ದಿನಪತ್ರಿಕೆ ಹಾಗೂ ಹಾಲು ವಿತರಕರಿಗೆ ಪಿಎಂ ಸ್ವನಿಧಿ ಯೋಜನೆಯಡಿ ಬಿ.ವೈ.ರಾಘವೇಂದ್ರ ಸಾಲದ ಚೆಕ್ ವಿತರಿಸಿದರು. ಎಸ್.ಎನ್.ಚನ್ನಬಸಪ್ಪ, ಶಿವಕುಮಾರ್, ಕೆ.ಮಾಯಣ್ಣ ಗೌಡ, ಲಕ್ಷ್ಮೀಶಂಕರ ನಾಯ್ಕ, ಅಮರನಾಥ್, ವಿಜಯ್ ಸಾಯಿ ಇತರರಿದ್ದರು. 
ನ್ಯೂಸ್

ಸಣ್ಣ ವ್ಯಾಪಾರಿಗಳ ಆಶಾಕಿರಣ ಪಿಎಂ ಸ್ವನಿಧಿ: ಬಿವೈಆರ್ ಬಣ್ಣನೆ

ಶಿವಮೊಗ್ಗ: ಸಣ್ಣ ವ್ಯಾಪಾರಿಗಳು ಖಾಸಗಿಯವರಿಂದ ಸಾಲ ಪಡೆದು ದುಬಾರಿ ಬಡ್ಡಿ ಪಾವತಿಸಿ ನಷ್ಟ ಅನುಭವಿಸುತ್ತಿದ್ದರು. ಇದನ್ನು ಗಮನಿಸಿಯೇ ಪ್ರಧಾನಿ ನರೇಂದ್ರ ಮೋದಿ ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ದಿನಪತ್ರಿಕೆ ಹಾಗೂ ಹಾಲು ವಿತರಕರಿಗೆ ಮಂಗಳವಾರ ಪಿಎಂ ಸ್ವನಿಧಿ ಕಿರು ಸಾಲ ಯೋಜನೆಯಡಿ ಸಾಲದ ಚೆಕ್ ವಿತರಿಸಿ ಮಾತನಾಡಿದ ಅವರು, ದೇಶ ನಡೆಸುವ ಮುತ್ಸದ್ಧಿಗೆ ಎಲ್ಲ ಸಮಸ್ಯೆಗಳ ಅರಿವಿರಬೇಕು. ಅದು ಮೋದಿಯವರಲ್ಲಿದೆ. ದೇಶದ ಕಟ್ಟಕಡೆಯ ವ್ಯಕ್ತಿಯ ಸಂಕಷ್ಟಗಳನ್ನೂ ಅವರು ಅರಿಯಬಲ್ಲರು ಎಂದು ಅಭಿಪ್ರಾಯಪಟ್ಟರು.
ರೈತ ತರಕಾರಿ ಬೆಳೆಯಬಹುದು. ಅದನ್ನು ಮಾರುಕಟ್ಟೆಗೆ ಕೊಂಡೊಯ್ದು ನೇರವಾಗಿ ಮಾರಾಟ ಮಾಡಲು ವ್ಯವಸ್ಥೆ ಇಲ್ಲದಾಗ ಖಾಸಗಿಯವರಿಂದ ದುಬಾರಿ ಬಡ್ಡಿ ದರದಲ್ಲಿ ಸಾಲ ಪಡೆಯುತ್ತಾನೆ. ಭವಿಷ್ಯದಲ್ಲಿ ಆತನ ವ್ಯವಹಾರ ಹಾಗೂ ಜೀವನ ಎರಡಕ್ಕೂ ಇದು ನಷ್ಟ ಉಂಟು ಮಾಡಬಲ್ಲದು. ಹೀಗಾಗಿ ಪಿಎಂ ಸ್ವನಿಧಿ ಅತಿ ಉಪಯುಕ್ತ ಯೋಜನೆಯಾಗಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ದಿನ ಪತ್ರಿಕೆ ಮತ್ತು ಹಾಲು ವಿತರಕರಿಗೆ ಆರಂಭಿಕವಾಗಿ ಬ್ಯಾಂಕ್ 10 ಸಾವಿರ ರೂ. ಸಾಲ ನೀಡಿರುವುದು ಒಳ್ಳೆಯ ಕಾರ್ಯಕ್ರಮ ಎಂದು ಹೇಳಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ಲಕ್ಷ್ಮೀಶಂಕರ ನಾಯ್ಕ, ಆಯುಕ್ತ ಕೆ.ಮಾಯಣ್ಣ ಗೌಡ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸುರೇಶ್, ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ವಿಜಯ್ ಸಾಯಿ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಮರನಾಥ್, ಡೇ-ನಲ್ಮ್ ಇಲಾಖೆಯ ರಾಜ್ಯ ಅಭಿಯಾನ ವ್ಯವಸ್ಥಾಪಕ ಜಿತೇಂದ್ರ ಕುಮಾರ್, ಡೇ-ನಲ್ಮ್ ಸಿಎಒ ಅನುಪಮಾ ಮುಂತಾದವರಿದ್ದರು. 65 ದಿನಪತ್ರಿಕೆ ವಿತರಕರಿಗೆ ಸಾಲ ವಿತರಣೆ, ಮತ್ತು ಕ್ಯೂಆರ್ ಕೋಡ್ ನೀಡಲಾಯಿತು.