ಹೊನ್ನಾಳಿ: ತುಂಬಿ ಹರಿಯುವ ನದಿ, ಜಲಾಶಯ, ಕೆರೆ-ಕಟ್ಟೆಗಳಿಗೆ ಪೂಜ್ಯನೀಯ ಭಾವನೆಯಿಂದ ಬಾಗಿನ ಅರ್ಪಿಸುವುದು ಭಾರತೀಯ ಸಂಸ್ಕೃತಿ, ಪರಂಪರೆಯಾಗಿದೆ ಎಂದು ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲೂಕಿನ ಎಂ.ಹನುಮನಹಳ್ಳಿ, ತರಗನಹಳ್ಳಿ, ಸಿಂಗಟಗೆರೆ ಗ್ರಾಮದ ರಾಮನಕೆರೆ 15 ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆಗೆ ಬಾಗಿನ ಅರ್ಪಿಸಿ ಬಳಿಕ ಮಾತನಾಡಿದರು.
ರಾಮನಕೆರೆ 70 ಎಕರೆ ವಿಶಾಲವಾದ ವಿಸ್ತೀರ್ಣ ಹೊಂದಿದೆ. ಈ ಕೆರೆ ತುಂಬಿದರೆ ಬೇವಿನಹಳ್ಳಿ, ಸಿಂಗಟಗೆರೆ, ಎಂ.ಹನುಮನಹಳ್ಳಿ, ತರಗನಹಳ್ಳಿ, ಮಾಸಡಿ, ನೇರಲಗುಂಡಿ, ತಿಮ್ಲಾಪುರ, ಸೇವಾಲಾಲ್ ನಗರ ಗ್ರಾಮಗಳ ರೈತರಿಗೆ ಅನುಕೂಲವಾಗಲಿದೆ. ಈ ಭಾಗದ ಸಾವಿರಾರು ಎಕರೆ ಜಮೀನುಗಳಿಗೆ ಉಪಯೋಗವಾಗಲಿದೆ. ಭೂಮಿಯ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ ಎಂದು ಹೇಳಿದರು.
ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ ಮಾತನಾಡಿ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಅವರು ಅಧಿಕಾರದಲ್ಲಿದ್ದಾಗ 10 ಕೋಟಿ ರೂ. ಅನುದಾನ ತಂದು ಏತ ನೀರಾವರಿ ಮೂಲಕ ಕೆರೆಗೆ ನೀರು ತುಂಬಿಸುವ ಕೆಲಸ ಮಾಡಿದ್ದರು. ಈ ಕಾಮಗಾರಿ ಶೇ.70ರಷ್ಟು ಮುಗಿದಿದ್ದು, ಇನ್ನೂ ಬಾಕಿ ಇದೆ ಎಂದರು.
ಕಳೆದ ಎರಡು ವರ್ಷಗಳಿಂದ ಉತ್ತಮ ಮಳೆಯಾಗುತ್ತಿದ್ದು, ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿ ಕೆರೆ-ಕಟ್ಟೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಗಂಗೆ ಪೂಜಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.