ಬೆಂಗಳೂರು: ಇಂದು ರಾಜ್ಯಾದ್ಯಾಂತ ಕಾವೇರಿ ವಿಚಾರವಾಗಿ ನಡೆಯುತ್ತಿರುವ ಕರ್ನಾಟಕ ಬಂದ್ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ನಾವು ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಬಂದ್ ಮಾಡುವವರಿಗೆ ಮನವಿ ಕೂಡ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕಾವೇರಿಗಾಗಿ ಕರ್ನಾಟಕ ಬಂದ್ : ಕಲಬುರಗಿಯಲ್ಲಿ ನೈತಿಕ ಬೆಂಬಲ ; ಎಂದಿನಂತೆ ಜನಜೀವನ ರೈತರ ಮುಖಂಡರ ಪ್ರತಿಭಟನೆ
"ಸರ್ಕಾರದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದೇನೆ. ಇದು ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂಬುದನ್ನು ಕೂಡ ತಿಳಿಸಿದ್ದೇವೆ. ಹಾಗಾಗಿ ಸಹಕರಿಸುತ್ತಾರೆ ಎಂದು ನಂಬಿದ್ದೇನೆ. ಸುಖಾಸುಮ್ಮನೆ ಯಾರನ್ನೂ ಬಂಧಿಸುವುದಿಲ್ಲ. ಕಾನೂನು ವಿರುದ್ಧ ನಡೆದುಕೊಂಡರೆ ಬೇರೆ ವಿಧಿಯಿಲ್ಲ" ಎಂದು ಹೇಳಿದರು.
"ದೇಶದಲ್ಲಿ ಬಂದ್ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ನಾವು ಸರಿಯಾದ ಕ್ರಮ ತೆಗೆದುಕೊಳ್ಳಲಿಲ್ಲ ಎಂದರೆ, ನ್ಯಾಯಾಲಯ ಸರ್ಕಾರವನ್ನು ಹೊಣೆ ಮಾಡುತ್ತದೆ. ಪ್ರತಿಭಟನೆಯಿಂದ ಜನ ಸಮುದಾಯಕ್ಕೆ ತೊಂದರೆ ಉಂಟಾಗುವುದರ ಜತೆಗೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗುತ್ತದೆ. ಒಂದೆಡೆ ಬರಗಾಲ ಎದುರಿಸುತ್ತಿದ್ದೇವೆ, ಅಲ್ಲೂ ಸಹ ಸಾಕಷ್ಟು ನಷ್ಟವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕ ಬಂದ್: ಇಂದಿನ ಕಾವೇರಿ ಪ್ರತಿಭಟನೆಯಲ್ಲಿ ಸುದೀಪ್, ದರ್ಶನ್, ಯಶ್ ಭಾಗಿಯಾಗ್ತಾರಾ? ಇಲ್ಲಿದೆ ಉತ್ತರ…
"ಬಂದ್ ಮಾಡುವುದರಿಂದ ಉಪಯೋಗವಿಲ್ಲ. ಲಾಭವಾಗುತ್ತದೆ ಎಂದಿದ್ದರೇ ಬಂದ್ ಮಾಡಿ ಎಂದು ಹೇಳಬಹುದಿತ್ತೇನೋ, ಇವತ್ತು ಸಿಡಬ್ಲ್ಯೂಎಂಎ (CWMA) ಮಿಟಿಂಗ್ ಇದೆ. ಅವರು ಏನು ತೀರ್ಮಾನ ಮಾಡುತ್ತಾರೆ ನೋಡಬೇಕು. ಕಾನೂನು ರೀತಿಯಲ್ಲಿ ನಡೆದುಕೊಳ್ಳಬೇಕು, ರಾಜ್ಯದ ಹಿತ ಕಾಪಡಬೇಕು. ಸಂಕಷ್ಟ ಸೂತ್ರ ನೀಡಿ ಎಂದು ಮನವಿ ಮಾಡುತ್ತೇವೆ. ತೀರ್ಪು ಬರಲಿ ಮುಂದೆ ಏನಾಗಲಿದೆ ಎಂಬುದನ್ನು ನೋಡೋಣ" ಎಂದು ಹೇಳಿದರು.