ನ್ಯೂಸ್

ಗೃಹ ಸಚಿವರ ಹೇಳಿಕೆ ಅವಿವೇಕತನದ ಪರಮಾವಧಿ: ವಿಜಯೇಂದ್ರ ವಾಗ್ದಾಳಿ | Decisive action urge

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ವಿಲವಾಗಿದೆ ಎಂದು ಟೀಕಿಸಿ, ಬಿಗಿಗೊಳಿಸಲು ಒತ್ತಾಯಿಸಿದರೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜೀನಾಮೆ ಕೊಡಬೇಕೆ ? ಎಂದು ಕೇಳಿರುವುದು ಅವಿವೇಕತನದ ಪರಮಾವಧಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಭಾನುವಾರ ವೀಕ್ಷಿಸಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಒಂದಿಲ್ಲೊಂದು ಕಡೆ ಹತ್ಯೆ, ದರೋಡೆ, ಅತ್ಯಾಚಾರ ಘಟನೆ ನಡೆಯುತ್ತಿವೆ. ಕಾನೂನು- ಸುವ್ಯವಸ್ಥೆ ಕುಸಿದಿದ್ದು, ಉದಯಗಿರಿ ಪೊಲೀಸ್ ಠಾಣೆ ಮೇಲೆ ದುಷ್ಕರ್ಮಿಗಳ ದಾಳಿಗೆ ಸರ್ಕಾರವೇ ನೇರ ಹೊಣೆಯಾಗಿದೆ ಎಂದು ಆರೋಪಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ಬಿಗಿಯಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇದಕ್ಕಾಗಿ ಜನರು ಆಶೀರ್ವಾದ ಮಾಡಿ ಅಧಿಕಾರ ನೀಡಿದ್ದಾರೆ. ಜವಾಬ್ದಾರಿ ಮರೆತು ಹೇಳಿಕೆ ನೀಡಿದರೆ ಕೊಲೆಗಡುಕರು, ದೇಶದ್ರೋಹಿಗಳಿಗೆ ಬಲ ನೀಡಿದಂತಾಗುತ್ತದೆ ಎಂದು ಎಚ್ಚರಿಸಿದರು.

ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯ

ಬೆಳಗಾವಿಯಲ್ಲಿ ಕೆಲವರ ಪುಂಡಾಟಿಕೆಯ ವಿರುದ್ಧವೂ ಕಿಡಿಕಾರಿದ ಅವರು, ರಾಜ್ಯದಲ್ಲಿ ನೆಲೆಯೂರಿ ನೆಲ, ಜಲ ಅನುಭವಿಸಿ ಅನ್ನ ತಿಂದು, ರಾಜ್ಯದ ವಿರುದ್ಧವೇ ಪಿತೂರಿ ಹೂಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಮ್ಮ ನೆಲದಲ್ಲಿ ಇದ್ದುಕೊಂಡು ಕನ್ನಡಿಗರ ತೇಜೋವಧೆ ಮಾಡುವುದು ಅಕ್ಷಮ್ಯ. ರಾಜ್ಯದ ವಿರುದ್ಧ ಸಂಚು ಸಹಿಸುವುದು ಸಾಧ್ಯವಿಲ್ಲ. ಕನ್ನಡಪರ ಹೋರಾಟಗಾರರ ಹೇಳಿಕೆಗಳನ್ನು ಗಮನಿಸಿರುವೆ. ಕನ್ನಡಿಗರ ವಿರುದ್ಧ ಷಡ್ಯಂತ್ರ ಮಾಡುವವರನ್ನು ಸರ್ಕಾರ ಹತ್ತಿಕ್ಕಬೇಕು ಎಂದರು.

ಪ್ರಧಾನಿ ಮೋದಿಯವರು ‘ಮನ್ ಕಿ ಬಾತ್’ನಲ್ಲಿ ಮಾನವ-ಪ್ರಾಣಿ ಸಂಘರ್ಷ ತಪ್ಪಿಸಲು ರಾಜ್ಯದ ಸೋಲಿಗರು ಕಂಡುಕೊಂಡ ಉಪಾಯ, ಮಹಿಳಾ ಸಬಲೀಕರಣ, ಪರೀಕ್ಷೆಗಳಿಗೆ ತಯಾರಿ, ಮಕ್ಕಳಲ್ಲಿ ಬೆಳೆಯುತ್ತಿರುವ ಬೊಜ್ಜು ಹೀಗೆ ‘ಆಡು ಮುಟ್ಟದ ಸೊಪ್ಪಿಲ್ಲ’ ಎನ್ನುವಂತೆ ಅನೇಕ ವಿಷಯಗಳತ್ತ ದೇಶದ ಜನರ ಗಮನಸೆಳೆದಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ವಿಶ್ಲೇಷಿಸಿದರು.