕ ತರಬೇತಿ ನೀಡಲು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಹೊರಟ್ಟಿ ತಿಳಿಸಿದರು. ಪರಿಷತ್​ಗೆ ಆಯ್ಕೆಯಾಗಿ ಬರುವವರ ತಲೆಯಲ್ಲಿ ಎಲ್ಲಿಯವರೆಗೆ ತಮ್ಮ ಸ್ಥಾನದ ಮಹತ್ವದ ಅರಿವು ಬರುವುದಿಲ್ಲವೋ ಅಲ್ಲಿಯವರೆಗೆ ಪರಿಸ್ಥಿತಿ ಸುಧಾರಿಸಲ್ಲ. ಹೀಗಾಗಿ ಅವರಿಗೆ ತಿಳಿವಳಿಕೆ ಮೂಡಿಸಲು ಪ್ರಯತ್ನ ಮಾಡಬೇಕಾಗುತ್ತದೆ ಎಂದರು. ಸಚಿವಾಲಯದ ನೇಮಕ ಪ್ರಕ್ರಿಯೆ ಸಂಬಂಧ ಪ್ರತಿಕ್ರಿಯಿಸಿ, 29 ಡಿ ಗ್ರೂಪ್ ಹುದ್ದೆ ಖಾಲಿಯಾಗಿವೆ. ಅದನ್ನು ಭರ್ತಿ ಮಾಡಲಾಗುತ್ತದೆ. 42 ಸೆಕ್ಷನ್ ಆಫೀಸರ್, ಎಫ್​ಡಿಸಿ ಹುದ್ದೆ ಭರ್ತಿಗೆ ಹಣಕಾಸು ಇಲಾಖೆಗೆ ಅನುಮತಿ ಕೊಡಬೇಕಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ನೇಮಕ ಮಾಡಿ ಕೊಡು ವಂತೆ ಕೋರಲಾಗಿದೆ ಎಂದರು.

ಹೊರಟ್ಟಿಗೆ ಹಣಕಾಸು ಖಾತೆ ಕೊಡಿ ಎಂದಿದ್ದ ಬಿಎಸ್​ವೈ

ಅನುಭವದ ಮೂಸೆಯಲ್ಲಿನ ನೂರಾರು ಘಟನೆಗಳನ್ನು ಸಂದರ್ಭ ಸಿಕ್ಕಾಗ ಹೊರಹಾಕುವ ಹೊರಟ್ಟಿ, ತಾವು ಶಿಕ್ಷಣ ಸಚಿವರಾಗಿದ್ದಾಗಿನ ಘಟನೆಯನ್ನು ನೆನಪಿಸಿಕೊಂಡರು. ಜೆಡಿಎಸ್-ಬಿಜೆಪಿ 20-20 ಸರ್ಕಾರದಲ್ಲಿ ಶಿಕ್ಷಣ ಸಚಿವನಾ ಗಿದ್ದೆ. ಈ ಕ್ಷೇತ್ರದಲ್ಲಿ ಸುಧಾರಣೆ ತರುವ ಕೆಲಸ ಒಂದಾದ ಮೇಲೊಂದರಂತೆ ತೆಗೆದುಕೊಂಡಾಗ ಹಣಕಾಸು ಖಾತೆ ಹೊಂದಿದ್ದ ಯಡಿಯೂರಪ್ಪ, ಖಾತೆಯನ್ನು ಹೊರಟ್ಟಿಗೆ ಕೊಟ್ಟುಬಿಡಿ ಎಂದು ಕೈ ಮುಗಿದು ಹಾಸ್ಯ ಮಾಡಿದ್ದರು ಎಂದು ಹಳೇ ಘಟನೆ ಮೆಲುಕು ಹಾಕಿದರು. ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ 1014 ಸರ್ಕಾರಿ ಪ್ರೌಢಶಾಲೆ, 492 ಸರ್ಕಾರಿ ಪದವಿಪೂರ್ವ ಕಾಲೇಜು ತೆರೆಯಲು ಅನುಮತಿ ನೀಡಲಾಯಿತು. 48,313 ಶಿಕ್ಷಕರ ಹುದ್ದೆ ಭರ್ತಿಗೂ ಕ್ರಮಕೈಗೊಳ್ಳಲಾಯಿತು. ಎಸ್ಸೆಸ್ಸೆಲ್ಸಿವರೆಗಿನ ಖಾಸಗಿ, ಅನುದಾನಿತ ವಿದ್ಯಾರ್ಥಿಗಳಿಗೆ ಬಿಸಿಯೂಟ ಯೋಜನೆ ವಿಸ್ತರಿಸುವ ಪ್ರಯತ್ನದಲ್ಲೂ ಸಫಲನಾದೆ. ಶಿಕ್ಷಕರ ವರ್ಗಾವಣೆಗೆ ಹೊಸ ನೀತಿಯನ್ನೇ ಪ್ರಸ್ತುತಪಡಿಸಿದೆ ಎಂದು ವಿವರಿಸಿದರು.

