ಬೆಂಗಳೂರು: ಓಜೋನ್ ಉರ್ಬಾನಾ ಇನ್ಫ್ರಾ ಡೆವಲಪರ್ಸ್ ಪ್ರೈ.ಲಿ. ಸಿಎಂಡಿ ಹಾಗೂ ಪ್ರಮೋಟರ್ ಎಸ್. ವಾಸುದೇವನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದೆ.
ಮನೆ ಖರೀದಿದಾರರಿಂದ ₹ 927.22 ಕೋಟಿ ರೂ. ವಂಚನೆ ಹಾಗೂ ಹಣದ ಅಕ್ರಮ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪಿಎಂಎಲ್‌ಎ ಕಾಯ್ದೆಯಡಿ ಬಂಧಿಸಲಾಗಿದೆ.
ವಾಸುದೇವನ್ ಅವರನ್ನು ಅ.1ರಂದು ಬೆಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ತನಿಖೆಗಾಗಿ 14 ದಿನಗಳ ಇಡಿ ಕಸ್ಟಡಿಗೆ ನ್ಯಾಯಾಲಯ ನೀಡಿದೆ.
ಬೆಂಗಳೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಓಜೋನ್ ಉರ್ಬಾನಾ ಇನ್ಫ್ರಾ ಡೆವಲಪರ್ಸ್ ಹಾಗೂ ಅದರ ಪ್ರಮೋಟರ್‌ಗಳ ವಿರುದ್ಧ ಐಪಿಸಿ ಸೆಕ್ಷನ್ 419, 420 ಹಾಗೂ 120ಬಿ ಅಡಿಯಲ್ಲಿ ಹಲವು ಎಫ್‌ಐಆರ್‌ಗಳು ದಾಖಲಾಗಿದ್ದವು. ಈ ಪ್ರಕರಣದ ಆಧಾರದ ಮೇಲೆ ಇ.ಡಿ ಮನಿ ಲಾಂಡರಿಂಗ್ ತನಿಖೆ ಆರಂಭಿಸಿತ್ತು. ಇದಲ್ಲದೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐನ ಆರ್ಥಿಕ ಅಪರಾಧ ವಿಭಾಗ-1 ನವದೆಹಲಿಯಲ್ಲೂ ಕಂಪನಿ ಹಾಗೂ ಅದರ ಪ್ರಮೋಟರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.
ಇ.ಡಿ ತನಿಖೆಯ ಪ್ರಕಾರ, ಓಜೋನ್ ಉರ್ಬಾನಾ ಸಂಸ್ಥೆಯು ವಿವಿಧ ವಸತಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಮನೆ ಖರೀದಿದಾರರಿಗೆ ಹಸ್ತಾಂತರಿಸುವಲ್ಲಿ ವಿಫಲವಾಗಿದೆ. ನಿರ್ಮಾಣ ಪೂರ್ವ ಹಂತದಲ್ಲೇ ಫ್ಲ್ಯಾಟ್ ಬುಕ್ ಮಾಡುವ ಗ್ರಾಹಕರಿಗೆ ಮನೆ ಹಸ್ತಾಂತರಿಸುವವರೆಗೆ ಪ್ರೀ-ಕನ್‌ಸ್ಟ್ರಕ್ಷನ್ ಇಎಂಐ ಪಾವತಿಸುವುದಾಗಿ ಸಂಸ್ಥೆ ಭರವಸೆ ನೀಡಿತ್ತು ಎನ್ನಲಾಗಿದೆ. ಆದರೆ, ಯೋಜನೆಗಳನ್ನು ಪೂರ್ಣಗೊಳಿಸದೆ, ಮನೆಗಳ ಸ್ವಾಧೀನವನ್ನೂ ನೀಡದೆ ಹಾಗೂ ಗ್ರಾಹಕರು ಪಾವತಿಸಿದ್ದ ಹಣವನ್ನು ಮರುಪಾವತಿಸದೆ ನೂರಾರು ಕೋಟಿ ರೂ. ದುರುಪಯೋಗಪಡಿಸಿಕೊಂಡಿತ್ತು.
ಇ.ಡಿ ಬೆಂಗಳೂರು ವಲಯ ಕಚೇರಿ 2025ರ ಆ.1ರಂದು ಪಿಎಂಎಲ್‌ಎ ಸೆಕ್ಷನ್ 17ರಡಿ ವಿವಿಧ ಸ್ಥಳಗಳಲ್ಲಿ ಶೋಧ ನಡೆಸಿ ಹಲವು ಮಹತ್ವದ ದಾಖಲೆ ವಶಪಡಿಸಿಕೊಂಡಿತ್ತು. ಮುಂದಿನ ತನಿಖೆಯಲ್ಲಿ ಓಜೋನ್ ಮುಖ್ಯಸ್ಥ ಎಸ್. ವಾಸುದೇವನ್ ಅವರು ಮನೆ ಖರೀದಿದಾರರಿಗೆ ಒಟ್ಟು 927.22 ಕೋಟಿ ರೂ. ವಂಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದೆ. 2025ರ ಅಕ್ಟೋಬರ್ 4ರಂದು 423.378 ಕೋಟಿ ಮೌಲ್ಯದ ಸ್ಥಿರಾಸ್ತಿ ತಾತ್ಕಾಲಿಕವಾಗಿ ಜಪ್ತಿ ಮಾಡಿತ್ತು.
ಇದೇ ಪ್ರಕರಣದ ಮತ್ತೊಂದು ಹಂತದಲ್ಲಿ ಸಿಬಿಐನ ಆರ್ಥಿಕ ವಿಭಾಗದಿಂದ ನವದೆಹಲಿಯಲ್ಲಿ ಓಜೋನ್ ಇನ್ಫ್ರಾ ಡೆವಲಪರ್ಸ್ ಪ್ರೈ.ಲಿ., ಓಜೋನ್ ರಿಯಲ್ಟರ್ಸ್ ಪ್ರೈ.ಲಿ ಹಾಗೂ ಓಜೋನ್ ಪ್ರಾಜೆಕ್ಟ್ ಪ್ರೈ.ಲಿ ವಿರುದ್ಧ ಮೂರು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದೆ. ಈ ಮೂರು ಕಂಪನಿಗಳಲ್ಲೂ ಎಸ್. ವಾಸುದೇವನ್ ಸಾಮಾನ್ಯ ನಿರ್ದೇಶಕರಾಗಿರುವುದು ಇ.ಡಿ ತನಿಖೆಯಲ್ಲಿ ಉಲ್ಲೇಖಿಸಲಾಗಿದೆ. ಮನೆ ಖರೀದಿದಾರರಿಂದ ಸಂಗ್ರಹಿಸಲಾದ ಹಣ ವರ್ಗಾವಣೆ, ಯಾವ ಕಂಪನಿಗಳು ಹಾಗೂ ಯಾವ ವ್ಯಕ್ತಿಗಳ ಮೂಲಕ ಬೇರೆಡೆಗೆ ವರ್ಗಾಯಿಸಲಾಗಿದೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಇ.ಡಿ ತಿಳಿಸಿದೆ.