ಕೋಲಾರದ ಎಸ್​ಎನ್​ಆರ್​ ಆಸ್ಪತ್ರೆಯಲ್ಲಿ ಸ್ತನ ಕ್ಯಾನ್ಸರ್​ ಪತ್ತೆ ಯಂತ್ರವನ್ನು ಸಚಿವ ದಿನೇಶ್​ ಗುಂಡೂರಾವ್​ ಉದ್ಘಾಟಿಸಿದರು. ಕೊತ್ತೂರು ಜಿ.ಮಂಜುನಾಥ್​, ಎಂ.ಎಲ್​.ಅನಿಲ್​ ಕುಮಾರ್​, ಇಂಚರ ಗೋವಿಂದರಾಜು ಇದ್ದರು. 
ನ್ಯೂಸ್

ಎಲ್ಲರಿಗೂ ದೊರಕಲಿ ಗೃಹ ಆರೋಗ್ಯ

ಕೋಲಾರ: ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯಿಂದಲೇ ಜಾರಿಗೆ ತಂದಿರುವ ಗೃಹ ಆರೋಗ್ಯ ಯೋಜನೆಯಿಂದ ಯಾರೊಬ್ಬರೂ ವಂಚಿತವಾಗದಂತೆ ಎಚ್ಚರವಹಿಸುವ ಮೂಲಕ ಗುರಿ ಸಾಧನೆ ಮಾಡಬೇಕು ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಹೇಳಿದರು.

ನಗರದ ಎಸ್​ಎನ್​ಆರ್​ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಯೋಜನೆಗೆ ಚಾಲನೆ ನೀಡಿ ಮೂರು ತಿಂಗಳು ಕಳೆದಿದ್ದು, ಇದುವರೆಗೂ ಶೇ.60 ಸಾಧನೆಯಾಗಿದೆ, ಮುಂದಿನ ಮೂರು ತಿಂಗಳೊಳಗೆ ಗುರಿ ಸಾಧನೆಯಾಗಬೇಕು ಎಂದು ಸೂಚಿಸಿದರು.

ಮೊದಲು ಜನರಲ್ಲಿರುವ ಗೊಂದಲ ನಿವಾರಿಸಿ, ವ್ಯಾಪಕ ಪ್ರಚಾರ ಮಾಡಬೇಕು, ಸಾಧನೆ ಮಾಡಿದ್ದೇವೆ ಎಂದು ಅಂಕಿ&ಅಂಶ ತೋರಿಸಬೇಡಿ. ಯೋಜನೆಯ ಉದ್ದೇಶ ಈಡೇರಿಸಬೇಕು. ಆರೋಗ್ಯ ತಪಾಸಣೆ ವೇಳೆ ಕಂಡು ಬರುವ ಕಾಯಿಲೆಗೆ ಎಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ತಿಳಿ ಹೇಳಿ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶ್ರೀನಿವಾಸ್​ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 164 ತಂಡಗಳು, ಒಟ್ಟು 2,21,412 ಮನೆಗಳಿಗೆ ಭೇಟಿ ನೀಡಿ, 1,71,494 ಲಾನುಭವಿಗಳ ತಪಾಸಣೆ ನಡೆಸುವ ಗುರಿ ಹೊಂದಿದ್ದು, ಇದುವರೆಗೂ 1,48,111 ಮಂದಿಗೆ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧ ತಲುಪಿಸಲಾಗಿದೆ ಎಂದು ತಿಳಿಸಿದರು.

ತಂಡದ ಸಿಬ್ಬಂದಿಗೆ ಮನೆಗಳಿಗೆ ಭೇಟಿ ನೀಡಿದಾಗ ಕೆಲವರು ಲಭ್ಯವಾಗುತ್ತಿಲ್ಲ, ಅಂತಹವರನ್ನು ಮತ್ತೆ ಭೇಟಿ ನೀಡಿ ತಪಾಸಣೆ ನಡೆಸುತ್ತಿದ್ದಾರೆ. ಬಾಕಿ ಮನೆಗಳಿಗೆ ಭೇಟಿ ಮಾಡಿ ಶ್ರೀ ಗುರಿ ಸಾಧನೆ ಮಾಡಲಾಗುವುದು. ಜತೆಗೆ ಅಧಿಕಾರಿಗಳು ಸಹ ಗ್ರಾಮಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​, ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ, ಜಿ.ಪಂ ಸಿಇಒ ಪ್ರವಿಣ್​ ಬಿ.ಬಾಗೇವಾಡಿ, ಎಸ್ಪಿ ಬಿ.ನಿಖಿಲ್​, ನಗರಸಭೆ ಅಧ್ಯೆ ಲಕ್ಷ್ಮೀದೇವಮ್ಮ ಇದ್ದರು.

