ನ್ಯೂಸ್

ಬಂದಂತೆ ಸ್ವೀಕರಿಸಿ, ಅದೇ ಹೊಂದಿಸಿ ಬರೆಯಿರಿ: ಟ್ರೇಲರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್

ಬೆಂಗಳೂರು: ರಾಮೇನಹಳ್ಳಿ ಜಗನ್ನಾಥ್ ನಿರ್ದೇಶಿಸಿರುವ ಮೊದಲ ಚಿತ್ರ ‘ಹೊಂದಿಸಿ ಬರೆಯಿರಿ’ ಮುಂದಿನ ಶುಕ್ರವಾರ (ಫೆ.10) ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಇತ್ತೀಚೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇಂದೊಂದು ಬಾಲ್ಯವನ್ನು ನೆನಪಿಸುವ ಚಿತ್ರ ಎನ್ನುವ ನಿರ್ದೇಶಕ ಜಗನ್ನಾಥ್, ‘ಪರಿಸ್ಥಿತಿಗೆ ಹೊಂದಿಕೊಂಡು ಹೋಗಬೇಕು, ಬದುಕು ಬಂದಂತೆ ಸ್ವೀಕರಿಸಿ ಅನ್ನೋದು ಈ ಚಿತ್ರದ ಆಶಯ. ಐವರು ಸ್ನೇಹಿತರ 12 ವರ್ಷದ ಜರ್ನಿ ಚಿತ್ರದಲ್ಲಿದೆ. ತುಂಬ ಜನರಿಗೆ ಈ ಸಿನಿಮಾ ಕನೆಕ್ಟ್ ಆಗುತ್ತದೆ’ ಎಂದು ಮಾಹಿತಿ ಹಂಚಿಕೊಂಡರು.

ಪ್ರವೀಣ್ ತೇಜ್, ಭಾವನಾ ರಾವ್, ಸಯುಕ್ತಾ ಹೊರನಾಡು, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹದೇವ್, ಅರ್ಚನಾ ಜೋಯಿಸ್, ಅವಿನಾಶ್ ಶಠಮರ್ಷಣ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಒಂದೊಳ್ಳೆಯ ಅನುಭವ ನೀಡಿದ ಚಿತ್ರವಿದು ಎಂದು ಪ್ರವೀಣ್ ತೇಜ್ ಹೇಳಿದರೆ, ಸರಳ ಜೀವನವನ್ನು ನಾವೇ ಹೇಗೆ ಗೊಂದಲ ಮಾಡಿಕೊಳ್ಳುತ್ತೇವೆ ಎಂಬುದು ಈ ಚಿತ್ರದ ಕಥೆ ಎನ್ನುತ್ತಾರೆ ಭಾವನಾ ರಾವ್.

ಕೇವಲ ಮಾತಿನಲ್ಲಿ ಹೇಳಲಾಗದಷ್ಟು ಆಳವಾದ ಅಂಶಗಳಿವೆ ಎಂದು ಶ್ರೀ ಮಹಾದೇವ್ ಹೇಳಿದರೆ, ಈ ಚಿತ್ರದ ಪಾತ್ರಗಳು ಬದುಕಿಗೆ ತುಂಬ ಹತ್ತಿರ ಎನ್ನುತ್ತಾರೆ ಐಶಾನಿ ಶೆಟ್ಟಿ. ಅರ್ಚನಾ ಜೋಯಿಸ್ ಈ ಚಿತ್ರದಲ್ಲಿ ಸರಳಜೀವಿಯಾಗಿ ಕಾಣಿಸಿಕೊಂಡರೆ, ನವೀನ್ ಶಂಕರ್ ಗಟ್ಟಿತನ ಇರುವ ಹುಡುಗನ ಪಾತ್ರದಲ್ಲಿ ನಟಿಸಿದ್ದಾರಂತೆ.