ಕೇರಳ: ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ನಟಿ, ಹಾಟ್ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ತಮ್ಮ ಖಡಕ್ ಮಾತು, ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಇಂದು ಅನೇಕರಿಗೆ ಅವರು ಪರಿಚಯಿವಿದ್ದಾರೆ. ನಟಿಯ ಮೈಮಾಟಕ್ಕೆ ಪಡ್ಡೆ ಹುಡುಗರು ಫಿದಾ ಆಗಿದ್ದು, ಅವರ ಸೌಂದರ್ಯಕ್ಕೆ ಮಾರು ಹೋಗಿ, ಅಧಿಕ ಸಂಖ್ಯೆಯಲ್ಲಿ ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ಹನಿ ರೋಸ್ (Honey Rose) ಬಿಜಿಯಾಗಿದ್ದರೂ ಸಹ ಸಂದರ್ಶನಕ್ಕೆ ಹಾಜರಾಗಿ, ಹಲವು ವಿಷಯಗಳನ್ನು ಮುಕ್ತವಾಗಿ ಮಾತನಾಡಿದ್ದಾರೆ.
ನಿರ್ದೇಶಕ ವಿನಯ್ ನಿರ್ದೇಶನದಲ್ಲಿ ಮೂಡಿಬಂದ 'ಬಾಯ್ ಫ್ರೆಂಡ್' ಚಿತ್ರದ ಮುಖೇನ 2005ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಹನಿ ರೋಸ್, ಇಂದು ತಮ್ಮ ಸಿನಿ ಕರಿಯರ್ನಲ್ಲಿ ವಿಭಿನ್ನ ಪಾತ್ರದ ಮುಖಾಂತರ ಚಿತ್ರರಸಿಕರ ಮನಗೆಲ್ಲಲ್ಲು ಎದುರುನೋಡುತ್ತಿದ್ದಾರೆ. ಆನಂದಿನಿ ಬಾಲಾ ನಿರ್ದೇಶನದ 'ರೇಚಲ್' ಚಿತ್ರದಲ್ಲಿ ನಟಿಸಿರುವ ಹನಿ, ಖಡಕ್ ಹಾಗೂ ರಗಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
"ಮೊದಲ ಬಾರಿಗೆ ಇಂತಹ ಚಿತ್ರದಲ್ಲಿ ನಟಿಸಿದ್ದು ನನಗೆ ಬಹಳ ಖುಷಿಯಿದೆ. ‘ರೇಚೆಲ್’ ಒಳ್ಳೆಯ ಪಾತ್ರವಿರುವ ಸಿನಿಮಾ. ರಾಹುಲ್ ಮನಪ್ಪಟ್ಟು ಕಥೆ ಬರೆದಿದ್ದು, ಆನಂದಿನಿ ಬಾಲಾ ನಿರ್ದೇಶನ ಮಾಡಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನ. ಈ ಸಿನಿಮಾದಲ್ಲಿ ನೀವು ಹಲವು ವಿಶೇಷವಾದದ್ದನ್ನು ನೋಡಬಹುದು. ಅದೇ ರೀತಿ ಚಿತ್ರವು ತುಂಬಾ ನೈಜವಾಗಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುತ್ತದೆ. ಈಗಾಗಲೇ ನೋಡುಗರಿಂದ ಉತ್ತಮ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗಿದೆ" ಎಂದರು.
"18 ವರ್ಷಗಳು ಬಹಳ ದೀರ್ಘ ಸಮಯ. ಒಬ್ಬ ವ್ಯಕ್ತಿಯಾಗಿ ಮತ್ತು ನಟಿಯಾಗಿ ನನ್ನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ತುಂಬಾ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನನ್ನ ಮೊದಲ ಚಿತ್ರ ‘ಬಾಯ್ ಫ್ರೆಂಡ್’ ಮಾಡಿದೆ. ನನ್ನ ಬೆಳವಣಿಗೆಯ ಪ್ರತಿ ಹಂತವೂ ಈ ಉದ್ಯಮದಲ್ಲಿಯೇ ಇದೆ. ನಾನು ಇಲ್ಲಿನ ಜನರನ್ನು ನೋಡುತ್ತಾ ಬೆಳೆದವಳು. ಕಾಲೇಜಿಗೆ ಹೋಗಲು ಸಾಧ್ಯವಾಗಿಲ್ಲ. ದೂರಶಿಕ್ಷಣ ಮಾತ್ರ ಮಾಡಿದ್ದೇನೆ. ಈ ಜೀವನದಲ್ಲಿ ನನಗೆ ಅಂತ ಇರುವುದು ಕೆಲವೇ ಕೆಲವು ಸ್ನೇಹಿತರು ಮಾತ್ರ. ಈ ಉದ್ಯಮವೇ ನನ್ನ ಪ್ರಪಂಚ. ಈ ಪ್ರಯಾಣ ಸುಲಭವಾಗಿರಲಿಲ್ಲ. ಏರಿಳಿತಗಳು ನೋಡಿದ್ದೀನಿ, ಕಠಿಣ ಪರಿಶ್ರಮ ಮತ್ತು ಭರವಸೆ ಇಂದು ನನ್ನನ್ನು ಇಲ್ಲಿಗೆ ಕರೆತಂದಿದೆ" ಎಂದು ಹೇಳಿದರು,(ಏಜೆನ್ಸೀಸ್).