* ಸಿಎಸ್​ಆರ್​ನಲ್ಲಿ ಆಂಬುಲೆನ್ಸ್​

ಸಂಸದ ಎಂ.ಮಲ್ಲೇಶ್​ ಬಾಬು ಮಾತನಾಡಿ, ಜಿಲ್ಲೆಯಲ್ಲಿ 108 ಆಂಬುಲೆನ್ಸ್​ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಆದ್ದರಿಂದ ಸಿಎಸ್​ಆರ್​ ಅನುದಾನದಲ್ಲಿ ಆಂಬುಲೆನ್ಸ್​ ಕೊಡಿಸಲು ಸಿದ್ಧವಿದ್ದು, ಚಾಲಕರನ್ನು ನೇಮಕ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ರೋಗ್ಯಾಧಿಕಾರಿ ಡಾ.ಶ್ರೀನಿವಾಸ್​ ಮಾತನಾಡಿ, ಜಿಲ್ಲೆಯಲ್ಲಿ 20 ವಾಹನ ಇದ್ದು, ಒಂದು ರಿಪೇರಿಯಾಗಿದೆ ಎಂದು ತಿಳಿಸಿದರು. ಆಗ ಸಚಿವರು, ಏಜೆನ್ಸಿ ಅವರೇ ಚಾಲಕರನ್ನು ನಿಯೋಜನೆ ಮಾಡಬೇಕು, ಕೆಲಸ ಮಾಡದೆ ಇರುವ ವಾಹನಗಳನ್ನು ಬದಲಾಯಿಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು, ಸಿಎಸ್​ಆರ್​ ವಿನಿಯೋಗಿಸಿಕೊಳ್ಳಿ ಎಂದು ಸೂಚಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಇಲಾಖೆ ಆಯುಕ್ತ ಶಿವಕುಮಾರ್​ ಮಾತನಾಡಿ, ಚಾಲಕರು ಕೆಲಸದ ವಿಚಾರದಲ್ಲಿ ನ್ಯಾಯಾಲಯದ ಮೋರೆ ಹೋಗಿದ್ದು, ಇನ್ನು ಇತ್ಯರ್ಥವಾಗಿಲ್ಲ. ಬೇರೆ ಚಾಲಕರನ್ನು ಆದ್ಯತೆ ಮೇರೆಗೆ ನೇಮಕ ಮಾಡಿಕೊಳ್ಳಲಾಗುವುದು ಎಂದರು.

* ನಿಯಮ ಸಡಿಲೀಕರಣಗೊಳಿಸಿ

ಕ್ಯಾನ್ಸರ್​ ಕಾಯಿಲೆ ಪತ್ತೆ ಹಚ್ಚಲು ರೋಗಿಗಳು ಖುದ್ದು ಆಸ್ಪತ್ರೆಗೆ ಬರಬೇಕಾಗಿದೆ. ಇದರಿಂದಾಗಿ ತಾಲೂಕಿಗೆ ಒಂದರಂತೆ ಮೊಬೈಲ್​ ತಪಸಣಾ ವಾಹನ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ ಎಂದು ವಿಧಾನ ಪರಿಷತ್​ ಸದಸ್ಯ ಇಂಚರ ಗೋವಿಂದರಾಜು ತಿಳಿಸಿದರು.

ಎಂಆರ್​ಐ, ಸಿಟಿ ಸ್ಕಾ$ನ್​ ಮಾಡಿಸಲು ದಿನಗಟ್ಟಲೇ ಕಾಯಬೇಕಾದ ಪರಿಸ್ಥಿತಿ ಇದೆ. ಇಲ್ಲಿನ ರೋಗಿಗಳಿಗೆ ಸ್ಕಾ$ನ್​ ಅವಶ್ಯಯಿದ್ದರೆ, ಬೆಂಗಳೂರಿನಲ್ಲಿರುವವರು ಅನುಮೋದನೆ ನೀಡಬೇಕು ಎಂದು ತಿಳಿಸಿದರು. ಸಚಿವರು ಪ್ರತಿಕ್ರಿಯಿಸಿ. ಸುಕಾಸುಮ್ಮನೆ ಸ್ಕಾ$ನ್​ಗೆ ಬರುತ್ತಿದ್ದರು, ಇದು ದುರುಪಯೋಗ ಸಹ ಆಗುತ್ತಿತ್ತು, ಇದನ್ನು ತಡೆಗಟ್ಟಲು ಕ್ರಮವಹಿಸಲಾಗಿದ್ದು, ತುರ್ತು ಸಂದರ್ಭ ಇದ್ದರೆ ಸ್ಕಾ$ನ್​ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

* ಆರೋಗ್ಯ ಸಾಮಗ್ರಿ ಖರೀದಿಗೂ ದುಡ್ಡಿಲ್ಲವೇ?

