ಬೆಂಗಳೂರು: ಪಾದರಾಯಪುರದ ದಾಂಧಲೆ ಸಣ್ಣ ವಿಚಾರ ಅಲ್ಲವೇ ಅಲ್ಲ. ಗಂಭೀರವಾದ ಘಟನೆ. ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಚಿಸಿದ್ದಾರೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ನಿವಾಸಕ್ಕೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರನ್ನು ಕರೆಸಿ, ಈ ಘಟನೆಗೆ ಸಂಬಂಧಪಟ್ಟಂತೆ ಸಭೆ ನಡೆಸಲಾಗಿದೆ. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಗಲಭೆಯ ಬಗ್ಗೆ ತನಿಖೆ ನಡೆಯುತ್ತಿದೆ. ಇದರ ಹಿಂದಿನ ಕೈಗಳನ್ನು ಹುಡುಕುತ್ತಿದ್ದೇವೆ. ಗಲಾಟೆಯ ಹಿಂದೆ ಎಷ್ಟೇ ದೊಡ್ಡವರು ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಎಲ್ಲ ಸ್ಥಳಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಬಾಪೂಜಿನಗರ, ಪಾದರಾಯನಪುರ, ಟಿಪ್ಪುನಗರಗಳಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಪಾದರಾಯನಪುರದಲ್ಲಿ 19 ಪಾಸಿಟಿವ್ ಕೇಸ್ಗಳು ಇವೆ. ಗಲಾಟೆಯಲ್ಲಿ ಇರ್ಫಾನ್ ಪ್ರಮುಖ ಆರೋಪಿ. ಸಿಸಿಟಿವಿಗಳನ್ನೂ ಧ್ವಂಸ ಮಾಡಿದ್ದಾರೆ ಎಂದು ಗೃಹಸಚಿವರು ತುಳಿಸಿದ್ದಾರೆ.
ಗೃಹಸಚಿವ ಬಸವರಾಜಬೊಮ್ಮಾಯಿ ಅವರು ಪಾದರಾಯನಪುರಕ್ಕೆ ಭೇಟಿ ನೀಡಿ, ಕರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ, ಬಿಬಿಎಂಪಿ ಮತ್ತು ಪೊಲೀಸರಿಗೆ ಸಾಥ್ ನೀಡಿದ್ದಾರೆ. ಜೆಜೆನಗರ ಠಾಣೆಯಲ್ಲಿ ಸಭೆಯನ್ನೂ ನಡೆಸಿದ್ದಾರೆ. (ದಿಗ್ವಿಜಯ ನ್ಯೂಸ್)