ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಅವರು ನ.30ರಂದು ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಳ್ಳುವರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಗುರುವಾರ ಬೆಳಗ್ಗೆ 9.30ಕ್ಕೆ ಶಿವಮೊಗ್ಗದ ಸವಳಂಗ ಸರ್ಕಲ್‌ನಲ್ಲಿ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸುವರು.
ನಂತರ ಶಿಕಾರಿಪುರದ ರಾಘವೇಂದ್ರಸ್ವಾಮಿ ಮಠ, ಹುಚ್ಚರಾಯಸ್ವಾಮಿ ದೇವಸ್ಥಾನ, ತೇರುಬೀದಿ ಮಾರ್ಗವಾಗಿ ಬೈಕ್ ರ‌್ಯಾಲಿ ನಡೆಯಲಿದೆ. ಸಂತೆ ಮೈದಾನದಲ್ಲಿ ಮಧ್ಯಾಹ್ನ ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಆರಗ ಜ್ಞಾನೇಂದ್ರ, ಸಂಸದ ಬಿ.ವೈ.ರಾಘವೇಂದ್ರ ಮತ್ತಿತರರು ಈ ಸಮಾರಂಭದಲ್ಲಿ ಭಾಗವಹಿಸುವರು.
ಸಂಜೆ 4.30ಕ್ಕೆ ಶಿಕಾರಿಪುರದ ತಾ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ, ಬರ ನಿರ್ವಹಣೆಯ ಬಗ್ಗೆ ಅಧಿಕಾರಿಗಳ ಜತೆಗೆ ಸಭೆ ನಡೆಸುವರು. ರಾತ್ರಿ 8ಕ್ಕೆ ತಾಳಗುಂದದ ವೀರಭದ್ರೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ, 9.15ಕ್ಕೆ ಶಿಕಾರಿಪುರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, 10ಕ್ಕೆ ಶಿವಮೊಗ್ಗದಿಂದ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.