ವ್ಯಕ್ತಿಯೊಬ್ಬರಿಗೆ ಅಪಘಾತವಾಗಿ ಮೂಳೆ ಮುರಿದುಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಎರಡ್ಮೂರು ತಿಂಗಳಿಂದ ಆಸ್ಪತ್ರೆಯಲ್ಲೇ ಇದ್ದಾರೆ. ರಾಡ್​, ನೆಟ್​ಗೂ ಕಾಸಿಲ್ಲವೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯ ಅಕೌಂಟೆಂಟ್​ಅನ್ನು ಸಭೆಗೆ ಕರೆಸಿದ ಸಚಿವ ಗುಂಡೂರಾವ್​ ಅವರು, ಎಬಿಆರ್​ಕೆ ಅಡಿ ಸಾಕಷ್ಟು ಹಣ ಮಂಜೂರು ಮಾಡಲಾಗುತ್ತಿದೆ. ಏಕೆ ಅಗತ್ಯ ವಸ್ತುಗಳ ಸರಬರಾಜು ಆಗುತ್ತಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಕೌಂಟೆಂಟ್​, ಟೆಂಡರ್​ದಾರನಿಗೆ ಬಿಲ್​ ಪಾವತಿಯಾಗಿಲ್ಲ, ಆದ್ದರಿಂದ ಸಾಮಗ್ರಿಗಳ ಸರಬರಾಜು ನಿಲ್ಲಿಸಿದ್ದಾರೆ ಎಂದು ಹೇಳಿದರು. ಇದಕ್ಕೆ ಗರಂ ಆದ ಸಚಿವರು, ಸಬೂಬು ಹೇಳಬೇಡಿ, ನಿಮ್ಮದೇನು ಅಜೆಸ್ಟ್​ಮೆಂಟ್​ ಇಟ್ಟುಕೊಂಡು ರೋಗಿಗಳಿಗೆ ತೊಂದರೆ ಕೊಡಬೇಡಿ, ಮೊದಲು ಬೇಕಾಗಿರುವ ವಸ್ತುಗಳನ್ನು ತಂದು ಕೊಡಿ ಎಂದು ತಾಕೀತು ಮಾಡಿದರು.

* ಪಿಎಚ್​ಸಿ ಮೇಲ್ದರ್ಜೆಗೇರಿಸಲು ಭರವಸೆ

ಕೋಲಾರ ಕ್ಷೇತ್ರದ ವಕ್ಕಲೇರಿ ಹೋಬಳಿ ಕೇಂದ್ರದಲ್ಲಿ ಜನ ಸಂಖ್ಯೆಯೂ ಹೆಚ್ಚಾಗಿದ್ದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಕೇಂದ್ರವನ್ನಾಗಿ ಮೇಲ್ದರ್ಜೇಗೆ ಏರಿಸಬೇಕು ಎಂದು ಸಭೆಯಲ್ಲಿ ಶಾಸಕ ಕೊತ್ತೂರು ಜಿ.ಮಂಜುನಾಥ್​ ಸಚಿವರಿಗೆ ಪ್ರಸ್ತಾವ ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ದಿನೇಶ್​ ಗುಂಡೂರಾವ್​, ಪರಿಶೀಲಿಸಿ ವರದಿ ಸಲ್ಲಿಸಿದರೆ ಮೇಲ್ದರ್ಜೇಗೇರಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

* ಪ್ರತಿಧ್ವನಿಸಿದ ವಿಜಯವಾಣಿ ವರದಿ

ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳ ಸಮಸ್ಯೆ ಕುರಿತು ವಿಜಯವಾಣಿಯಲ್ಲಿ ಹಂತ ಹಂತವಾಗಿ ವರದಿಗಳನ್ನು ಪ್ರಟಿಸುವ ಮೂಲಕ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳ, ಸರ್ಕಾರ, ಇಲಾಖೆಯ ಅಧಿಕಾರಿಗಳ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಸಭೆಯಲ್ಲೂ ಸಹ ವ್ಯಾಪಕ ಚರ್ಚೆಯಾಗಿ ಲೋಪ ಸರಿಪಡಿಸಿಕೊಳ್ಳಬೇಕು ಎಂದು ಸಚಿವ ದಿನೇಶ್​ ಗುಂಡೂರಾವ್​ ಅಧಿಕಾರಿಗಳಿಗೆ ತಾಕೀತು ಮಾಡಿದರು.