ಹಿಂದಿನಂತಿಲ್ಲ ಈಗ...

ನಾನು ಪರಿಷತ್​ಗೆ ಆಯ್ಕೆಯಾದ ಸಂದರ್ಭದಲ್ಲಿ ಕಲಾಪ ಬೆಳಗ್ಗೆ ಒಂಬತ್ತೂವರೆಗೆ ಆರಂಭವಾಗುತ್ತಿತ್ತು. ಗುಣಾತ್ಮಕ ಚರ್ಚೆಯಾಗುತ್ತಿತ್ತು. ಪರಿಣಾಮ ಬೀರುತ್ತಿತ್ತು. ಆಗಿಗೂ ಈಗಿಗೂ ಹೋಲಿಸಿದರೆ ಟೋಟಲಿ ಅಪ್ಸೆಟ್ ಆಗುತ್ತೇನೆ ಎಂದು ಬಸವರಾಜ ಹೊರಟ್ಟಿ ಹೇಳಿಕೊಂಡರು. ಅಂದು ಎಸ್.ವೆಂಕಟರಾಮನ್, ರಾಜಗೋಪಾಲ್, ಎ.ಕೆ.ಸುಬ್ಬಯ್ಯ, ಎಚ್.ನರಸಿಂಹಯ್ಯ ಅಂತಹವರಿದ್ದರು. ಕಲಾಪ ನಡೆಯುವಾಗ ಯಾರೂ ಎದ್ದು ಹೋಗುತ್ತಿರಲಿಲ್ಲ, ರಾತ್ರಿ ಎಂಟು, ಒಂಬತ್ತರವರೆಗೂ ನಡೆಯುತ್ತಿತ್ತು. 2008ರ ಬಳಿಕ ದುಡ್ಡು ಖರ್ಚು ಮಾಡಿ ಪರಿಷತ್​ಗೆ ಬರಲಾರಂಭಿಸಿದರು. ಅಲ್ಲಿಂದ ಚಿತ್ರಣ ಬದಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದವರೊಬ್ಬರು ಚುನಾವಣೆಯಲ್ಲಿ 30 ಕೋಟಿ ರೂ. ಖರ್ಚಾಯಿತು, ವೋಟಿಗೆ ಹತ್ತು ಸಾವಿರ ರೂ. ಖರ್ಚು ಮಾಡಿ ಬಂದೆ ಎಂದು ಹೇಳಿಕೊಂಡಿದ್ದರು. ಅಲ್ಲಿಗೆ ಪರಿಸ್ಥಿತಿ ಹೇಗಾಗಿದೆ ಎಂದು ಊಹಿಸಬಹುದು ಎಂದರು. ಇತ್ತೀಚೆಗೆ ಶಿಕ್ಷಕರ ಕ್ಷೇತ್ರದ ಚುನಾವಣೆಯಾಯಿತು. ಒಬ್ಬ ಪಕ್ಷೇತರ ಅಭ್ಯರ್ಥಿ ಪ್ರತಿ ಮತದಾರರಿಗೆ ಹತ್ತು ಸಾವಿರ ರೂ. ಹಂಚಿದ್ದಾರೆ. ಸೀರೆ-ವಾಚ್ ಸಹ ಕೊಡಲಾಗಿದೆ. ಕೆಲವು ಕಡೆ ಒಬ್ಬ ಶಿಕ್ಷಕ ಮತದಾರನಿಗೆ 24 ಸಾವಿರ ರೂ. ವರೆಗೂ ಸಂದಾಯವಾಗಿದೆ. ಒಂದು ಪ್ರಸಂಗದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ 1600 ಮಂದಿ ಇದ್ದರು, ಮತದಾನದ ದಿನ ಮಧ್ಯಾಹ್ನ ಕಳೆದರೂ ಅವರು ಮತದಾನ ಮಾಡಲು ಬರಲೇ ಇಲ್ಲ. ಏಕೆ ಬರಲಿಲ್ಲ ಎಂದು ಅಭ್ಯರ್ಥಿ ಪ್ರಶ್ನಿಸಿದಾಗ, ನಮಗೇನು ಬಂದಿಲ್ಲ ಎಂದರು. ಕೊನೆಗೆ ಆ ಅಭ್ಯರ್ಥಿ ತಲಾ 5 ಸಾವಿರ ರೂ. ಕೊಡುವಂತಾಯಿತು. ಒಬ್ಬ ಅಭ್ಯರ್ಥಿ ಮುಂದೆ ಶಿಕ್ಷಕರು ದುಡ್ಡು ಪಡೆಯಲು ಕ್ಯೂ ಹಚ್ಚಿದ್ದರು. ಶಿಕ್ಷಕರು ಈ ಪರಿಸ್ಥಿತಿಗೆ ಬಂದರೆ ಸಮಾಜದ ಕತೆ ಏನು? ಎಂದು ಸದ್ಯದ ಚುನಾವಣೆಗಳ ಸ್ಥಿತಿಯನ್ನು ವಿಶ್ಲೇಷಿಸಿದರು.