ಅಮೃತಬಳ್ಳಿ ಪುಸ್ತಕವನ್ನು ಶಿಕಾರಿಪುರದಲ್ಲಿ ಬೆಂಗಳೂರಿನ ನಿವೃತ್ತ ಪ್ರಾಚಾರ್ಯೆ ಅನುರಾಧಾ ಬಿಡುಗಡೆ ಮಾಡಿದರು. ಪ್ರವೀಣ್ ಮಹಿಷಿ, ಶೀಲಾ ಮಹಿಷಿ, ಡಾ. ಸಾಸ್ವೇಹಳ್ಳಿ ಸತೀಶ್, ಗೋಪಾಲ ಗೌಡ, ರವಿಕುಮಾರ್ ಇತರರಿದ್ದರು. 
ನ್ಯೂಸ್

ಮಾನವೀಯ ಮೌಲ್ಯದ ಜತೆ ಸಚ್ಚಾರಿತ್ರ್ಯ ಅವಶ್ಯ

ಶಿವಕುಮಾರ ಎಸ್.ಪಿ.

ಶಿಕಾರಿಪುರ: ಶಿಕ್ಷಣದಿಂದ ಮಾನವೀಯ ಮೌಲ್ಯಗಳ ಜತೆಗೆ ಸಚ್ಚಾರಿತ್ರ್ಯ ನಿರ್ಮಾಣವಾಗಬೇಕು. ಸಾಕ್ಷರತೆಯಿಂದ ಬದುಕು ಹಸನಾಗುತ್ತದೆ. ಇದರಿಂದ ಪ್ರಾಪ್ತವಾಗುವ ಜ್ಞಾನ ಹೊಸ ಚಿಂತನೆ ಕಡೆಗೆ ಕರೆದೊಯ್ಯುತ್ತದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ನಿವೃತ್ತ ಪ್ರಾಚಾರ್ಯ ಪ್ರವೀಣ್ ಮಹಿಷಿ ಸ್ನೇಹ ಬಳಗದಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಅಮೃತಬಳ್ಳಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಪಡೆದ ಮಾತ್ರಕ್ಕೆ ಅರ್ಹತೆ ಬರುವುದಿಲ್ಲ. ಪದವಿ ಮಾತ್ರ ಸಿಗುತ್ತದೆ. ನಮ್ಮಲ್ಲಿನ ಸಮಾಜಮುಖಿ ಚಿಂತನೆ ಮತ್ತು ಕಾರ್ಯಗಳಿಂದ ಶ್ರೇಷ್ಠರಾಗುತ್ತೇವೆ ಎಂದು ತಿಳಿಸಿದರು.
ಶಿಕ್ಷಣ ಪಡೆದವರಿಂದಲೇ ಹೆಚ್ಚು ತಪ್ಪು, ಅನಾಹುತ ಆಗುತ್ತಿರುವ ಕಾಲದಲ್ಲಿ ಸಮಾಜವನ್ನು ಸುಸ್ಥಿತಿಗೆ ತರುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪ್ರಸ್ತುತ ದುಡಿಯುವ ವರ್ಗವನ್ನು ಹೆಚ್ಚು ದೂರಲಾಗುತ್ತಿದೆ. ಆದರೆ ಸಮಾಜ ಹಾಳಾಗುತ್ತಿರುವುದು ವಿದ್ಯಾವಂತ ಜನರಿಂದ ಎಂಬುದು ಸತ್ಯ. ಶಿಕ್ಷಣ ಪಡೆದವರು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು ಎಂದರು.
ಶಿಕ್ಷಣದಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಸಮಾಜವನ್ನು ಸರಿದಾರಿಯಲ್ಲಿ ಕಟ್ಟುವ ಆಶಯದಿಂದ ಶಿಕ್ಷಕರು ಕ್ರಿಯಾಶೀಲರಾಗಲು ಇದು ಸುಸಮಯ. ಅವ್ಯವಸ್ಥೆಯತ್ತ ಸಾಗುತ್ತಿರುವ ಸಮಾಜವನ್ನು ಸುಸ್ಥಿತಿಗೆ ತರುವ ಕಾರ್ಯದಲ್ಲಿ ಎಲ್ಲರು ಪಾಲ್ಗೊಳ್ಳಬೇಕು ಎಂದು ಹೇಳಿದರು.
ಶಿಕ್ಷಕರದು ವೃತ್ತಿ ಮಾತ್ರವಲ್ಲ, ಜಗವ ಕಟ್ಟುವ ಅತ್ಯಂತ ಶ್ರೇಷ್ಠ ಎನಿಸುವ ಸೇವೆ. ಅಂತಹ ಸೇವೆಗೆ ಶಿಕ್ಷಕರು ಸಮರ್ಪಣೆ ಮಾಡಿಕೊಳ್ಳಬೇಕು. ಶಿಕ್ಷಕರು ಅಧ್ಯಯನಶೀಲರಾಗಬೇಕು. ಪಠ್ಯ, ಪಠ್ಯೇತರ ವಿಷಯಗಳಲ್ಲೂ ಆಸಕ್ತಿ ಹೊಂದಬೇಕು. ಶಿಕ್ಷಕರ ಸಂಕಲ್ಪ ಶಕ್ತಿಯಿಂದ ಮಕ್ಕಳ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.
ಅಮೃತಬಳ್ಳಿ ಪುಸ್ತಕವನ್ನು ಬೆಂಗಳೂರಿನ ನಿವೃತ್ತ ಪ್ರಾಚಾರ್ಯೆ ಅನುರಾಧಾ ಬಿಡುಗಡೆ ಮಾಡಿದರು. ಪ್ರವೀಣ್ ಮಹಿಷಿ, ಶೀಲಾ ಮಹಿಷಿ, ಉಪನ್ಯಾಸಕರಾದ ಡಾ. ಸಾಸ್ವೇಹಳ್ಳಿ ಸತೀಶ್, ಗೋಪಾಲ ಗೌಡ, ರವಿಕುಮಾರ್, ಅನಿತಾ ಜವಳಿ, ಗೋಪಾಲಕೃಷ್ಣ, ಶ್ವೇತಾ, ಶಿಲ್ಪಾ, ಶ್ರುತಿ, ಪತ್ರಕರ್ತ ಎಸ್.ಆರ್.ಹಾಲಸ್ವಾಮಿ ಇದ್ದರು.