ನ್ಯೂಸ್

ಹಕ್ಕಿ ಜ್ವರಕ್ಕೆ ಕೋಳಿಗಳ ಮಾರಣ ಹೋಮ, ವೈಜ್ಞಾನಿಕ ವಿಲೇವಾರಿ

ಚಿಕ್ಕಬಳ್ಳಾಪುರ: ಹಕ್ಕಿಜ್ವರ ಪ್ರಕರಣ ವರದಿಯಾದ ತಾಲೂಕಿನ ವರದಹಳ್ಳಿಯಲ್ಲಿನ ಎಲ್ಲ ಕೋಳಿಗಳನ್ನು ಮುಂಜಾಗ್ರತಾ ಕ್ರಮವಾಗಿ ಹಿಡಿಯುವ ಕಾರ್ಯಾಚರಣೆಯನ್ನು ಶುಕ್ರವಾರ ಕೈಗೊಳ್ಳಲಾಯಿತು.
ಉಪ ವಿಭಾಗಾಧಿಕಾರಿ ಡಿ.ಎಚ್.ಅಶ್ವಿನ್, ಪಶು ಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆಯ ರಂಗಪ್ಪ ನೇತೃತ್ವದಲ್ಲಿ ಸಾಕಾಣೆಯ ಎಲ್ಲ ಕೋಳಿಗಳನ್ನು ಪಡೆದುಕೊಳ್ಳಲಾಯಿತು. ಇದರ ನಡುವೆ ಕೆಲವರು ಆತಂಕದಲ್ಲಿ ಕೋಳಿಗಳನ್ನು ಬಿಟ್ಟು ಬಿಟ್ಟಿರುವ ಇಲ್ಲವೇ ಬೇರೆಯವರಿಗೆ ಕೊಟ್ಟು ಕಳುಹಿಸಿರುವ ಮಾತುಗಳು ಕೇಳಿ ಬಂದಿವೆ.

*ಬಾಡೂಟ ಸೇವನೆಯ ಆತಂಕ
ಮಹಾಶಿವರಾತ್ರಿ ಹಬ್ಬಕ್ಕೆ ಮೊದಲು ಮುನಿದ್ಯಾವರ, ಮನೆಯ ವಿಶೇಷ ಕಾರ್ಯಕ್ರಮ, ಪಾರ್ಟಿ ಹಿನ್ನೆಲೆಯಲ್ಲಿ ಕೋಳಿ ಮಾಂಸವನ್ನು ಸೇವಿಸಿದ್ದವರಲ್ಲಿ ಆತಂಕ ಮೂಡಿದೆ.
ಗ್ರಾಮದಲ್ಲಿದ್ದ ಬಹುತೇಕರು ಭಾನುವಾರ, ಮಂಗಳವಾರ ಬಾಡೂಟ ಸವಿದಿದ್ದಾರೆ. ಇದರ ನಡುವೆ ಗುರುವಾರ ಕೋಳಿಗಳಲ್ಲಿ ಹಕ್ಕಿ ಜ್ವರ ಇರುವುದು ದೃಢಪಟ್ಟಿದೆ. ಇದು ಆತಂಕಕ್ಕೆ ಕಾರಣವಾಗಿದ್ದು ಇದರ ನಿವಾರಣೆಗೆ ಆರೋಗ್ಯ ಇಲಾಖೆಯು ಮುಂದಾಗಿದೆ.

*ಏನಾದರೂ ಆಗಲಿ, ಕೋಳಿಗಳನ್ನು ಹಿಡಿಯರಿ
ಇಂದು ಏನಾದರೂ ಆಗಲಿ, ಗ್ರಾಮದಲ್ಲಿನ ಎಲ್ಲ ಕೋಳಿಗಳು ನಿಮ್ಮ ಬಳಿ ಇರಬೇಕು, ಯಾವುದನ್ನು ಬಿಡದೇ ಎಲ್ಲವನ್ನು ಹಿಡಿಯಿರಿ.
ಇದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಶುಕ್ರವಾರ ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆಯ ಉಪ ನಿರ್ದೇಶಕ ರಂಗಪ್ಪಗೆ ಸೂಚಿಸಿದ ಪರಿ. ಹಕ್ಕಿಜ್ವರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿದರು.

