ನ್ಯೂಸ್

ಜಾತಿಯ ವಿಷಬೀಜಕ್ಕೆ ಬಲಿಯಾದ ಪ್ರೇಮಿ: ಥಳಿಸಿ ಕೊಂದ ಗ್ರಾಮಸ್ಥರು!

ಪುಣೆ: ಜಾತಿಯೆಂಬ ವಿಷಬೀಜದಿಂದಾಗಿ ನಡೆಯುತ್ತಿರುವ ಅನಾಹುತಗಳು ಅದೆಷ್ಟೋ, ಮೇಲ್ಜಾತಿ, ಕೆಳಜಾತಿ ಎಂಬ ಪಟ್ಟಕಟ್ಟಿರುವ ಕಾರಣ, ಈಗಾಗಲೇ ಹಲವಾರು ಮಂದಿ ಅಮಾನುಷವಾಗಿ ಹತ್ಯೆಯಾಗಿದ್ದಾರೆ.

ಅಂಥದ್ದೇ ಒಂದು ಪ್ರಕರಣ ಪುಣೆಯ ಸಾಂಘ್ವಿಯಲ್ಲಿ ನಡೆದಿದೆ. ಮೇಲ್ಜಾತಿಗೆ ಸೇರಿದ ಯುವತಿಯೊಬ್ಬಳ ಜತೆ ಪ್ರೇಮ ಸಂಬಂಧ ಹೊಂದಿದ್ದ 20 ವರ್ಷದ ದಲಿತ ಯುವಕನನ್ನು ಯುವತಿಯ ಕುಟುಂಬದವರೇ ಥಳಿಸಿ ಕೊಂದಿದ್ದಾರೆ! ರಾಡ್​ ಹಾಗೂ ಕಲ್ಲುಗಳಿಂದ ಹೊಡೆದು ಹೊಡೆದು ಯುವಕನನ್ನು ಸಾಯಿಸಿದ್ದಾರೆ.

ಈ ಘಟನೆ ನಡೆದಿರುವುದು ಜೂನ್​ 7ರಂದು. ಜಾತಿಯ ವಿಷಬೀಜಕ್ಕೆ ಬಲಿಯಾದವ ವಿರಾಜ್​ ಜಗತಾಪ್​. ಈತ ಸಾಂಘ್ವಿಯ ಯುವತಿಯನ್ನು ಪ್ರೀತಿಸುತ್ತಿದ್ದ. ವಿರಾಜ್​ ದಲಿತನಾಗಿದ್ದು, ಯುವತಿ ಮೇಲ್ಜಾತಿಗೆ ಸೇರಿದವಳಾಗಿದ್ದಾಳೆ. ಪರಸ್ಪರ ಇಬ್ಬರೂ ಪ್ರೇಮಿಸುತ್ತಿರುವ ವಿಷಯ ಯುವತಿಯ ಮನೆಯವರಿಗೆ ತಿಳಿದಿದೆ.

ಯುವಕನಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಆತನಿಗೆ ಕರೆ ಮಾಡಿರುವ ಯುವತಿಯ ಕುಟುಂಬದವರು ಕರೆ ಮಾಡಿ ಅವರಿಬ್ಬರ ಸಂಬಂಧ ಕುರಿತು ಮಾತನಾಡಬೇಕಿದೆ ಎಂದು ತಾವು ಅವರ ಪರವಾಗಿ ಇದ್ದವರಂತೆ ಮಾತನಾಡಿದ್ದಾರೆ. ಇದನ್ನು ನಂಬಿದ ಯುವಕ ಗ್ರಾಮಕ್ಕೆ ಹೋಗಿದ್ದಾನೆ. ಮನೆಯಲ್ಲಿ ಆತನಿಗೆ ತೀವ್ರವಾಗಿ ಅವಮಾನ ಮಾಡಿ ಕಳುಹಿಸಲಾಯಿತು.

ವಿರಾಜ್​ ಅಲ್ಲಿಂದ ಬೈಕ್​ನಲ್ಲಿ ವಾಪಸಾಗುತ್ತಿದ್ದ ವೇಳೆ ಆತನಿಗೆ ಟೆಂಪೋ ಡಿಕ್ಕಿ ಹೊಡೆಸಿದ್ದರು. ಆತ ಕೆಳಕ್ಕೆ ಬಿದ್ದಾಗ ರಾಡ್, ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ. ಯುವತಿಯ ತಂದೆ ಜಗದೀಶ್ ಕಾಟೆ ಕೂಡ ಅಲ್ಲಿಗೆ ಬಂದು ‘ಜಾತಿ ನಿಂದನೆಗೈದಿದ್ದರೆಂದು ತಿಳಿದುಬಂದಿದೆ.

ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಸಾಯುವ ಮುಂಚೆ ನಡೆದ ಘಟನೆಗಳ ಬಗ್ಗೆ ಆತ ವಿವರಿಸಿದ್ದಾನೆ.

ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆಪ್ರಾಪ್ತರೂ ಸೇರಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅಪ್ರಾಪ್ತ ಆರೋಪಿಗಳನ್ನು ರಿಮಾಂಡ್ ಹೋಂಗೆ ಕಳುಹಿಸಲಾಗಿದ್ದರೆ ಉಳಿದವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. (ಏಜೆನ್ಸೀಸ್​)