ನ್ಯೂಸ್

ಗೃಹ ಸಚಿವ ಅಮಿತ್​​​ ಷಾ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು

ನವದೆಹಲಿ: ಕೋವಿಡ್​-19 ಚಿಕಿತ್ಸೆಗೆ ಒಳಗಾಗಿ ಆಗಸ್ಟ್​​ 31ರಂದು ಏಮ್ಸ್​ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದ ಗೃಹ ಸಚಿವ ಅಮಿತ್​ ಷಾ ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಮಿತ್​ ಷಾ ಅವರಿಗೆ ಆಗಸ್ಟ್​ 2ರಂದು ಕರೊನಾ ವೈರಸ್​ ಪಾಸಿಟಿವ್​ ಬಂದಿತ್ತು. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡ ಷಾ ಅವರಿಗೆ ಆಗಸ್ಟ್​ 14ರಂದು ಕರೊನಾ ನೆಗೆಟಿವ್​ ಆಗಿತ್ತು. ತದನಂತರದಲ್ಲಿ ಕೋವಿಡ್​ ನಂತರದ ಆರೈಕೆಗಾಗಿ ಆಗಸ್ಟ್​ 18ರಂದು ಮತ್ತೆ ಏಮ್ಸ್​ಗೆ ದಾಖಲಾಗಿ, 31ರಂದು ಡಿಸ್ಚಾರ್ಜ್​ ಆಗಿದ್ದರು. ಇದೀಗ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕರೊನಾ ವೈರಸ್​ನಿಂದ ಗುಣಮುಖರಾದ ಬಳಿಕ ಷಾ ಅವರಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಆಸ್ಪತ್ರೆಯಲ್ಲೇ ಉಳಿದರೆ ನಿರಂತರ ಮೇಲ್ವಿಚಾರಣೆಗೆ ಸಹಾಯವಾಗಲಿದೆ ಎಂಬ ಆಲೋಚನೆಯಿಂದ ಮತ್ತೊಮ್ಮೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ರಾತ್ರಿ 11 ಗಂಟೆಗೆ ಏಮ್ಸ್​ ಆಸ್ಪತ್ರೆಯಲ್ಲಿರುವ ಕಾರ್ಡಿಯೋ ನ್ಯೂರೋ ಟವರ್​ ವಿಭಾಗದಲ್ಲಿ ದಾಖಲಾಗಿದ್ದಾರೆಂದು ಏಮ್ಸ್​ ಮೂಲಗಳು ತಿಳಿಸಿವೆ. (ಏಜೆನ್ಸೀಸ್​)