*ಮಾಲೀಕರಿಗೆ ಪರಿಹಾರ
ಪಶುಪಾಲನಾ ಮತ್ತು ಪಶು ವೈದ್ಯಕಿಯ ಇಲಾಖೆಯ ಗಣತಿ ಪ್ರಕಾರ ಗ್ರಾಮದಲ್ಲಿ 402 ಕೋಳಿಗಳಿವೆ. ಇವುಗಳನ್ನು ಹಿಡಿದುಕೊಂಡು ಸಾಯಿಸಿದ ಬಳಿಕ ವೈಜ್ಞಾನಿಕವಾಗಿ ವಿಲೇವಾರಿಗೊಳಿಸಲಾಗುತ್ತಿದೆ. ಗ್ರಾಮದ ಹೊರ ಭಾಗದಲ್ಲಿ ಸತ್ತ ಕೋಳಿಗಳನ್ನು ಹಾಕಿ ಹೂಳಲಾಗುತ್ತಿದೆ.
ಪ್ರಸ್ತುತ ಸಾಕಾಣೆಯ ಕೋಳಿಗಳನ್ನು ಇಲಾಖೆಯು ಪಡೆದುಕೊಂಡಿದ್ದು ಪ್ರತಿ ಕೋಳಿಗೆ ನಿಯಮಾನುಸಾರ ಸರ್ಕಾರದಿಂದ ಪರಿಹಾರವನ್ನು ಕೊಡಿಸಲಾಗುತ್ತದೆ. ಇದಕ್ಕೆ ಸೋಂಕು ದೃಢಪಟ್ಟ 90 ದಿನಗಳೊಗೆ ಕೋಳಿಗಳನ್ನು ಹಸ್ತಾಂತರಿಸಬೇಕು. ಬಳಿಕ ಯಾವುದೇ ಕಾರಣಕ್ಕೂ ನೆರವು ಸಿಗುವುದಿಲ್ಲ. ಸೋಂಕಿತ ಪ್ರದೇಶದಲ್ಲಿನ ಎಲ್ಲ ಕೋಳಿಗಳನ್ನು ಸಾಯಿಸಿ, ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತದೆ ಎಂದು ಪಶುಪಾಲನಾ ಮತ್ತು ವೈದ್ಯಕಿಯ ಇಲಾಖೆಯ ಉಪ ನಿರ್ದೇಶಕ ರಂಗಪ್ಪ ತಿಳಿಸಿದ್ದಾರೆ.

*ಗರ್ಭಿಣಿಯರ ಮೇಲೆ ನಿಗಾ
ಪ್ರಯೋಗಾಲಯದ ವರದಿ ಬರುತ್ತಿದ್ದಂತೆ ವರದಹಳ್ಳಿಯಲ್ಲಿ 432 ಜನಸಂಖ್ಯೆ ಇದ್ದು 92 ಮನೆಗಳಿವೆ. ಪ್ರತಿ ಕಡೆ ಹೋಗಿ, ಮಾಹಿತಿ ಸಂಗ್ರಹಿಸುವುದರ ಜತೆಗೆ ಅರಿವು ಮೂಡಿಸಲಾಗಿದೆ. ಗ್ರಾಮದಲ್ಲಿ ನಂಜು ನಿವಾರಕ ರಾಸಾಯಾನಿಕಗಳನ್ನು ಸಿಂಪಡಿಸಲಾಗಿದೆ.
ಇನ್ನು ಸೋಂಕು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಇಬ್ಬರು ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ. ಪ್ರಸ್ತುತ ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು

*ಜಿಲ್ಲೆಯಲ್ಲಿ ಅಲಾರ್ಟ್
ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಲಾರ್ಟ್ ಆಗಿದ್ದು ಹಕ್ಕಿ ಜ್ವರ ಪತ್ತೆಯಾದ ಪ್ರದೇಶದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಆರೋಗ್ಯ ಸಮೀೆ, ಕೋಳಿ ಸಾಕಾಣಿಕಾ ಕೇಂದ್ರಗಳಿಗೆ ಸೋಂಕಿನ ಮಾಹಿತಿ ರವಾನೆ, ನಂಜು ನಿವಾರಕಗಳಿಂದ ಶುಚಿತ್ವ ನಿರ್ವಹಣೆ, ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳ ದಾಸ್ತಾನು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ವಿಶೇಷ ಹಾಸಿಗೆ ವ್ಯವಸ್ಥೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಮುಖವಾಗಿ ಆಂಧ್ರ, ಮಹಾರಾಷ್ಟ್ರ ಸೇರಿದಂತೆ ಅನ್ಯ ರಾಜ್ಯಗಳಿಂದ ಬರುವ ಕೋಳಿ ಸಾಗಾಣೆಯ ವಾಹನಗಳ ಮೇಲೆ ನಿಗಾ ವಹಿಸಲಾಗುತ್ತಿದೆ.
ವರದಹಳ್ಳಿಯಲ್ಲಿ 30 ರಿಂದ 32 ಕೋಳಿಗಳು ಏಕಕಾಲದಲ್ಲಿ ಮೃತಪಟ್ಟಿವೆ. ಇವುಗಳ ಮಾದರಿಯನ್ನು ಬೆಂಗಳೂರಿನ ಭಾರತೀಯ ಪಶು ಆರೋಗ್ಯ ಹಾಗೂ ಜೈವಿಕ ಸಂಸ್ಥೆಯಲ್ಲಿ ಮತ್ತು  ಭೂಪಾಲ್ ನಲ್ಲಿರುವ ಹೈ ಸೆಕ್ಯೂರಿಟಿ ಪಶು ವೈದ್ಯಕಿಯ ಪ್ರಯೋಗಾಲಯಕ್ಕೆ ಪರೀಕ್ಷಿಸಿದ್ದು ಸಾವಿಗೆ ಹಕ್ಕಿ ಜ್ವರ ಕಾರಣ ಎನ್ನುವುದು ದೃಢಪಟ್ಟಿದೆ.